ಇವರ ದುಡಿಮೆಗಿಲ್ಲ ಲಾಕ್​ಡೌನು!

h29-Labour 3
Published on

ಹುಬ್ಬಳ್ಳಿ: ಲಾಕ್​ಡೌನ್ ಶುರುವಾಗಿದೆ. ಬಹುತೇಕರು ಮನೆಯೊಳಗೆ ವಾಸವಾಗಿದ್ದಾರೆ. ಕೂಲಿ, ನೌಕರಿ, ದುಡಿಮೆಯಿಂದ ದೂರವೂ ಇದ್ದಾರೆ. ಹೊರರಾಜ್ಯದ ಇವರಿಗೂ ಕೋವಿಡ್ ಕರ್ಫ್ಯೂ, ಕರೊನಾ ಲಾಕ್​ಡೌನ್ ಅನ್ವಯ ಆಗುತ್ತದೆ. ಆದರೆ, ಅದು ದುಡಿಯೋದಕ್ಕೆ ಮಾತ್ರ. ಎಂದಿನಂತೆ ತಡವಾಗಿ ಕೆಲಸ ಆರಂಭಿಸುವ ಬದಲು, ನಸುಕಿನಲ್ಲೇ ಬೆನ್ನು ಬಗ್ಗಿಸಿ ಕೆಲಸ ಶುರು ಮಾಡಲು.

ಹೊಟ್ಟೆಪಾಡಿಗಾಗಿ ದೂರದ ಆಂಧ್ರಪ್ರದೇಶದಿಂದ ಹುಬ್ಬಳ್ಳಿಗೆ ವಲಸೆ ಬಂದ ಹಲವರು ಈ ಲಾಕ್​ಡೌನ್ ಅವಧಿಯಲ್ಲಿ ಎಂದಿನಂತೆ 10ರ ಬದಲು ಬೆಳಗ್ಗೆ 6ಕ್ಕೆ ಕೆಲಸ ಆರಂಭಿಸುತ್ತಾರೆ. ಪುರುಷರು ಮಾತ್ರವಲ್ಲ, ಮಹಿಳೆಯರೂ ಕೆಲಸದಲ್ಲಿ ತೊಡಗುತ್ತಾರೆ. ಪತಿ-ಪತ್ನಿ, ಅಣ್ಣ-ತಮ್ಮ, ಅಣ್ಣ-ತಂಗಿ... ಹೀಗೆ ಕುಟುಂಬ ಸಮೇತರಾಗಿಯೇ ಸುಮಾರು 35 ಜನ ಕಳೆದ 3-4 ತಿಂಗಳಿಂದ ನಗರದ ವಿವಿಧೆಡೆ ಗುತ್ತಿಗೆದಾರರಡಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ 13 ಜನ ಮಹಿಳೆಯರು ಇರುವುದು ವಿಶೇಷ.

ಇವರು ಆಂಧ್ರಪ್ರದೇಶದ ಕರ್ನಲ್ ಜಿಲ್ಲೆಯವರು. ಅಲ್ಲಿ ಕೂಲಿ ಕೆಲಸಕ್ಕೂ ಬರ ಬಂದಿದೆ. ಇದ್ದರೂ ದುಡಿಮೆಗೆ ತಕ್ಕ ಕೂಲಿ ಇಲ್ಲವಂತೆ. ಸಂಸಾರದ ಸಾಗಿಸುವುದು ಕಷ್ಟವಾಗಿ ದೂರದ ಹುಬ್ಬಳ್ಳಿಗೆ ಬಂದು ದುಡಿಯುತ್ತಿದ್ದಾರೆ. ಕರೊನಾ ಸಂಕಷ್ಟವೂ ಇವರ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ. ಕುಟುಂಬ ಸಮೇತರಾಗಿ ದುಡಿಯುವ ಅನಿವಾರ್ಯತೆ ತಲೆದೋರಿದೆ.

ಗುರುವಾರ ಬೆಳಗ್ಗೆ ದುರ್ಗದಬೈಲ್ ಬಳಿಯ ಬೆಳಗಾಂವ ಗಲ್ಲಿಯಲ್ಲಿ ಗಟಾರ್ ನಿರ್ಮಾಣ ಕಾಮಗಾರಿಯಡಿ ಅಗಳ ತೊಡುವ ಕೆಲಸದಲ್ಲಿ ತೊಡಗಿದ್ದರು. ಇಲ್ಲಿ ಹುಬ್ಬಳ್ಳಿ - ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಮಾರ್ಟ್ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರಿನ ಕೆವಿಆರ್ ಕನ್​ಸ್ಟ್ರಕ್ಷನ್ ಕಂಪನಿ ಕಾಮಗಾರಿಯ ಗುತ್ತಿಗೆ ಹಿಡಿದಿದೆ.

ಆಂಧ್ರಪ್ರದೇಶದ ಕರ್ನಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಡಿ ಬೆಲಗಲ್, ಮಲ್ಲಪಲ್ಲೆ, ಚಿಂತಕುಂಟೆ ಗ್ರಾಮದ ನಿವಾಸಿಗಳು ಕೆಲಸ ಅರಸಿ ಹುಬ್ಬಳ್ಳಿಗೆ ಬಂದಿದ್ದಾರೆ. ಅಲ್ಲಿ ಕೆಲಸವಿಲ್ಲ. ಹೇಗೋ ಗುತ್ತಿಗೆದಾರರ ಸಂಪರ್ಕಕ್ಕೆ ಬಂದು ಇಲ್ಲಿ ಮೈ ಮುರಿದು ದುಡಿಯುತ್ತಿದ್ದಾರೆ. ಗಂಡಸರು ಗುದ್ದಲಿಯಿಂದ ಅಗಳ ತೋಡಿದರೆ, ಹೆೆಂಗಸರು ಮಣ್ಣು ತುಂಬಿ ಎತ್ತಿ ಹೊರ ಹಾಕುತ್ತಾರೆ. ಮಧ್ಯಾಹ್ನದ ಬಿಸಿಲಿನ ಝುಳದಿಂದ ತಪ್ಪಿಸಿಕೊಳ್ಳಲು ಬೆಳಗ್ಗೆ 6.30ಕ್ಕೆ ಕೆಲಸಕ್ಕೆ ಹಾಜರಾಗುವ ಇವರು ಅಷ್ಟರೊಳಗೆ ಉಪಾಹಾರ ರೆಡಿ ಮಾಡಿಕೊಂಡು ಬಂದಿರುತ್ತಾರೆ. ಬೆಳಗ್ಗೆ 9 ಗಂಟೆಯ ಸುಮಾರಿಗೆ ಉಪಾಹಾರ ಸೇವಿಸಿ ಪುನಃ ಕೆಲಸ ಶುರು ಹಚ್ಚಿಕೊಳ್ಳುತ್ತಾರೆ.

‘ಕರ್ನಲ್ ಜಿಲ್ಲೆಯ ಡಿ ಬೆಲಗಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲಸವಿಲ್ಲ. ಇದ್ದರೂ ಕೆಲಸಕ್ಕೆ ತಕ್ಕ ದುಡಿಮೆಯಿಲ್ಲ. ಅಲ್ಲಿ ನಾವು ಹೊಲದಲ್ಲಿ ದುಡಿಯುತ್ತಿದ್ದೇವು. ಈಗ ಹೊಲದಲ್ಲಿ ಕೆಲಸವಿಲ್ಲ. ಕಳೆದ 3-4 ತಿಂಗಳಿಂದ ಗಟಾರ್, ರಸ್ತೆ ಕಾಮಗಾರಿಯಡಿ ದುಡಿಯುತ್ತಿದ್ದೇವೆ. ಅಲ್ಲಿಗಿಂತ ಇಲ್ಲಿ ಹೆಚ್ಚು ಕೂಲಿ ಸಿಗುತ್ತಿದೆ’ ಎಂದು ಅರ್ಗ್ಯ ಆದಂ ಅವರು ‘ವಿಜಯವಾಣಿ’ ಜತೆ ವಸ್ತುಸ್ಥಿತಿ ಹಂಚಿಕೊಂಡರು.

ಕೂಲಿ ಕೆಲಸಗಾರರು ಕೆ.ಬಿ. ನಗರದ ರ್ಕ ಬಸವೇಶ್ವರ ದೇವಸ್ಥಾನದ ಎದುರಿನ ಬಯಲು ಪ್ರದೇಶದಲ್ಲಿ ಟೆಂಟ್ ಹಾಕಿಕೊಂಡು ನೆಲೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net