ಇವರೇ ನಿಜವಾದ ಕರೊನಾ ಸೇನಾನಿಗಳು

h28-Kims 1
Published on

ಹುಬ್ಬಳ್ಳಿ: ‘ಇವರಿಗೆ ಅವರ್ಯಾರೂ ರಕ್ತ ಸಂಬಂಧಿಕರಲ್ಲ, ಪರಿಚಯವೂ ಇಲ್ಲ. ಅವರ ಸಮಸ್ಯೆ, ಗೋಳು, ರೋಗರುಜಿನ ಯಾವುವೂ ಗೊತ್ತಿಲ್ಲ. ಆದರೆ, ಈ ಭೂಮಿಯ ಋಣ ತೀರಿದವರನ್ನು ಗೌರವಯುತವಾಗಿ ಸಂಸ್ಕಾರ ಮಾಡುವ ಕೈಂಕರ್ಯ ಇವರದ್ದು.’

ಹಾಗಂತ ಈ ಹೃದಯವಂತ ಸೇನಾನಿಗಳಿಗೆ ತಮ್ಮ ಕುಟುಂಬ, ಮಕ್ಕಳೊಂದಿಗೆ ಕಾಲ ಕಳೆಯುವ ಯೋಗವೂ ಇಲ್ಲ. ಇತ್ತ ಸಮಾಜವೂ ಅಸ್ಪೃಶ್ಯರ ರೀತಿ ಕಾಣವ ದೌರ್ಭಾಗ್ಯ ಬೇರೆ.

ಕೋವಿಡ್​-19 ಅಟ್ಟಹಾಸ ಮೆರೆಯುತ್ತಿದ್ದಂತೆ ಸಂಬಂಧ, ಸಂಸ್ಕಾರ, ಪ್ರೀತ್ಯಾಧಾರಗಳು ದೂರವಾಗುತ್ತಿರುವ ಈ ಕ್ಲಿಷ್ಟ ಪರಿಸ್ಥಿತಿಯಲ್ಲಿ ಕರೊನಾ ಬಲಿ ಪಡೆದ ಜನರ ಅಂತ್ಯಸಂಸ್ಕಾರ ನಡೆಸುವ ಶವಾಗಾರದ ಸಿಬ್ಬಂದಿಯೇ ನಿಜವಾದ ಕರೊನಾ ಸೇನಾನಿಗಳು.

ಕೋವಿಡ್​ನಿಂದ ಮೃತಪಟ್ಟವರ ಸಂಬಂಧಿಕರರಲ್ಲಿ ಕೆಲವರು ಅಂತ್ಯಸಂಸ್ಕಾರಕ್ಕೆ ಬಂದರೆ, ಕೆಲವರು ಬರುವುದಿಲ್ಲ. ಆದರೆ ಈ ಸೇನಾನಿಗಳು ಮಾತ್ರ ರಕ್ತಸಂಬಂಧಿಗಳಿಗಿಂತಲೂ ಹೆಚ್ಚು ಮುತುವರ್ಜಿ ವಹಿಸಿ, ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ.

ದುಃಖಕರ ಸಂಗತಿಯೆಂದರೆ ಕೋವಿಡ್​ನಿಂದ ಮೃತರಾದರೆ ಸಂಬಂಧಿಸಿದ ಸಮುದಾಯದವರೆ ಅಂತ್ಯಕ್ರಿಯೆಗೆ ಜಾಗ ನೀಡಲು ಹಿಂದೇಟು ಹಾಕುತ್ತಿರುವುದು. ‘ಸತ್ತಾಗ ಎಲ್ಲ ದ್ವೇಷ ಮರೆಯಬೇಕು’ ಎಂಬ ಗಾದೆ ಇದೆ. ಆದರೆ, ಸತ್ತ ವ್ಯಕ್ತಿಯೊಂದಿಗೆ ಯಾವುದೇ ದ್ವೇಷ ಇರದಿದ್ದರೂ ಕೋವಿಡ್​ನಿಂದ ಮೃತಪಟ್ಟ ಒಂದೇ ಕಾರಣಕ್ಕೆ ಅಂತ್ಯಸಂಸ್ಕಾರಕ್ಕೆ ಜಾಗ ನೀಡದಿರುವುದು ಯಾವ ನ್ಯಾಯ ?

ಈ ಪರಿಸ್ಥಿತಿ ಮಧ್ಯೆಯೂ ಸಮುದಾಯದವರ ಮನವೊಲಿಸಿ, ಶವಾಗಾರದ ಸಿಬ್ಬಂದಿ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಆದರೆ ಕೆಲವರು ಅಂತ್ಯಸಂಸ್ಕಾರಕ್ಕೆ ಜಾಗ ನೀಡದೆ ಪ್ರತಿಭಟಿಸುವುದು, ಮನವೊಲಿಕೆ ವಿಫಲವಾಗಿ ಮೃತ ವ್ಯಕ್ತಿಯ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡದ ನೋವು ಈ ಸೇನಾನಿಗಳಿಗೆ ಕಾಡುತ್ತಿದೆ.

ಕಿಮ್್ಸ ಸೇನಾನಿಗಳ ಕಾರ್ಯ :

ಹುಬ್ಬಳ್ಳಿಯ ಕಿಮ್್ಸ ಶವಾಗಾರದ ಸಿಬ್ಬಂದಿ ಕೋವಿಡ್​ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸುವ ಕಾರ್ಯದಲ್ಲಿ ಕಳೆದ ಏಪ್ರಿಲ್​ನಿಂದಲೇ ನಿರತರಾಗಿದ್ದಾರೆ.

ವಿಧಿ-ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಹಾಗೂ ಕೋವಿಡ್​ನಿಂದ ಮೃತಪಟ್ಟವರ ದೇಹಗಳ ಅಂತ್ಯಸಂಸ್ಕಾರ ಮಾಡಲು ಮಾರ್ಗದರ್ಶನ ಮಾಡುವ ಡಾ. ಸುನಿಲಕುಮಾರ ಬಿರಾದಾರ ನೇತೃತ್ವದಲ್ಲಿ 12 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರಲ್ಲಿ ಪರಶುರಾಮ ಮಲ್ಯಾಳ ಎಂಬ ಗ್ರುಪ್ ಡಿ ಸೂಪರ್​ವೈಸರ್ ಅವರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಆಧಾರದ ಈ ಸಿಬ್ಬಂದಿ ಪ್ರತಿ ತಿಂಗಳು ಪಡೆಯುವ ಸಂಬಳ 10,300 ರೂ. ಮಾತ್ರ. ಕೋವಿಡ್​ನಿಂದ ಮೃತಪಟ್ಟವರ ದೇಹದ ಅಂತ್ಯ ಸಂಸ್ಕಾರಕ್ಕೂ ಹೆಚ್ಚಿನ ಸಂಬಳ ಇವರಿಗೆ ನೀಡುತ್ತಿಲ್ಲ.

ಮುಸ್ಲಿಂ ಸಮುದಾಯದಲ್ಲಿ ಕೋವಿಡ್​ನಿಂದ ಮೃತಪಟ್ಟವರಿಗೆ ಅಂಜುಮನ್ ಸಂಸ್ಥೆಯೇ ಜಾಗ ನಿಗದಿಪಡಿಸಿದೆ. ಆದರೆ, ಇತರ ಸಮುದಾಯದವರು ಈ ದೇಹಗಳ ಅಂತ್ಯ ಸಂಸ್ಕಾರಕ್ಕೆ ಜಾಗ ಮೀಸಲಿಟ್ಟಿಲ್ಲ. ಹಾಗಾಗಿ ಈಗಿರುವ ರುದ್ರಭೂಮಿಯಲ್ಲಿಯೇ ಶವಗಳ ಅಂತ್ಯಸಂಸ್ಕಾರ ಮಾಡುವುದು ಅನಿವಾರ್ಯ.

ಪಿಪಿಇ ಕಿಟ್ ನರಕ :

ಅಂತ್ಯಸಂಸ್ಕಾರ ಮುಗಿಯುವವರೆಗೂ ಪಿಪಿಇ ಕಿಟ್ ಧರಿಸುವುದು ನರಕಯಾತನೆಯೇ ಸರಿ. ಒಂದು ಬಾರಿ ಪಿಪಿಇ ಕಿಟ್ ಧರಿಸಿದರೆ ಮುಗೀತು, ಅಂತ್ಯಸಂಸ್ಕಾರ ಆಗುವವರೆಗೂ ಈ ಕಿಟ್ ತೆಗೆಯುವ ಹಾಗಿಲ್ಲ. ಅದುವರೆಗೂ ಒಂದು ಹನಿ ನೀರನ್ನು ಕುಡಿಯದ, ಏನನ್ನೂ ತಿನ್ನದ, ಮಲ-ಮೂತ್ರ ವಿಸರ್ಜನೆಗೂ ಹೋಗದಂತಹ ದುಸ್ಥಿತಿ ಈ ಸೇನಾನಿಗಳದ್ದು. ಇದರ ಮೇಲೆ ಪಿಪಿಇ ಕಿಟ್​ನಿಂದ ದೇಹದಲ್ಲಿ ಹೆಚ್ಚುವ ತಾಪಮಾನವನ್ನೂ ತಡೆದುಕೊಳ್ಳಬೇಕು.

ಹಾವೇರಿ, ಬಳ್ಳಾರಿ, ದಾಂಡೇಲಿ, ಗದಗ ಸೇರಿದಂತೆ ಸುತ್ತಲಿನ ಜಿಲ್ಲೆಗಳ ಕೋವಿಡ್ ಸೋಂಕಿತರು ಕಿಮ್ಸ್​ನಲ್ಲಿ ಚಿಕಿತ್ಸೆಗೆ ದಾಖಲಾಗುತ್ತಾರೆ. ಚಿಕಿತ್ಸೆ ಫಲಿಸದೆ ಸಾವಿಗೀಡಾದರೆ ಮೃತರ ಜಿಲ್ಲೆಗಳಿಗೆ ದೇಹ ತೆಗೆದುಕೊಂಡು ಹೋಗಿ, ಅಂತ್ಯಸಂಸ್ಕಾರ ಆಗುವವರೆಗೂ ಈ ಸಿಬ್ಬಂದಿ ಕಿಟ್ ತೆಗೆಯುವಂತಿಲ್ಲ.

ಘಟನೆ 1: ಸಮುದಾಯವೊಂದರ ಧರ್ಮಗುರುವೊಬ್ಬರು ಕೆಲ ದಿನಗಳ ಹಿಂದೆ ಕೋವಿಡ್​ನಿಂದ ಹುಬ್ಬಳ್ಳಿಯಲ್ಲಿ ಮೃತಪಟ್ಟಿದ್ದರು. ಧರ್ಮಗುರುವಿನ ಅಂತ್ಯಸಂಸ್ಕಾರಕ್ಕೆ ಜಾಗ ನೀಡಲು ಆ ಸಮುದಾಯದವರು ಒಪ್ಪಲಿಲ್ಲ. ಸಮುದಾಯದ ಮುಖಂಡರ ಮನವೊಲಿಸಲು ಶವಾಗಾರದ ಸಿಬ್ಬಂದಿ ಮಾಡಿದ ಪ್ರಯತ್ನ ವ್ಯರ್ಥವಾಯಿತು. ಕೊನೆಗೆ ಆ ಸಮುದಾಯದ ನಿಯಮ ಪಾಲನೆ ಬಿಟ್ಟು ಧರ್ಮಗುರುವಿನ ಅಂತ್ಯಸಂಸ್ಕಾರವನ್ನು ಶವಾಗಾರದ ಸಿಬ್ಬಂದಿ ಮಾಡಿದರು. ಧರ್ಮ ಬೋಧನೆ ಮಾಡುತ್ತಿದ್ದ ಗುರುವಿಗೆ ಆ ಧರ್ಮದಂತೆ ಅಂತ್ಯಸಂಸ್ಕಾರ ನಡೆಯದಾಯಿತು.

ಘಟನೆ 2: ಕೆಲ ದಿನಗಳ ಹಿಂದಷ್ಟೇ ದಾಂಡೇಲಿಯ ಕೋವಿಡ್ ಮೃತನ ದೇಹವನ್ನು ಹುಬ್ಬಳ್ಳಿ ಶವಾಗಾರದ ಸಿಬ್ಬಂದಿ ತೆಗೆದುಕೊಂಡು ಹೋದಾಗ, ರುದ್ರಭೂಮಿಯಲ್ಲಿ ಶವ ಹೂಳಲು ತೆಗ್ಗನ್ನೂ ತೋಡಿರಲಿಲ್ಲ. 8 ಅಡಿ ತಗ್ಗು ತೋಡುವವರೆಗೂ ಅಂದಾಜು 4 ತಾಸು ಪಿಪಿಇ ಕಿಟ್​ನಲ್ಲಿಯೇ ಈ ಸಿಬ್ಬಂದಿ ಇರಬೇಕಾಯಿತು. 6-7 ತಾಸು ಕಿಟ್ ಧರಿಸಿದ್ದರಿಂದ ಸಿಬ್ಬಂದಿಯೊಬ್ಬನ ಆರೋಗ್ಯ ಸ್ಥಿತಿಯೂ ಬಿಗಡಾಯಿಸಿತು.

ಘಟನೆ 3: ಧಾರವಾಡದ ದಾನೇಶ್ವರಿ ನಗರದಲ್ಲಿ ಇತ್ತೀಚೆಗೆ ಕೋವಿಡ್​ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸದಂತೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಕೊನೆಗೆ ಶವಾಗಾರ ಸಿಬ್ಬಂದಿಯ ಮನವೊಲಿಕೆ ನಂತರ ಅಂತ್ಯಸಂಸ್ಕಾರಕ್ಕೆ ಒಪ್ಪಿಕೊಂಡರು.

ಘಟನೆ 4: ಶವಾಗಾರದ ಸಿಬ್ಬಂದಿಯ ಬಾಲ್ಯ ಸ್ನೇಹಿತನೊಬ್ಬ ಕೋವಿಡ್​ನಿಂದ ಮೃತನಾಗಿದ್ದ. ಆತನ ಅಂತ್ಯಸಂಸ್ಕಾರಕ್ಕೆ ಜಾಗ ನೀಡುವಂತೆ ಸಿಬ್ಬಂದಿ ಪರಿಪರಿಯಾಗಿ ಬೇಡಿಕೊಂಡರೂ ಸಮುದಾಯದವರು ಜಾಗ ನೀಡಲು ನಿರಾಕರಿಸಿದರು.

ದಾನ, ಧರ್ಮ, ಪುಣ್ಯ, ಪಾಪದ ಬಗ್ಗೆ ಮಾತನಾಡುವ ಜನರು, ಸತ್ತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಜಾಗ ನೀಡಲು ಹಿಂದೇಟು ಹಾಕುವುದು ಬೇಸರ ಎನಿಸುತ್ತದೆ. ಸತ್ತ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡುವುದರಿಂದ ಸೋಂಕು ಹಬ್ಬುವುದಿಲ್ಲ. ಈ ಸತ್ಯವನ್ನು ಜನರು ಅರಿಯಬೇಕು.| ಪರಶುರಾಮ ಮಲ್ಯಾಳ, ಕಿಮ್್ಸ ಶವಾಗಾರದ ಗ್ರುಪ್ ಡಿ ಸೂಪರ್​ವೈಸರ್

ಇದುವರೆಗೆ ಕೋವಿಡ್ ಶಂಕಿತ 104 ಹಾಗೂ ಪಾಸಿಟಿವ್ ಇರುವ 101 ಶವಗಳ ಅಂತ್ಯ ಸಂಸ್ಕಾರ ಮಾಡಿದ್ದೇವೆ. ಕೋವಿಡ್​ನಿಂದ ಸಾವಿಗೀಡಾದವರ ದೇಹ ಹೂಳುವುದರಿಂದ ಸೋಂಕು ಹರಡುವುದಿಲ್ಲ. 72 ತಾಸುಗಳಲ್ಲಿ ಸೋಂಕು ನಾಶವಾಗುತ್ತದೆ.ಹೀಗಾಗಿ ಶವಸಂಸ್ಕಾರಕ್ಕೆ ವಿರೋಧ ಮಾಡುವುದರಲ್ಲಿ ಅರ್ಥ ಇಲ್ಲ. | ಡಾ. ಸುನೀಲಕುಮಾರ ಬಿರಾದಾರ, ವಿಧಿ-ವಿಜ್ಞಾನ ವಿಭಾಗದ ಪ್ರಾಧ್ಯಾಪಕ, ಕಿಮ್್ಸ, ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net