ಇಳುವರಿ ಹೆಚ್ಚಳಕ್ಕೆ ಮಣ್ಣಿನ ಫಲವತ್ತತೆ ಮುಖ್ಯ

26-vpt-01
Published on

ವಿರಾಜಪೇಟೆ: ಕಾಫಿ ತೋಟದಲ್ಲಿ ಇಳುವರಿ ಹೆಚ್ಚಾಗಬೇಕಾದರೆ ಮಣ್ಣಿನ ಫಲವತ್ತತೆ ಬಹುಮುಖ್ಯ ಎಂದು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಕೃಷಿ ವಿಜ್ಞಾನಿ ಡಾ. ದೇವಯ್ಯ ಹೇಳಿದರು.

ಬೇಟೋಳಿ ಗ್ರಾಮದ ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸಭಾ ಭವನದಲ್ಲಿ ಶ್ರೀ ಸರಸ್ವತಿ ಚಾರಿಟಬಲ್ ಟ್ರಸ್ಟ್ ದರ್ಬೆ, ಪುತ್ತೂರು ನೇತೃತ್ವದಲ್ಲಿ ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಕಾಫಿ ಕೃಷಿ ಕುರಿತು ಮಾತನಾಡಿದರು.

ತೋಟಕ್ಕೆ ಬರೀ ರಸಗೊಬ್ಬರ ಹಾಕುವುದರಿಂದ ಮಣ್ಣಿಗೆ ಫಲವತ್ತತೆ ಬರುವುದಿಲ್ಲ. ಬದಲಾಗಿ ಕಾಡುಮರಗಳನ್ನು ಕಪಾತು ಮಾಡದೆ ಹಾಗೆಯೇ ಉಳಿಸಿಕೊಳ್ಳಬೇಕು. ಕಾಡುಮರದ ಎಲೆಗಳು ತೋಟದಲ್ಲಿ ಉದುರಿ, ಕರಗಿ ಗೊಬ್ಬರವಾಗುವ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ ಎಂದರು.

ಕೊಡಗು ಒಂದು ಕಾಲದಲ್ಲಿ ಮುಖ್ಯವಾಗಿ ಭತ್ತವನ್ನು ಅವಲಂಬಿಸಿದ್ದ ಜಿಲ್ಲೆಯಾಗಿತ್ತು. ಆದರೆ 90ರ ದಶಕದಿಂದ ಈಚೆಗೆ ಹನಿ ನೀರಾವರಿ ವ್ಯವಸ್ಥೆ ಬಂದ ಬಳಿಕ ಕಾಫಿ ಬೆಳೆಯತ್ತ ಹೆಚ್ಚಿನ ಜನರ ಒಲವು ಬೆಳೆಯಿತು ಎಂದರು.

ಕಾಫಿ ಕೃಷಿಯಲ್ಲಿ ಇತ್ತೀಚೆಗೆ ಗೊಬ್ಬರ ಮತ್ತು ಕಾರ್ಮಿಕರ ಖರ್ಚು ಹೆಚ್ಚಾಗುತ್ತಿದೆ. ಆದರೆ ಬ್ರೆಜಿಲ್ ದೇಶದಲ್ಲಿ ಹವಾಮಾನ ವೈಪರೀತ್ಯದಿಂದ ತೋಟಗಳಲ್ಲಿ ಗಿಡಗಳೇ ಹೋಗಿರುವುದರಿಂದ ಅವರು ಹೊಸದಾಗಿ ಗಿಡ ನೆಟ್ಟು ಫಸಲು ಪಡೆಯಲು ಇನ್ನೂ ನಾಲ್ಕೈದು ವರ್ಷಗಳು ಬೇಕು. ಅಲ್ಲಿಯವರೆಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ನಾವೂ ಒಳ್ಳೆಯ ಬೆಲೆಯನ್ನು ನಿರೀಕ್ಷೆ ಮಾಡಬಹುದು ಎಂದರು.

ನಾವೂ ಕಾಫಿತೋಟವನ್ನು ತೋಟವಾಗಿ ನೋಡದೆ ಉದ್ಯಮ ರೀತಿಯಲ್ಲಿ ನೋಡಿದಾಗ, ಪಡೆಯುತ್ತಿರುವ ಫಸಲು ಎಷ್ಟು ಕಡಿಮೆ ಎಂಬುದು ಅರಿವಾಗುತ್ತದೆ. ತೀರಾ ಹಳೇ ಕಾಲದ ಗಿಡಗಳನ್ನು ಹಾಗೆಯೇ ಉಳಿಸಿಕೊಂಡಿರುವುದು, ಗೊಬ್ಬರದಲ್ಲಿ ನ್ಯೂನತೆ, ನೆರಳು ನಿರ್ವಹಣೆ ಸರಿಯಾಗಿ ಮಾಡದೇ ಇರುವುದು ಸೇರಿದಂತೆ ಇನ್ನಿತರ ಕಾರಣಗಳಿಂದ ಬೆಳೆಗಾರರು ಪಡೆಯುತ್ತಿರುವ ಫಸಲಿನಲ್ಲಿ ಇಳಿಮುಖವಾಗುತ್ತಿದೆ ಎಂದು ಹೇಳಿದರು.

ಬೆಳೆಗಾರರು ಯಾವುದೋ ಲೋಕಲ್ ನರ್ಸರಿಯಿಂದ ಕಾಫಿ ಗಿಡ ತಂದು ನೆಡಬಾರದು. ಒಮ್ಮೆ ಕಾಫಿ ತೋಟದಲ್ಲಿ ನೆಟ್ಟ ಗಿಡ 40-50 ವರ್ಷವಾದರೂ ತೋಟದಲ್ಲಿ ಉಳಿದು ಫಸಲು ಬಿಡಬೇಕು. ಆದ್ದರಿಂದ ಒಳ್ಳೆಯ ಕಡೆ ನೋಡಿ ಗಿಡ ತಂದು ನೆಡಬೇಕು ಎಂದು ಸಲಹೆ ನೀಡಿದರು.

ಕೃಷಿ ವಿಜ್ಞಾನಿ ಡಾ.ಬಿ.ಪ್ರಭಾಕರ ಅವರು ಮಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತ, ಮಣ್ಣಿನ ರಾಸಾಯನಿಕ, ಭೌತಿಕ, ಜೈವಿಕ ಆರೋಗ್ಯ ಮುಖ್ಯವಾಗುತ್ತದೆ. ಪ್ರತಿಯೊಬ್ಬರೂ ಮಣ್ಣಿನ ಪರೀಕ್ಷೆ ಮಾಡಿಸಿ ಬಳಿಕವಷ್ಟೇ ರಸಗೊಬ್ಬರ ಹಾಕುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು ಎಂದರು.

ಸಸ್ಯ ಸಂರಕ್ಷಣೆ ಕೃಷಿ ವಿಜ್ಞಾನಿ ಡಾ. ವಿರೇಂದ್ರಕುಮಾರ್ ಅವರು ವಿವಿಧ ಬೆಳೆಗಳಲ್ಲಿ ಅನುಸರಿಸಬೇಕಾದ ಸಸ್ಯ ಸಂರಕ್ಷಣಾ ಕ್ರಮಗಳು, ಕಾಫಿ ಕಾಯಿ ಉದುರದಂತೆ ತಡೆಯುವ ಬಗೆ, ಬೋರ್ಡೋ ದ್ರಾವಣವನ್ನು ವೈಜ್ಞಾನಿಕ ರೀತಿಯಲ್ಲಿ ಸಿಂಪಡಣೆ ಮಾಡುವ ವಿಧಾನ ಕುರಿತು ವಿಸ್ತೃತ ಮಾಹಿತಿ ನೀಡಿದರು. ಕಾಳುಮೆಣಸು ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗುವುದಕ್ಕೂ ಹೇಗೆ ರಾಸಾಯನಿಕ ಸಿಂಪಡಣೆ ಮಾಡಬೇಕು ಎಂಬುದರ ಬಗ್ಗೆ ರೈತರಿಗೆ ಅಗತ್ಯ ಮಾಹಿತಿ ನೀಡಿದರು.

ಬೇಟೋಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಿ.ಆರ್.ವೇದಾತ್ಮ ಕಾರ್ಯಕ್ರಮ ಉದ್ಘಾಟಿಸಿದರು. ಸರಸ್ವತಿ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ವಸಂತ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಕೆ.ಆರ್.ವಿನೋದ್ ಡಾ.ರಾಮಕೃಷ್ಣ, ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net