ಇಸ್ಕಾನ್​ನಲ್ಲಿ ಜ. 2ರಂದು ವೈಕುಂಠ ಏಕಾದಶಿ ಸಂಭ್ರಮ

Krishna
Published on

ಹುಬ್ಬಳ್ಳಿ: ಇಲ್ಲಿಯ ರಾಯಾಪುರ ಬಳಿಯ ಇಸ್ಕಾನ್ ಮಂದಿರದಲ್ಲಿ ವೈಕುಂಠ ಏಕಾದಶಿ ನಿಮಿತ್ತ ಜನವರಿ 2ರಂದು ವೈವಿಧ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಇಸ್ಕಾನ್ ಹುಬ್ಬಳ್ಳಿ ಧಾರವಾಡ ಅಧ್ಯಕ್ಷ ರಾಜೀವ ಲೋಚನ ದಾಸ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಕುಂಠ ಏಕಾದಶಿಯ ವಿಶಿಷ್ಟ ದಿನದಂದು ಇಸ್ಕಾನ್ ದೇವಸ್ಥಾನದಲ್ಲಿ ವೈಕುಂಠ ದ್ವಾರವೆಂಬ ವಿಶೇಷ ಬಾಗಿಲು ತೆರೆಯಲಾಗುತ್ತಿದೆ. ಈ ಬಾಗಿಲು ಪ್ರವೇಶ ಮಾಡಿದವರು ಆಧ್ಯಾತ್ಮಿಕ ಉನ್ನತಿ ಹೊಂದುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಹಾಗಾಗಿ ಈ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು.

ಸ್ವರ್ಣ ರಂಗಿನಿಂದ ಲೇಪಿತವಾದ ಭವ್ಯ ವೈಕುಂಠ ದ್ವಾರವನ್ನು ದೇವಸ್ಥಾನದ ಪ್ರವೇಶ ಸ್ಥಳದಲ್ಲಿ ಸ್ಥಾಪಿಸಲಾಗುವುದು. 15 ಅಡಿ ಎತ್ತರ ಹಾಗೂ 11 ಅಡಿ ಅಗಲದ ವೈಕುಂಠ ದ್ವಾರದ ಪೂಜೆಯು ಜ. 2ರಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ.

ದೇವಾಲಯವನ್ನು ವೈಕುಂಠಕ್ಕೆ ಹೋಲಿಕೆಯಾಗುವಂತೆ ಸಜ್ಜುಗೊಳಿಸಲಾಗುತ್ತಿದೆ. ಇಡೀ ದೇವಾಲಯವನ್ನು ಬಣ್ಣ ಬಣ್ಣದ ಸುಗಂಧಿತ ಪುಷ್ಪಗಳಿಂದ ಸಿಂಗರಿಸಲಾಗುತ್ತಿದೆ. ವೈಕುಂಠ ದ್ವಾರವು ಬೆಳಗ್ಗೆ 8ರಿಂದ ರಾತ್ರಿ 9 ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ ಎಂದು ತಿಳಿಸಿದರು.

ಲಕ್ಷಾರ್ಚನೆ: ಮಂದಿರಕ್ಕೆ ಭೇಟಿ ನೀಡುವ ಭಕ್ತರು, ದಿನವಿಡಿ ಭಗವಂತನ ಒಂದು ಲಕ್ಷ ನಾಮಗಳನ್ನು ಜಪಿಸಲ್ಪಡುವ ಲಕ್ಷಾರ್ಚನೆ ಸೇವೆಯಲ್ಲಿ ಭಾಗವಹಿಸಬಹುದಾಗಿದೆ. ಈ ಸೇವೆಗಾಗಿ ಸುಂದರ ಶ್ರೀನಿವಾಸ ಗೋವಿಂದನ ಪ್ರತಿಮೆ ಸಜ್ಜುಗೊಳಿಸಲಾಗಿದೆ. ಸಂಜೆ 5ಕ್ಕೆ ವಿಶ್ವಶಾಂತಿಗಾಗಿ ವೆಂಕಟೇಶ್ವರ ಹೋಮವನ್ನು ನೆರವೇರಿಸಲಾಗುತ್ತಿದ್ದು, ಅನೇಕ ಭಕ್ತರು ಹೋಮದಲ್ಲಿ ಪಾಲ್ಗೊಳ್ಳುವರು.

ಭಗವಂತನನ್ನು ಸ್ತುತಿಸುವ ನೃತ್ಯ, ನಾಟಕ, ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 6ರಿಂದ ನಡೆಯಲಿವೆ. ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ನವೆಂಬರ್​ಗೆ ಪೂರ್ಣ: ಹುಬ್ಬಳ್ಳಿ- ಧಾರವಾಡ ಮಧ್ಯೆ ನಿರ್ವಿುಸಲಾಗುತ್ತಿರುವ ಭವ್ಯ ಇಸ್ಕಾನ್ ದೇವಸ್ಥಾನದ ಮೊದಲ ಹಂತದ ಕಾಮಗಾರಿಯು 2023ರ ನವೆಂಬರ್​ಗೆ ಪೂರ್ಣಗೊಳ್ಳಲಿದೆ. ವಿಶೇಷವಾಗಿ ಅನ್ನದಾನ ಹಾಲ್ ನಿರ್ವಿುಸಲಾಗಿದೆ. ಸುಮಾರು 55 ಕೋಟಿ ರೂ. ವೆಚ್ಚದ ದೊಡ್ಡ ಯೋಜನೆಯಲ್ಲಿ ಮೊದಲ ಹಂತದ 8.6 ಕೋಟಿ ರೂ. ಕೆಲಸ ಈ ವರ್ಷದಲ್ಲಿ ಪೂರ್ತಿಯಾಗಲಿದೆ. ಎರಡನೇ ಹಂತದಲ್ಲಿ ಶ್ರೀ ವೆಂಕಟೇಶ್ವರನ ವಿಗ್ರಹ ಸ್ಥಾಪನೆ, ಮೂರನೇ ಹಂತದಲ್ಲಿ ಅತಿಥಿ ಗೃಹ ನಿರ್ಮಾಣ ಮುಂತಾದ ಕೆಲಸಗಳು ನಡೆಯಲಿವೆ ಎಂದು ತಿಳಿಸಿದರು.

ಇಸ್ಕಾನ್ ಉಪಾಧ್ಯಕ್ಷ ರಘೋತ್ತಮ ದಾಸ, ರಾಮಗೋಪಾಲ ದಾಸ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net