

ಬಸವಕಲ್ಯಾಣ: ಇಷ್ಠಲಿಂಗ ಪೂಜೆಯಿಂದ ಮನುಷ್ಯರ ಮನದ ಕಲ್ಪನಾ ಶಕ್ತಿ ಮತ್ತು ಸೃಜನಶೀಲತೆ ವೃದ್ಧಿಗೊಳ್ಳುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಹೇಳಿದರು.
ಅಂತಾರಾಷ್ಟಿಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವAತ ಹರಳಯ್ಯ ಪೀಠದ ಆಶ್ರಯದಲ್ಲಿ ಹರಳಯ್ಯ ಗವಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ಇಷ್ಠಲಿಂಗ ಯೋಗ ಹಾಗೂ ಶರಣು ಶರಣಾರ್ಥಿ ಸಮಾವೇಶದಲ್ಲಿ ಮಾತನಾಡಿ, ಇಷ್ಠಲಿಂಗಯೋಗದ ಅಂತಿಮ ಫಲಿತಾಂಶ ಲಿಂಗಾಂಗ ಸಾಮರಸ್ಯ. ಅಂಗದ ಜತೆಗೆ ಆತ್ಮದ ಉದ್ಧಾರ. ಮನುಷ್ಯ ಎಲ್ಲ ಕ್ಷೇತ್ರಗಳಲ್ಲಿ ಜಯವಾಗಿ ಪರಿಪೂರ್ಣ ಜೀವನ ಬಾಳುವ ವೈಜ್ಞಾನಿಕ ಮಾರ್ಗ ಇಷ್ಠಲಿಂಗ ಯೋಗದ ಸಾಧನೆ. ಇದನ್ನು ಅಳವಡಿಸಿಕೊಂಡು ಸುಖ ಅನುಭವಿಸಬೇಕು ಎಂದರು.
ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಂಗಮೇಶ್ವರ ಸ್ವಾಮೀಜಿ ಅನುಭಾವ ನೀಡಿ, ನಮ್ಮ ಮನಸ್ಸು ಎಲ್ಲ ಬಂಧನಗಳ ಭಾರ ಕಳೆದು ಮುಕ್ತವಾಗಬೇಕು. ಅವಿರಳಾನಂದ, ಪರಮಶಾಂತಿ ಅನುಭವಿಸಬೇಕು. ಮನುಷ್ಯ ಜೀವನ ದುಃಖದಿಂದ ಕೂಡಿದೆ. ಸುಖದ ಹಿಂದೆ ಹೋಗದೆ ದುಃಖದಿಂದ ದೂರಾಗಲು ಪ್ರಯತ್ನಿಸಬೇಕು. ತನ್ನ ಇಚ್ಛೆಗಳನ್ನು ಕಡಿಮೆ ಮಾಡಿ ಸಂತೃಪ್ತನಾಗಿ ಬಾಳಬೇಕು ಎಂಬುದೇ ಶರಣರ ಸಂದೇಶ ಎಂದರು.
ಸಾಹಿತಿ ಡಾ.ಸೋಮನಾಥ ಯಾಳವಾರ ಮಾತನಾಡಿ, ಇಷ್ಠಲಿಂಗಯೋಗದ ಜನಕರು ಬಸವಣ್ಣ. ಬಸವಣ್ಣನವರು ತಮ್ಮ ವಚನಗಳಲ್ಲಿ ಇಷ್ಠಲಿಂಗಯೋಗದ ಕ್ರಿಯೆಯ ಮೂಲಕ ಪ್ರತಿ ಅಂಗ ಬಿಚ್ಚಿ ವೈಜ್ಞಾನಿಕವಾಗಿ ನಮ್ಮ ಮುಂದಿಟ್ಟಿದ್ದಾರೆ. ಮನುಷ್ಯನಲ್ಲಿ ಒಂಬತ್ತು ಸ್ಥಾನಗಳು ಅತ್ಯಂತ ಶಕ್ತಿಯುತವಾಗಿದ್ದು, ಅವನ್ನು ಜಾಗೃತಗೊಳಿಸಬೇಕು ಎಂದರು.
ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ ನೇತೃತ್ವ, ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ನಿರ್ದೇಶಕ ಸುಭಾಷ ಹೊಳಕುಂದೆ ಅಧ್ಯಕ್ಷತೆ ವಹಿಸಿದ್ದರು. ಸಿದ್ದಣ್ಣ ಭೂಮಾ, ನಿರ್ಮಲಾ ಶಿವಣಕರ್, ಸುಲೋಚನಾ ಮಾಮಾ, ಮೀನಾ ಜಾಧವ್, ಚನ್ನಬಸವ ಭೂಮಾ, ಶಿವಶಂಕರ ರಾಂಪೂರೆ, ಕವಿತಾ ಸಜ್ಜನ ಇತರರಿದ್ದರು. ಸೋನಾಲಿ ಜಾಧವ ಧ್ವಜಾರೋಹಣ ನೆರವೇರಿಸಿದರು. ಶ್ರೀದೇವಿ ಕಾಕನಾಳೆ ನಿರೂಪಣೆ ಮಾಡಿದರು. ರಂಜನಾ ಭೂಶೆಟ್ಟಿ ಮತ್ತು ಅವಿನಾಶ ಬೋಸಗಾ ವಚನ ಸಂಗೀತ ನಡೆಸಿಕೊಟ್ಟರು. ರೇಖಾ ಬಸವರಾಜ ಘಾಳೆ ದಾಸೋಹದ ವ್ಯವಸ್ಥೆ ಮಾಡಿದ್ದರು.