

ಬಸವಕಲ್ಯಾಣ: ಇಷ್ಟಲಿಂಗ ವಿಶ್ವದ ಮತ್ತು ಅರಿವಿನ ಸಂಕೇತ ಎಂದು ಇಳಕಲ್-ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಸ್ವಾಮೀಜಿ ನುಡಿದರು.
ಮಂಠಾಳ ಗ್ರಾಮದ ಶ್ರೀ ಗುರುಲಿಂಗೇಶ್ವರ ಚೌಕಿ ಮಠ ಪರಿಸರದಲ್ಲಿ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಪಟ್ಟಾಧಿಕಾರ ವಾರ್ಷಿಕೋತ್ಸವದ ನಿಮಿತ್ತ ಮಂಗಳವಾರ ರಾತ್ರಿ ಏರ್ಪಡಿಸಿದ್ದ ಶರಣ ಸಂಸ್ಕೃತಿ ಉತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ಮಂಠಾಳ ಸ್ವಾಮೀಜಿ ಮಠದ ಆಸ್ತಿ ನೋಡಿ ಇಲ್ಲಿಗೆ ಬಂದಿಲ್ಲ. ಭಕ್ತರನ್ನು ನೋಡಿ ಬಂದಿದ್ದಾರೆ. ಎರಡೇ ವರ್ಷದಲ್ಲಿ ಮಂಠಾಳನ್ನು ಭಕ್ತಿಯ ಆಲಯವನ್ನಾಗಿಸಿದ್ದಾರೆ ಎಂದು ಕೊಂಡಾಡಿದರು.
ಗುರು ಬಸವಣ್ಣನವರು ಲಿಂಗಾಯತ ಧರ್ಮ, ಇಷ್ಟಲಿಂಗ ಕೊಟ್ಟರು. ಅಂಗದ ಮೇಲೆ ಲಿಂಗ ಕಟ್ಟಿಕೊಂಡವರೆಲ್ಲ ಲಿಂಗಾಯತರು. ಲಿಂಗ ಕಟ್ಟಿಕೊಂಡರಿಗೆ ಜಾತಿ ಇಲ್ಲ. ಅವರು ವಿಶ್ವಮಾನವರು. ಇಷ್ಟಲಿಂಗ ನೇರ ದೃಷ್ಟಿಯಿಂದ ನೋಡಿದರೆ ಮನಸ್ಸು ಸ್ವಚ್ಛವಾಗುತ್ತದೆ. ಆಲೋಚನೆ ಬರುತ್ತದೆ. ಅರಿವು, ಜ್ಞಾನ ವೃದ್ಧಿಸುತ್ತದೆ ಎಂದರು.
ಇಷ್ಟಲಿಂಗಕ್ಕೆ ಅದ್ಭುತ ಶಕ್ತಿ ಇದೆ. ಎಲ್ಲರೂ ಇಷ್ಟಲಿಂಗ ಪೂಜೆ ಮಾಡಬೇಕು. ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಬೇಕು. ದುಶ್ಚಟಗಳಿದ್ದರೆ ಇಂದೇ ಮಹಾಂತ ಜೋಳಿಗೆಗೆ ಅರ್ಪಿಸುವ ಸಂಕಲ್ಪ ಮಾಡಿ ಆರೋಗ್ಯವಂತರಾಗಿ ಬಾಳಿ. ಮನೆಯಲ್ಲಿ ಮಕ್ಕಳಿಗೆ ವಚನಗಳನ್ನು ಕಲಿಸಿಕೊಟ್ಟು ಶರಣ ಸಂಸ್ಕೃತಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಹುಲಸೂರದ ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ನಾಡಿನ ಪ್ರಗತಿಗೆ ಮಠಗಳ ಕೊಡುಗೆ ದೊಡ್ಡದು. ಬಸವ ತತ್ವ ಪ್ರಚಾರ-ಪ್ರಸಾರ ಜತೆಗೆ ಸಮಾಜಮುಖಿ ಕಾರ್ಯಗಳು ಮಠ-ಮಾನ್ಯಗಳಿಂದ ನಡೆಯುತ್ತಿದೆ ಎಂದು ಹೇಳಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಬಸವ ತತ್ವ ಸರ್ವಕಾಲಕ್ಕೂ ಪ್ರಸ್ತುತ. ವಿಶ್ವಕ್ಕೆ ಸಮಾನತೆ ಸಂದೇಶ ನೀಡಿದ ಗುರು ಬಸವಣ್ಣನವರು ಎಲ್ಲರಿಗೂ ಮತ್ತು ಎಲ್ಲ ಕ್ಷೇತ್ರಕ್ಕೂ ನ್ಯಾಯ ಕಲ್ಪಿಸಿದ್ದಾರೆ. ಕೇಂದ್ರ ಸರ್ಕಾರದಿಂದಲೇ ಬಸವ ಜಯಂತಿ ಆಚರಣೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಠಾಳದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಲಾತೂರಿನ ಶಿವಾನಂದ ಹೈಬತಪುರೆ ಉಪನ್ಯಾಸ ನೀಡಿದರು. ಉಮರ್ಗಾ ಶಾಸಕ ಪ್ರವೀಣ ಸ್ವಾಮಿ, ಡಿವೈಎಸ್ಪಿ ಜೆ.ಎಸ್. ನಾಮಗೌಡ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಜಗನ್ನಾಥ ಮಾಲಿಪಾಟೀಲ್, ಸಮಿತಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್, ಕಾರ್ಯದರ್ಶಿ ರವೀಂದ್ರ ಶಾಯಪ್ಪ, ಶಂಕರರಾವ ಪೊಲೀಸ್ ಪಾಟೀಲ್, ಚಂದ್ರಕಾಂತ ಝುಂಜಾ, ಪುಷ್ಪರಾಜ ಹಾರಕೂಡೆ, ಧನರಾಜ ಸಾಥಭಾಯಿ, ಸಂತೋಷ ಸಂಗಮಬಟ್ಟೆ ಇತರರಿದ್ದರು.
ಶಿವಕುಮಾರ ಶೆಟಗಾರ ಬರೆದ ಶರಣರ ನೆನೆ ಮನವೆ ಪುಸ್ತಕ ಬಿಡುಗಡೆ ಮಾಡಲಾಯಿತು. ಮಹಾದೇವ ಮಾಲಿಪಾಟೀಲ್ ಸ್ವಾಗತಿಸಿದರು. ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಶಿವಕುಮಾರ ಶೆಟಗಾರ ಪ್ರಾಸ್ತಾವಿಕ ಮಾತನಾಡಿದರು. ಗಜಾನನ ಕುಕ್ಕಾ ಪಾಟೀಲ್ ವಂದಿಸಿದರೆ. ನಾಗೇಂದ್ರ ಬಿರಾದಾರ ನಿರೂಪಣೆ ಮಾಡಿದರು.
ಇಳಕಲ್ ಶ್ರೀಗೆ ಪ್ರಶಸ್ತಿ ಪ್ರದಾನ: ಮಂಠಾಳದಲ್ಲಿ ಮಂಗಳವಾರ ಸಂಜೆ ನಡೆದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಇಳಕಲ್‌ನ ಶ್ರೀ ಗುರುಮಹಾಂತ ಸ್ವಾಮೀಜಿ ಅವರಿಗೆ ಶ್ರೀ ಗುರುಲಿಂಗೇಶ್ವರ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಗುರುಮಹಾಂತ ಸ್ವಾಮೀಜಿ ಅವರಿಗೆ ಗುರುಲಿಂಗೇಶ್ವರ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿರುವುದು ಸಂಸತ ತಂದಿದೆ. ಗುರುಗಳಿಗೆ ಸಮರ್ಥ ಪ್ರಶಸ್ತಿ ನೀಡಿದ್ದು, ಗುರು-ಶಿಷ್ಯರು ಹೇಗಿರಬೇಕು ಎಂದು ತೋರಿಸಿಕೊಟ್ಟವರು ಧಾರವಾಡದ ಪೂಜ್ಯ ಮೃತ್ಯುಂಜಯ ಅಪ್ಪ- ಮಹಾಂತ ಅಪ್ಪಗಳು ಮೊದಲಿಗರಾದರೆ, ಎರಡನೆಯವರು ಇಳಕಲ್‌ನ ಪೂಜ್ಯ ಮಹಾಂತ ಅಪ್ಪ-ಗುರುಮಹಾಂತ ಅಪ್ಪಗಳು.
| ಶ್ರೀ ಗುರುಬಸವ ಪಟ್ಟದ್ದೇವರು
ಶಿಕ್ಷಣದಿಂದ ಸುಂದರ ಜೀವನ ರೂಪು ಸಾಧ್ಯ: ಶಿಕ್ಷಣದಿಂದ ಮಾತ್ರ ಹೆಣ್ಣು ಮಕ್ಕಳು ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಲು ಸಾಧ್ಯ ಎಂದು ಮಂಠಾಳ ಠಾಣೆ ಪಿಎಸ್‌ಐ ಸುವರ್ಣ ಮಲಶೆಟ್ಟಿ ಹೇಳಿದರು. ಮಂಠಾಳದಲ್ಲಿ ಮಂಗಳವಾರ ಏರ್ಪಡಿಸಿದ್ದ ಶರಣ ಸಂಸ್ಕೃತಿ ಉತ್ಸವದ ಮಹಿಳಾ ಗೋಷ್ಠಿಯಲ್ಲಿ ಮಾತಾಡಿದ ಅವರು, ಸಾಮಾಜಿಕ, ರಾಜಕೀಯ, ವಿಜ್ಞಾನ ತಂತ್ರಜ್ಞಾನ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡಿದ್ದಾರೆ. ಹೆಣ್ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದರೆ ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಶಕ್ತರಾಗುತ್ತಾರೆ. ಮನೆ, ಸಮಾಜಕ್ಕೆ ಬೆಳಕಾಗುತ್ತಾರೆ ಎಂದರು. ಡಾ.ಇಂದುಮತಿ ದಿವಾಕರ್ ವಿಶೇಷ ಉಪನ್ಯಾಸ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಶೀಲಾಬಾಯಿ ತ್ರಿಮಖೆ ಇದ್ದರು.