ಶಿಡ್ಲಘಟ್ಟ : ಕೆರೆಗಳಲ್ಲಿನ ಜಾಲಿ ಮರಗಳನ್ನು ತೆರವುಗೊಳಿಸಲು ಸರ್ಕಾರ ಆದೇಶಿಸಿರುವಾಗ ತಾಲೂಕಿನಲ್ಲಿ ಮಾತ್ರ ತೆರವು ಕಾರ್ಯ ಸ್ಥಗಿತಗೊಂಡಿರುವುದಕ್ಕೆ ಸಿಡಿಮಿಡಿಗೊಂಡ ಶಾಸಕ ವಿ.ಮುನಿಯಪ್ಪ, ಅಮ್ಮನಕೆರೆಯಲ್ಲಿನ ಜಾಲಿ, ಬಿದಿರು ಮರಗಳನ್ನು ಕೂಡಲೆ ತೆರವುಗೊಳಿಸುವಂತೆ ಅರಣ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸದ್ಯದಲ್ಲೇ ಅಮ್ಮನಕೆರೆಗೆ ಎಚ್.ಎನ್.ವ್ಯಾಲಿ ಯೋಜನೆ ನೀರು ಹರಿಯಲಿದೆ, ಬಾಕಿ ಇರುವ ಅಗತ್ಯ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಶನಿವಾರ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಸೂಚಿಸಿದರು.
ಕೆರೆಯಲ್ಲಿನ ಜಾಲಿ ಮರಗಳನ್ನು ತೆರವುಗೊಳಿಸಲು ಟೆಂಡರ್ ಪಡೆದಿದ್ದ ವ್ಯಕ್ತಿ ಸಕಾಲಕ್ಕೆ ಕೆಲಸ ಮುಗಿಸಲಿಲ್ಲ. ಎರಡು ಬಾರಿ ಗಡುವು ಮುಂದೂಡಿದರೂ ತೆರವು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನೊಟೀಸ್ ನೀಡಲಾಗಿದೆ. ಮರಗಳನ್ನು ಕಡಿಯಲಾಗಿದೆ, ಸಣ್ಣ-ಪುಟ್ಟ ಸಸಿಗಳಿದ್ದು ಅದನ್ನು ಎಚ್‌ಎನ್ ವ್ಯಾಲಿ ಯೋಜನೆಯವರೇ ತೆರವುಗೊಳಿಸಲು ನಮ್ಮ ಅಭ್ಯಂತರ ಇಲ್ಲ ಎಂದು ಅರಣ್ಯ ಅಧಿಕಾರಿ ಸುರೇಶ್ ಸ್ಪಷ್ಟಪಡಿಸಿದರು.
ಕೆರೆಯ ಸುತ್ತಲೂ ಬದು ನಿರ್ಮಾಣ ಪೂರ್ಣವಾಗಬೇಕಿದೆ. ಒಂದಂಚಿನಲ್ಲಿ ಸಮಾಧಿಗಳಿದ್ದು ಸರ್ವೇ ಮಾಡಿಸಿ ಮಿಕ್ಕ ಕಡೆಗಳಲ್ಲಿ ಬದು ನಿರ್ಮಿಸಬೇಕಿದೆ. ಹಾಗೆಯೆ ನಗರಸಭೆಯ ನೀರು ಪೂರೈಕೆ ಘಟಕವಿದ್ದು ತೆರವುಗೊಳಿಸಬೇಕಿದೆ ಜತೆಗೆ ಕೆರೆಯ ಮಧ್ಯದಲ್ಲಿ ವಿದ್ಯುತ್ ಕಂಬಗಳನ್ನು ನೆಡಲಾಗಿದ್ದು ಸ್ಥಳಾಂತರಿಸಬೇಕು ಇಲ್ಲವೆ ನೀರು ನಿಂತರೂ ನೆಲಕ್ಕುರುಳದಂತೆ ಭದ್ರಪಡಿಸುವ ಕೆಲಸವಾದರೂ ಆಗಬೇಕಿದೆ ಎನ್ನುವ ಮೂಲಕ ಎಚ್‌ಎನ್ ವ್ಯಾಲಿ ಶಿಡ್ಲಘಟ್ಟ ಭಾಗದ ಜೆಇ ಪ್ರದೀಪ್ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು.
ಎಲ್ಲ ನಿರ್ಣಯಗಳನ್ನು ಆಯಾ ಇಲಾಖೆ ಅಧಿಕಾರಿಗಳು ಕಾಲ ಮಿತಿಯಲ್ಲಿ ಪೂರ್ಣಗೊಳಿಸುವಂತೆ ತಹಸೀಲ್ದಾರ್ ಬಿ.ಎಸ್.ರಾಜೀವ್ ಸೂಚಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ, ಸಿಪಿಐ ಧರ್ಮೇಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್ ಹಾಗೂ ಇತರರಿದ್ದರು.
ಪಂಪ್‌ಹೌಸ್ ಬೇರೆಡೆ ನಿರ್ಮಾಣ : ನಲ್ಲಿಮರದಹಳ್ಳಿ ಬಳಿಯ ಪಂಪ್‌ಹೌಸ್‌ನಿಂದ ನಗರದ 11 ವಾರ್ಡ್‌ಗಳಿಗೆ ನೀರು ಸರಬರಾಜು ಆಗುತ್ತಿದೆ, ಈ ಪಂಪ್‌ಹೌಸ್‌ನ್ನು ತೆರವುಗೊಳಿಸಿ ಮರು ನಿರ್ಮಾಣಕ್ಕೆ ಸೂಕ್ತ ಸ್ಥಳ ಇಲ್ಲ, ಈ ಹಿನ್ನೆಲೆಯಲ್ಲಿ ಜಾಗ ನೀಡಲು ತಾಲೂಕು ಆಡಳಿತಕ್ಕೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದ ನಗರಸಭೆ ಆಯುಕ್ತ ಉಮಾಶಂಕರ್, ಸೂಕ್ತ ಸ್ಥಳ ಕೊಟ್ಟರೆ ಕೂಡಲೇ ಬೇರೆ ಕಡೆ ನಿರ್ಮಿಸಿಕೊಳ್ಳುತ್ತೇವೆ ಎಂದರು.ನಗರೋತ್ಥಾನ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಸಲು ಕ್ರಿಯಾ ಯೋಜನೆ ರೂಪಿಸಿದ್ದು ಕುಡಿಯುವ ನೀರಿನ ಪರ‌್ಯಾರ್ಯ ವ್ಯವಸ್ಥೆ ಮಾಡುವುದಾಗಿ ಸ್ಪಷ್ಟಪಡಿಸಿದರು.
ಕೇಸು ದಾಖಲಿಸದಿದ್ದರೆ ಸಾಕು!: ಅರಣ್ಯ ಇಲಾಖೆ ಅಧಿಕಾರಿಗಳು ವಿನಾಕಾರಣ ಕೆಲಸಕ್ಕೆ ಅಡ್ಡಿಪಡಿಸುವುದು, ಪ್ರಕರಣ ದಾಖಲಿಸುವುದನ್ನು ಬಿಟ್ಟರೆ ನಾವೇ ಎಚ್.ಎನ್.ವ್ಯಾಲಿ ಯೋಜನೆಯಡಿ ಕೆರೆಯಲ್ಲಿನ ಜಂಗಲ್ ತೆಗೆಸಿ ಹೂಳು ತೆಗೆದು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತೇವೆ, ಈಗಾಗಲೆ ಹೂಳು ತೆಗೆಯಲು ಜೆಸಿಬಿ ಬಿಟ್ಟಿದ್ದು ಸೋಮವಾರ ಇನ್ನೆರಡು ಜೆಸಿಬಿಗಳನ್ನು ನೀಡುವುದಾಗಿ ಸಣ್ಣ ನೀರಾವರಿ ಇಲಾಖೆ ಜೆಜಿ ಕೀರ್ತಿ ಸಭೆಗೆ ವಿವರಿಸಿದರು.