

ಚಿತ್ರದುರ್ಗ: ಇಷ್ಟಲಿಂಗದ ಮೂಲಕ ಧ್ಯಾನ, ಯೋಗ ಏಕದೇವೋಪಾಸನೆ ಮಾಡಬಹುದಾಗಿದೆ ಎಂದು ದಾವಣಗೆರೆ ವಿರಕ್ತ ಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಮುರುಘಾಮಠದಲ್ಲಿ ಸೋಮವಾರ ತುಮಕೂರು ಜಿಲ್ಲೆ ಕಗ್ಗೆರೆಯ ಬಿ.ಎಂ. ಮಧುಕುಮಾರ್ ಅವರಿಗೆ ಜಂಗಮ ಅರ್ಥಾತ್ ಬಸವತತ್ವೋಪದೇಶ, ಸಮಾಜ ಸೇವಾ ದೀಕ್ಷೆ ಮೂಲಕ ಬಸವಾಕ್ಷ ಎಂಬ ಹೊಸ ನಾಮಾಂಕಿತದೊಂದಿಗೆ ಲಾಂಛನ ದೀಕ್ಷೆ ನೀಡಿ ಶ್ರೀಗಳು ಮಾತನಾಡಿದರು.
ಇಷ್ಟಲಿಂಗ ಧ್ಯಾನ, ಶಿವಯೋಗದ ಪರಿಕಲ್ಪನೆ, ವಿಭೂತಿಧಾರಣೆ, ಪ್ರತಿಜ್ಞಾವಚನ, ಬಸವತತ್ತ್ವಬೋಧನೆ ಮೂಲಕ ಗುರು,ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಂಚಾಚಾರಗಳು, ಷಟ್‌ಸ್ಥಲಗಳ ಕುರಿತು ನೂತನ ವಟುವಿಗೆ ಬೋಧಿಸಿದರು.
ಇಷ್ಟಲಿಂಗದ ಮೂಲಕ ಸಾಧಿಸಬಹುದಾದ ಏಕದೇವೋಪಾಸನೆ ಕುರಿತಂತೆ ಧರ್ಮಪ್ರಚಾರದಲ್ಲಿ ತಿಳಿಸ ಬೇಕಿದೆ ಎಂದರು.
ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಸ್ವಾಮಿಗಳಾದವರು ಸಮಾಜದ ಸ್ವಾಸ್ಥ್ಯಕ್ಕಾಗಿ ಜನರಲ್ಲಿ ಕಾಯಕಪ್ರಜ್ಞೆ, ದಾಸೋಹ ಪ್ರಜ್ಞೆ ಮೂಡಿಸಬೇಕು. ಮಕ್ಕಳು ಮೂಢನಂಬಿಕೆ ಹಾಗೂ ದುಶ್ಚಟಗಳಿಂದ ದೂರ ವಿದ್ದು, ವಿದ್ಯಾವಂತರಾಗಬೇಕು ಎಂದು ತಿಳಿಸಿದರು.
ಗುರುಮಠಕಲ್‌ನ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಜೇವರ್ಗಿ ತಾಲೂಕು ಚಿಗರಹಳ್ಳಿ ಮರುಳಶಂಕರ ಗುರು ಪೀಠದ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ತುಮಕೂರು ಜಿಲ್ಲೆ ಹೊಳವನಳ್ಳಿ ಮತ್ತು ಗುಬ್ಬಿಹೊಸಳ್ಳಿಯ ಶ್ರೀ ಬಸವ ಮಹಾಲಿಂಗ ಸ್ವಾಮೀಜಿ, ನೂತನ ವಟುವಿನ ಪಾಲಕರು, ಸಂಬಂಧಿಕರು ಇದ್ದರು.
ಜಮುರಾ ಕಲಾವಿದ ಉಮೇಶ್‌ಪತ್ತಾರ್ ವಚನ ಹಾಡಿದರು. ವಿದ್ಯಾರ್ಥಿಗಳು ಸಾಮೂಹಿಕ ಭಜನೆ ನಡೆಸಿಕೊಟ್ಟರು.
ವಟು ಪರಿಚಯ: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆಯಲ್ಲಿ ಬಿ. ಮಂಜುನಾಥ್ ಹಾಗೂ ಎಚ್.ಎಂ. ದಾಕ್ಷಾಯಣಿ ದಂಪತಿ ಪುತ್ರರಾಗಿ 1995 ಜ. 20ರಂದು ಜನಿಸಿದ ಬಿ.ಎಂ. ಮಧುಕುಮಾರ್ ಬಿಎ ಪದವಿ ಪಡೆದಿದ್ದಾರೆ. ಇಷ್ಟಲಿಂಗದ ವೈಜ್ಞಾನಿಕತೆ ಶಿವಯೋಗದ ಮೂಲಕ ತಿಳಿಸುವ ಇಚ್ಛೆ ಅವರಿಗಿದೆ. ಯೋಗ, ಪ್ರಾಣಾಯಾಮದ ಮೂಲಕ ಆರೋಗ್ಯಕ್ಕೆ ಪೂರಕ ಸಲಹೆ ನೀಡುವುದಾಗಿ ತಿಳಿಸಿದ್ದಾರೆ. ಈ ಗಾಗಲೇ ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ಬಸವತತ್ತ್ವ ಪ್ರಚಾರ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಕನ್ನಡದೊಂದಿಗೆ ಇಂಗ್ಲಿಷ್,ಹಿಂದಿ, ತಮಿಳು ಮತ್ತು ತೆಲುಗು ಭಾಷೆಯ ಅರಿವು ನೂತನ ವಟು ಬಸವಾಕ್ಷ ಅವರಿಗೆ ಇದೆ.