

ಹುಬ್ಬಳ್ಳಿ : ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ ಹರೇ ರಾಮ ಹರೇ ರಾಮ ರಾಮರಾಮ ಹರೇಹರೇ... ಹೀಗೆಂದು ಸೇರಿದ್ದ ನೂರಾರು ಭಕ್ತರು ಶ್ರೀ ಕೃಷ್ಣ ಬಲರಾಮ ರಥ ಎಳೆಯುತ್ತಿದ್ದಂತೆ ನಗರದ ಬೀದಿಗಳಲ್ಲಿ ಭಕ್ತಿಯ ಹೊಳೆ ಹರಿಯಿತು. ಮಹಿಳೆಯರು, ಪುರುಷರು, ಯುವಕರು ಎಲ್ಲರೂ ಭಗವಾನ್ ಶ್ರೀಕೃಷ್ಣನ ನಾಮಸ್ಮರಣೆ ಮಾಡುತ್ತ ತೇರು ಎಳೆದು ಕೃತಾರ್ಥರಾದರು.
ರಥಯಾತ್ರೆ ಹಿನ್ನೆಲೆಯಲ್ಲಿ ನಗರದ ರಸ್ತೆಗಳನ್ನು ಸ್ವಚ್ಚಗೊಳಿಸಿ ರಂಗೋಲಿ ಬಿಡಿಸಿ, ಹೂಗಳಿಂದ ಅಲಂಕರಿಸಲಾಗಿತ್ತು. ರಥವು ಬರುತ್ತಿದ್ದಂತೆ ಭಕ್ತರು ಹೂಮಳೆ ಗರೆದು ಸ್ವಾಗತಿಸಿದರು. ಭಕ್ತಿಯಿಂದ ಕೈ ಮುಗಿದು ನಮಿಸಿದರು.
ಇಲ್ಲಿಯ ನೆಹರು ಮೈದಾನದಿಂದ ಆರಂಭವಾದ ರಥಯಾತ್ರೆಯು ಲ್ಯಾಮಿಂಗ್ಟನ್ ರೋಡ್, ಅಂಬೇಡ್ಕರ್ ಸರ್ಕಲ್, ಸ್ಟೇಶನ್ ರಸ್ತೆ, ಗಣೇಶಪೇಟ, ಮರಾಠ ಗಲ್ಲಿ, ಕೊಪ್ಪಿಕರ ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್, ರಾಣಿ ಚನ್ನಮ್ಮ ಸರ್ಕಲ್, ಮಿನಿ ವಿಧಾನಸೌಧ ಮೂಲಕ ಹಾಯ್ದು ಪುನಃ ಮೈದಾನಕ್ಕೆ ಬಂದು ಸಮಾರೋಪಗೊಂಡಿತು.
ಯಾತ್ರೆಯುದ್ದಕ್ಕೂ ಶ್ರೀಕೃಷ್ಣ ಬಲರಾಮ ನಾಮಸ್ಮರಣೆ, ವಿವಿಧ ವಾದ್ಯಮೇಳದೊಂದಿಗೆ ಭಜನೆ, ಕೀರ್ತನೆಗಳು ಮೊಳಗಿದವು. ಅನೇಕ ಭಕ್ತರು ನೃತ್ಯ ಮಾಡುತ್ತ ಭಕ್ತಿ ಪರವಶರಾದರು. 40 ಅಡಿ ಎತ್ತರದ ವರ್ಣರಂಜಿತ ವೈಭವದ ರಥ ನಗರದಲ್ಲಿ ಸಂಚರಿಸಿ ಭಕ್ತರಲ್ಲಿ ಪುಳಕ ಉಂಟು ಮಾಡಿತು. ಹೂವು, ಟೆಂಗಿನಕಾಯಿ, ಹಣ್ಣು, ಹಂಪಲುಗಳನ್ನು ಭಕ್ತರು ಸಮರ್ಪಿಸಿದರು.
ಉದ್ಘಾಟನೆ: ರಥಯಾತ್ರೆಗೆ ಮುಂಚೆ ನೆಹರೂ ಮೈದಾನದಲ್ಲಿ ನಡೆದ ಉದ್ಘಾಟನೆ ಪೂರ್ವ ಸಮಾರಂಭದಲ್ಲಿ ಅತಿಥಿಯಾಗಿದ್ದ ಸ್ವರ್ಣಾ ಸಮೂಹ ಸಂಸ್ಥೆಯ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಅವರು, ಮಾನವ ಸೇವೆಯೇ ಮಾಧವ ಸೇವೆ ಎಂಬುದನ್ನು ಇಸ್ಕಾನ್ನವರು ಅವಳಿನಗರದಲ್ಲಿ ಅನ್ನದಾಸೋಹದ ಮೂಲಕ ನೆರವೇರಿಸಿದ್ದಾರೆ. ಮನುಷ್ಯನ ಜೀವನ ಸಾರ್ಥಕವಾಗಬೇಕಾದರೆ ಭಗವಂತನಲ್ಲಿ ಎಲ್ಲವನ್ನೂ ಅರ್ಪಿಸಿ ದೇವರು ಕೊಟ್ಟ ಕೆಲಸ ಸರಿಯಾಗಿ ಮಾಡಬೇಕು. ರಥಯಾತ್ರೆ ಆಯೋಜಿಸುವ ಮೂಲಕ ಭಗವಾನ್ ಶ್ರೀಕೃಷ್ಣನು ಭಕ್ತರ ಬಳಿಗೇ ಬಂದಂತಾಗಿದೆ ಎಂದರು.
ಆಯುರ್ವೆದ ಸೇವಾ ಸಮಿತಿಯ ಗೋವಿಂದ ಜೋಶಿ ಮಾತನಾಡಿ, ಧರ್ಮ ಜಾಗೃತಿಯಲ್ಲಿ ತೊಡಗಿರುವ ಇಸ್ಕಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀಕೃಷ್ಣನ ಪ್ರಜ್ಞೆ, ಧರ್ಮದ ತಿರುಳು ತಿಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಬೆಂಗಳೂರು ಇಸ್ಕಾನ್ನ ಮಧು ಪಂಡಿತ ದಾಸ್ ಅವರು, ಶ್ರೀಕೃಷ್ಣನ ಹೆಸರಲ್ಲೇ ಸರ್ವಶಕ್ತಿ ಅಡಗಿದೆ. ಸ್ಮರಣೆ ಮಾಡುವ ಮೂಲಕ ಶಕ್ತಿ ಪಡೆಯಬಹುದು ಎಂಬುದನ್ನು ಜಗತ್ತಿಗೆ ತಿಳಿಸಿಕೊಡಲಾಗುತ್ತಿದೆ ಎಂದರು.
ವಿಧ್ವಾನ್ ಶ್ರೀಧರಾಚಾರ್ಯ, ರಾಜೀವ ಲೋಚನದಾಸ, ಶ್ರೀರಾಮಕೃಷ್ಣ ದಾಸ, ರಾಮಗೋಪಾಲ ದಾಸ, ಜೀತೇಂದ್ರ ಮಜೇಥಿಯಾ ಇತರರು ಇದ್ದರು.