ಇಸ್ಪೀಟ್ ಜಗಳದಲ್ಲಿ ಕೊಲೆ, ಬಂಧನ

arrest
Published on

ಬೀದರ್: ಕಳೆದ ದಿ. 13ರಂದು ಇಲ್ಲಿನ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದ್ದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಳ್ಳುರ್ ಗ್ರಾಮದ ಮಾರುತಿ ಝರಣಪ್ಪ(36) ಎಂಬಾತನ ಕೊಲೆ ಪ್ರಕರಣ ಭೇದಿಸುವಲ್ಲಿ ಗಾಂಧಿಗಂಜ್ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಭಾಲ್ಕಿ ತಾಲೂಕಿನ ಮೆಥಿಮೇಳಕುಂದಾ ವಾಡಿ ಗ್ರಾಮದ ಜೀತೇಂದ್ರ ವಾಘಮಾರೆ (30) ಎಂಬಾತನನ್ನು ಸೋಮವಾರ ಬಂಧಿಸಿದ್ದಾರೆ.

ಮಾರುತಿ ಕಳೆದ ಐದಾರು ವರ್ಷದಿಂದ ಇಲ್ಲಿ ಬಾಡಿಗೆಯಿಂದ ಉಳಿದಿದ್ದು, ಗಾಂಧಿ ಗಂಜ್ ನಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದನು. ಜೀತೇಂದ್ರ ಸಹ ಹಮಾಲಿ ಕೆಲಸ ಮಾಡುತ್ತಿದ್ದು, ಈತನ ಪಕ್ಕದ ಮನೆಯಲ್ಲೇ ಬಾಡಿಗೆಯಿಂದ ಇದ್ದ. 13ರಂದು ರಾತ್ರಿ ಇಬ್ಬರೂ ಇಸ್ಪೀಟ್ ಆಡಿದ್ದಾರೆ. ಈ ಸಂಬಂಧ ಇಬ್ಬರಲ್ಲಿ ಜಗಳವಾಗಿದೆ. ಜೀತೇಂದ್ರನು ಇದೇ ಸಿಟ್ಟಿನಲ್ಲಿ ತಡರಾತ್ರಿ ಮನೆಯಲ್ಲಿ ಮಲಗಿದ್ದ ಮಾರುತಿ ಮೇಲೆ ಕಲ್ಲು, ಬಡಿಗೆಯಿಂದ ದಾಳಿ ನಡೆಸಿದ್ದಾನೆ. ತೀವ್ರ ಗಾಯಗೊಂಡ ಮಾರುತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಪ್ರಕರಣ ತನಿಖೆ ನಡೆಸಿದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಸಿದ್ಧಾರ್ಥ ಗೋಯಲ್ ಹಾಗೂ ಪಿಎಸ್ಐ ಮಂಜನಗೌಡ ಪಾಟೀಲ್ ನೇತೃತ್ವದ ತಂಡ, ಚಾಕಚಕ್ಯತೆಯಿಂದ ವಿಚಾರಣೆ ನಡೆಸಿ ಘಟನೆ ನಡೆದ ಒಂಭತ್ತು ದಿನದಲ್ಲೇ ಕೃತ್ಯ ಎಸಗಿದ ಜೀತೇಂದ್ರನನ್ನು ಹಿಡಿದಿದೆ. ಎಸ್ಪಿ ನಾಗೇಶ, ಹೆಚ್ಚುವರಿ ಎಸ್ಪಿ ಡಾ.ಗೋಪಾಲ, ಡಿವೈಎಸ್ಪಿ ಬಸವೇಶ್ವರ ಹೀರಾ, ಸಿಪಿಐ ಮಲ್ಲಮ್ಮ ಚೌಬೆ ಮಾರ್ಗದರ್ಶನದಲ್ಲಿ ಈ ತಂಡ ಕಾರ್ಯಾಚರಣೆ ನಡೆಸಿದೆ.

2.47 ಲಕ್ಷ ರೂ. ಜಪ್ತಿ
ಇಲ್ಲಿನ ಗಾಂಧಿಗಂಜ್ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದ ಅಡ್ಡೆ ಮೇಲೆ ದಾಳಿ ಮಾಡಿರುವ ಪೊಲೀಸರು ರೂ.2.47 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಮಂಜನಗೌಡ ಪಾಟೀಲ್ ನೇತೃತ್ವದ ತಂಡ ದಾಳಿ ಮಾಡಿ, ದೊಡ್ಡ ಮೊತ್ತದ ನಗದು ಜಪ್ತಿ ಮಾಡಿಕೊಂಡಿದೆ. ನಗರದ ವಿವಿಧ ಬಡಾವಣೆಯ 8 ಜನರ ವಿರುದ್ಧ ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net