

ಚಾಮರಾಜನಗರ: ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಇಸ್ಪೀಟ್ ದಂಧೆ ಮತ್ತು ರಿಕ್ರಿಯೆಷನ್ ಕ್ಲಬ್ ಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಚಾಮರಾಜನಗರ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಶಿವಕುಮಾರ್ ಆರೋಪಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ರಾಜ್ಯದಲ್ಲಿ ಇಸ್ವೀಟ್ ದಂಧೆ ನಿಷೇಧವಾಗಿದ್ದರೂ ಕೂಡ ಜಿಲ್ಲೆಯಲ್ಲಿ ಅಕ್ರಮ ಇಸ್ಪೀಟ್ ದಂಧೆ ಹಾಗೂ ಅಕ್ರಮ ರೀಕ್ರಿಯೇಷನ್ ಕ್ಲಬ್ ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಅಕ್ರಮ ದಂಧೆಗಳನ್ನು ಬಲಾಡ್ಯರು ನಡೆಸುತ್ತಿದ್ದಾರೆ. ಈ ದಂಧೆಯಿಂದ ಬಡ ಕುಟುಂಬ ಗಳು ಹಣ ಕಳೆದುಕೊಂಡು ಬೀದಿಪಾಲಾಗುತ್ತಿವೆ. ಹೀಗಿದ್ದರೂ ಸಹ ಪೊಲೀಸ್ ವ್ಯವಸ್ಥೆ ಕೈಕಟ್ಟಿ ಕುಳಿತಿದೆ ಎಂದು ಪೊಲೀಸ್ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ ಮನೆಗಳ್ಳತನ, ಸರಗಳ್ಳತನ ಸೇರಿದಂತೆ ಇತರೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದರೂ ಸಹ ಜಿಲ್ಲಾ ಪೊಲೀಸ್ ವ್ಯವಸ್ಥೆ ಈ ಅಕ್ರಮ ದಂಧೆಗಳನ್ನು ತಡೆಗಟ್ಟಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸುವುದರ ಬದಲು ಈ ಸಮಾಜಘಾತಕ ವ್ಯಕ್ತಿಗಳ ಜತೆ ಕೈಜೋಡಿಸಿದೆ. ಇದು ಖಂಡನೀಯ. ಹೀಗಾಗಿ ಅಕ್ರಮ ದಂಧೆಗಳನ್ನು ನಡೆಸುತ್ತಿರುವ ವ್ಯಕ್ತಿಗಳ ಬೆನ್ನೆಲುಬಾಗಿರುವ ಅಧಿಕಾರಿಗಳ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಣೇಶ್, ಕಾಂತರಾಜು ಹಾಜರಿದ್ದರು.