ಇಲ್ಲೊಬ್ಬರಿದ್ದಾರೆ ಹಾವುಗಳ ಮೊಟ್ಟೆ ರಕ್ಷಕ !

27-charan-1
ಚಾಮರಾಜನಗರದ ಸ್ನೇಕ ಅಶೋಕ್ ಅವರ ಬೈಕ್ ಕ್ಯಾರಿಯರ್ ಬಾಕ್ಸ್‌ನಲ್ಲಿರುವ ಕೆರೆ ಹಾವು ಮತ್ತು ಮೊಟ್ಟೆ.
Published on

ಹಾವನ್ನು ಬಿಟ್ಟು ಮೊಟ್ಟೆ ಮರಿಯಾದ ನಂತರ ಕಾಡಿಗೆ ಬಿಡುವ ಉರಗ ಪ್ರೇಮಿ


ಚಾಮರಾಜನಗರ: ಹಾವು ಕಂಡರೆ ಕೊಲ್ಲುವ ಜನರನ್ನು ನೋಡಿದ್ದೇವೆ. ಹಾಗೇ ಹಾವು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿರುವ ಜನರನ್ನು ಕೂಡ ನೋಡಿದ್ದೇವೆ. ಆದರೆ, ಗಾರೆ ಕೆಲಸದ ಕಾರ್ಮಿಕನೊಬ್ಬ ಮನೆಯೊಂದರ ಆವರಣದಲ್ಲಿ ಪತ್ತೆಯಾದ ಕೆರೆ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು, ಅದರ ಮೊಟ್ಟೆಯನ್ನು ಮರಿಯಾಗುವವರೆಗೂ ತನ್ನಲ್ಲೇ ಇಟ್ಟುಕೊಂಡು ರಕ್ಷಿಸಿದ್ದಾರೆ.

ನಗರದ 9ನೇ ವಾರ್ಡ್‌ನ ನಿವಾಸಿ ಅಶೋಕ್(42) ಹಾವಿನ ಮೊಟ್ಟೆ ಮರಿಯಾಗುವವರೆಗೂ ತನ್ನಲ್ಲೇ ಇಟ್ಟುಕೊಂಡು ಕಾಯುತ್ತಿರುವ ಉರಗ ರಕ್ಷಕ. ಇವರು ಜು.14 ರಂದು ಚಾಮರಾಜನಗರ ತಾಲೂಕಿನ ಮಾದಪುರ ಗ್ರಾಮದ ಮನೆಯೊಂದರ ಆವರಣದಲ್ಲಿ ಕೆರೆ ಹಾವನ್ನು ಸೆರೆ ಹಿಡಿದಿದ್ದರು. ಸೆರೆ ಹಿಡಿದ ಈ ಹಾವನ್ನು ತನ್ನ ಬೈಕ್‌ನ ಕ್ಯಾರಿಯರ್ ಬಾಕ್ಸ್‌ನಲ್ಲಿ ಇಟ್ಟಿದ್ದರು. ಸಂಜೆ ಕಾಡಿಗೆ ಬಿಡಲು ಪ್ಲಾಸ್ಟಿಕ್ ಬಾಟಲ್‌ನಲ್ಲಿ ರಕ್ಷಣೆ ಮಾಡಿದ ಕೆರೆ ಹಾವನ್ನು ನೋಡಿದಾಗ 18 ಮೊಟ್ಟೆ ಇಟ್ಟಿರುವುದು ಕಂಡುಬಂದಿದೆ. ಮೊಟ್ಟೆ ರಕ್ಷಿಸುವ ಪಣ ತೊಟ್ಟ ಅವರು ಕೆರೆ ಹಾವನ್ನು ತಾಲೂಕಿನ ಬೂದಿತಿಟ್ಟು ಕೆರೆ ಸಮೀಪ ಬಿಟ್ಟು ಅದರ ಮೊಟ್ಟೆಯನ್ನು ಪ್ಲಾಸ್ಟಿಕ್ ಬಾಟಲ್‌ನಲ್ಲಿ ಇಟ್ಟುಕೊಂಡು ಮರಿಯಾಗುವುದನ್ನೇ ಕಾಯುತ್ತಿದ್ದಾರೆ. ಈ 18 ಮೊಟ್ಟೆಗಳು ಮರಿಯಾಗಲು 65 ದಿನಗಳ ಸಮಯಾವಕಾಶ ಬೇಕು ಎನ್ನುವ ಅಶೋಕ್ ಅವುಗಳನ್ನು ಜೋಪಾನ ಮಾಡಿಟ್ಟುಕೊಂಡಿದ್ದಾರೆ.

4ನೇ ಬಾರಿ ಮೊಟ್ಟೆಗಳ ರಕ್ಷಣೆ: ಸ್ನೇಕ್ ಅಶೋಕ್ ಕೆಲ ವರ್ಷಗಳ ಹಿಂದೆ ಗ್ರೀನ್ ಕೀಲ್ ಬ್ಯಾಕ್ ಎಂಬ ಹಾವನ್ನು ಸೆರೆ ಹಿಡಿದು ಪ್ಲಾಸ್ಟಿಕ್ ಬಾಟಲ್‌ನಲ್ಲಿ ಇಟ್ಟಿದ್ದಾಗ 22 ಮೊಟ್ಟೆ ಇಟ್ಟಿತ್ತು. ಕೆರೆ ಹಾವು 42, ಅಭರಣದ ಹಾವು 7 ಮೊಟ್ಟೆಗಳನ್ನು ಇಟ್ಟಿತ್ತು. ಈ ಎಲ್ಲ ಹಾವುಗಳನ್ನು ಕಾಡಿಗೆ ಬಿಟ್ಟು ಮೊಟ್ಟೆಗಳನ್ನು ಮಾತ್ರ ಸಂರಕ್ಷಣೆ ಮಾಡಿ ಇಟ್ಟಿದ್ದರು. ಮೊಟ್ಟೆಯಿಂದ ಮರಿ ಬರುತ್ತಿದ್ದಂತೆ ಸಂತೋಷಪಟ್ಟ ಇವರು ಅವುಗಳನ್ನು ಆರೈಕೆ ಮಾಡಿ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿ ಮರಿಗಳನ್ನು ಕಾಡಿಗೆ ಬಿಟ್ಟು ಉರಗ ಸಂರಕ್ಷಕ ಎಂದು ಬಿರುದನ್ನು ಪಡೆದಿದ್ದಾರೆ.


ಒಂದು ಬಾರಿ ಮಾತ್ರ ವಿಫಲ: ಕೆಲ ವರ್ಷಗಳ ಹಿಂದೆ ತೋಳದ ಮುಖದ ಹಾವನ್ನು ಸೆರೆ ಹಿಡಿದ ಸ್ನೇಕ್ ಅಶೋಕ್ ಪ್ಲಾಸ್ಟಿಕ್ ಬಾಟಲ್‌ನಲ್ಲಿ ಇಟ್ಟಿದ್ದಾಗ ಹಾವು 3 ಮೊಟ್ಟೆ ಇಟ್ಟಿತ್ತು. ಹಾವನ್ನು ಅರಣ್ಯಕ್ಕೆ ಬಿಟ್ಟು ಮೊಟ್ಟೆಯನ್ನು ಸಂರಕ್ಷಣೆ ಮಾಡಿ ಮೊಟ್ಟೆ ಮರಿಯಾಗುವವರೆಗೂ ಕಾಯುತ್ತಿದ್ದರು. ಆದರೆ ಮೊಟ್ಟೆಯಿಂದ ಮರಿ ಬರಲೇ ಇಲ್ಲ. ಇದರಿಂದ ಈ ಒಂದು ಪ್ರಯತ್ನ ವಿಫಲವಾಯಿತು.

ಮರಿ ಬಂತು!: ಸ್ನೇಕ್ ಅಶೋಕ್ ರಕ್ಷಣೆ ಮಾಡಿದ ಗ್ರೀನ್ ಕೀಲ್ ಬ್ಯಾಕ್ ಹಾವನ್ನು ಪ್ಲಾಸ್ಟಿಕ್ ಬಾಟಲ್‌ನಲ್ಲಿ ಇಟ್ಟಿದ್ದರು. ಕೆಲ ಗಂಟೆ ನಂತರ ಸಂರಕ್ಷಣೆ ಮಾಡಿದ್ದ ಹಾವಿನ ಪ್ಲಾಸ್ಟಿಕ್ ಬಾಟಲ್‌ನ್ನು ನೋಡಿದಾಗ 22 ಮೊಟ್ಟೆ ಇಟ್ಟಿತ್ತು. ಆಗ ಹಾವನ್ನು ಮಾತ್ರ ಅರಣ್ಯಕ್ಕೆ ಬಿಟ್ಟರು.ಮೊಟ್ಟೆಗಳನ್ನು ಮಾತ್ರ ಸಂರಕ್ಷಣೆ ಮಾಡಿ ತನ್ನಲೇ ಇಟ್ಟುಕೊಂಡಿದ್ದರು. ಸ್ನೇಹಿತರು ಮೊಟ್ಟೆ ಜತೆ ಹಾವಿದ್ದರೆ ಮಾತ್ರ ಮೊಟ್ಟೆಯಿಂದ ಮರಿ ಬರುತ್ತದೆ ಎಂದು ಹೇಳಿದ್ದರೂ ಸ್ನೇಕ್ ಅಶೋಕ್ ಆ ಮಾತಿಗೆ ಕಿವಿಗೊಡದೆ ಇದ್ದರು. ಕೆಲ ದಿನಗಳ ನಂತರ ಮೊಟ್ಟೆಯಿಂದ ಮರಿ ಬಂತು. ಇವರ ಮೊದಲ ಪ್ರಯತ್ನ ಯಶ್ವಸಿಯಾದ ಬೆನ್ನಲ್ಲೇ ಆವತ್ತಿನಿಂದ ಹಾವುಗಳ ಮೊಟ್ಟೆಗಳನ್ನು ಸಂರಕ್ಷಣೆ ಮಾಡಿ ಮರಿ ಬಂದ ಮೇಲೆ ಕಾಡಿಗೆ ಬಿಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net