ಇಲ್ಲಿ ಸಮಸ್ಯೆಗಳದ್ದೇ ಕಾರುಬಾರು!

JAN 20ss 1 kasadah arashi
ಶನಿವಾರಸಂತೆ ಗ್ರಾಮಕ್ಕೆ ಆಗಮಿಸುವವರಿಗೆ ಸ್ವಾಗತ ಮಡುತ್ತಿರುವ ಕಸದ ರಾಶಿ.
Published on

ಶನಿವಾರಸಂತೆ: ಹೋಬಳಿ ಕೇಂದ್ರವಾಗಿರುವ ಶನಿವಾರಸಂತೆಯಲ್ಲಿ ಸಾಲು ಸಾಲು ಸಮಸ್ಯೆಗಳಿದ್ದು, ಇವುಗಳಿಗೆ ಪರಿಹಾರ ಸಿಗದೆ ಜನರು ಹೈರಾಣಾಗಿದ್ದಾರೆ.

ಬಸ್ ನಿಲ್ದಾಣ, ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ, ಕಸದ ಸಮಸ್ಯೆ, ಹಕ್ಕುಪತ್ರ ವಿತರಣೆ, ಸಂತೆ ಮಾರುಕಟ್ಟೆ ಅಭಿವೃದ್ಧಿ ಕುಂಠಿತ ಸೇರಿದಂತೆ ನೂರೆಂಟು ಸಮಸ್ಯೆ ಇಲ್ಲಿವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಿದರೆ ಮಾತ್ರ ಪರಿಹಾರ ಎಂಬ ಅಭಿಪ್ರಾಯ ನಂ. 1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ಭಾನುವಾರ ಆಯೋಜಿದ್ದ ‘ಗ್ರಾಮ ಸಂಚಾರ’ದಲ್ಲಿ ಕೇಳಿಬಂತು.

ಸಂತೆ ಮಾರುಕಟ್ಟೆ ಅವ್ಯವಸ್ಥೆ: ಪ್ರತಿ ಶನಿವಾರ ಸಂತೆ ನಡೆಯುತ್ತದೆ. ಆದರೆ ಮಳೆಗಾಲದಲ್ಲಿ ವ್ಯಾಪರಸ್ಥರು ಹಾಗೂ ಗ್ರಾಹಕರ ಗೋಳು ಹೇಳತೀರದು. ಮಳೆಗಾಲದಲ್ಲಿ ಕೊಳಚೆ ನೀರಿನಲ್ಲಿ ಕುಳಿತು ವ್ಯಾಪಾರ ಮಾಡಬೇಕಾಗಿದೆ. ಕೊಡಗು ಜಿಲ್ಲೆಯಲ್ಲಿಯೇ ದೊಡ್ಡ ಸಂತೆ ಎಂಬ ಹೆಸರು ಶನಿವಾರಸಂತೆ ಮಾರುಕಟ್ಟೆಗಿದೆ. ಹಾಗಾಗಿ, ಹೆಚ್ಚು ಅನುದಾನ ತರುವ ಮೂಲಕ ಜನಪ್ರತಿನಿಧಿಗಳು ಅಭಿವೃದ್ಧಿಪಡಿಸಬೇಕಿದೆ ಎಂಬುದು ಗ್ರಾಮಸ್ಥರ ಮನವಿ.

ಇಚ್ಛಾಶಕ್ತಿ ಕೊರತೆ: ಶನಿವಾರಸಂತೆ ಅಭಿವೃದ್ಧಿಯಲ್ಲಿ ಹಿಂದುಳಿಯಲು ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳ ಇಚ್ಛಾಶಕ್ತಿ ಕೊರತೆಯಾಗಿದೆ. ಗ್ರಾಮ ಪಂಚಾಯಿತಿಗೆ ಹೆಚ್ಚು ಅನುದಾನ ಒದಗಿಸಿದಲ್ಲಿ ಶನಿವಾರಸಂತೆ ಅಭಿವೃದ್ಧಿ ಹೊಂದಲಿದೆ.

ಆರೋಗ್ಯ ಕೇಂದ್ರ ಅವ್ಯವಸ್ಥೆ: ಶನಿವಾರಸಂತೆ ಹೊಬಳಿಕೇಂದ್ರವಾದ ಪರಿಣಾಮ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವಿದೆ. ಸುಮಾರು 5-6 ವೈದ್ಯರು ಸೇವೆ ಸಲ್ಲಿಸಬೇಕಾಗಿದೆ. ಆದರೆ, ಇಬ್ಬರು ವೈದ್ಯರು ಮಾತ್ರ ಇಲ್ಲಿದ್ದಾರೆ. ಹಾಸನ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಪರಿಣಾಮ ಸುಮಾರು 40 ಹಳ್ಳಿಗಳಿಂದ ರೋಗಿಗಳು ಇಲ್ಲಿಗೆ ಬರುತ್ತಾರೆ. ಆದರೆ ಸರಿಯಾದ ಸಂದರ್ಭದಲ್ಲಿ ವೈದ್ಯರು ಸಿಗದೆ ಪರಿತಪಿಸುವ ಪರಿಸ್ಥಿತಿ ರೋಗಿಗಳದ್ದಾಗಿದೆ.

ಶನಿವಾರಸಂತೆಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಸಮಸ್ಯೆ ಅನೇಕ ವರ್ಷಗಳಿಂದ ಇದ್ದು, ಸಂಬಂಧಪಟ್ಟ ಮೇಲಧಿಕಾರಿಗಳು ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ. ಪರಿಣಾಮ, ಹೆಚ್ಚಿನ ಚಿಕಿತ್ಸೆಗೆ ಹಾಸನ ಮತ್ತು ಮಡಿಕೇರಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಕೇಂದ್ರದಲ್ಲಿ ವೈದ್ಯರು ಸೇರಿದಂತೆ 40 ಸಿಬ್ಬಂದಿ ಇರಬೇಕು. ಆದರೆ ಇಲ್ಲಿ ವೈದ್ಯರು ಸೇರಿದಂತೆ 28 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಕನಿಷ್ಠ ಪಕ್ಷ 5 ವೈದ್ಯರನ್ನು ನೇಮಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ಬಸ್ ನಿಲ್ದಾಣವಿಲ್ಲ; ಶನಿವಾರಸಂತೆ ಕೇಂದ್ರದಿಂದ ಹಾಸನ, ಮಂಗಳೂರು ಬೆಂಗಳೂರು, ಮೈಸೂರು, ಶಿವಮೊಗ್ಗ, ದಾವಣಗೆರೆ, ಧರ್ಮಸ್ಥಳ ಸೇರಿದಂತೆ ಇತರ ಸ್ಥಳಗಳಿಗೆ ಸರ್ಕಾರಿ ಬಸ್‌ಗಳು ತೆರಳುತ್ತದೆ. ಖಾಸಗಿ ಬಸ್‌ಗಳೂ ಕೂಡ ಜಿಲ್ಲೆಯ ಮೂಲೆ ಮೂಲೆಗಳಿಗೆ ತೆರಳುತ್ತವೆ. ಅದರೆ, ಇಲ್ಲಿ ಸರಿಯಾದ ಬಸ್ ನಿಲ್ದಾಣವಿಲ್ಲದೆ ಸಾರ್ವಜನಿಕರು ಅಂಗಡಿ-ಮುಂಗಟ್ಟು ಮುಂಭಾಗ ನಿಲ್ಲುವ ಅನಿವಾರ್ಯತೆ ಎದುರಾಗಿದೆ.

ಬೀದಿ ನಾಯಿಗಳ ಸಂಖ್ಯೆ ಹೆಚ್ಚಳ: ಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಅನೇಕ ವರ್ಷಗಳಿಂದ ಸಮಸ್ಯೆಯಾಗಿಯೇ ಉಳಿದಿದೆ. ಇದರಿಂದ ಸ್ಥಳೀಯ ಆರೋಗ್ಯ ಕೇಂದ್ರ, ಸರ್ಕಾರಿ ಶಾಲೆಯ ಮಕ್ಕಳು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಇಲ್ಲಿ ಸುರಿಯಲಾಗುತ್ತಿರುವ ಪ್ಲಾಸ್ಟಿಕ್ ಅನ್ನು ಗೋವುಗಳು ತಿನ್ನುತ್ತಿವೆ. ಜತೆಗೆ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜೀವವನ್ನು ಕೈಯಲ್ಲಿಡಿದು ಓಡಾಡಬೇಕಿದೆ.

ಅಭಿವೃದ್ಧಿಯಲ್ಲಿ ಹಿನ್ನಡೆ: ಗ್ರಾಮ ಪಂಚಾಯಿತಿ ವ್ತಾಪ್ತಿಯಲ್ಲಿ 7000ಕ್ಕೂ ಅಧಿಕ ಜನಸಂಖ್ಯೆ ಇದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸರ್ಕಾರಿ ಪ್ರಾಥಮಿಕ ಶಾಲೆ, 1 ಉರ್ದು ಶಾಲೆ, 1 ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, 3 ಪ್ರೌಢಶಾಲೆ, 2 ಪದವಿಪೂರ್ವ ಕಾಲೇಜು, 1 ಪ್ರಥಮ ದರ್ಜೆ ಕಾಲೇಜು ಇದೆ. 6 ಅಂಗನವಾಡಿ ಕೇಂದ್ರಗ:ನ್ನು ಶನಿವಾರಸಂತೆ ಒಳಗೊಂಡಿದೆಯಾದರೂ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ದುರಂತ.

ವೈದ್ಯರನ್ನು ನೇಮಕ ಮಾಡಿ
ಸಮುದಾಯ ಆರೋಗ್ಯ ಕೇಂದ್ರ ಹೆಸರಿಗೆ ಮಾತ್ರ ಇದೆ. ರಾತ್ರಿ ವೇಳೆ ಆರೋಗ್ಯದಲ್ಲಿ ಏರುಪೇರಾದರೆ ವೈದ್ಯರು ಸಿಗುವುದಿಲ್ಲ. ಹೃದ್ರಫಗ ತಜ್ಞ ವೈದ್ಯರು ಕಡ್ಡಾಯವಾಗಿ ಬೇಕಾಗಿದೆ. ಅನೇಕ ರೋಗಿಗಳು ಚಿಕಿತ್ಸೆ ದೊರೆಯದೆ ಮೃತಪಟ್ಟಿರುವ ನಿದರ್ಶನ ಉಂಟು. ಕೆಲ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಶನಿವಾರಸಂತೆ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಕ ಮಾಡಬೇಕು. ಇನ್ನಾದರೂ ಸರಿಪಡಿಸಲು ಮುಂದಾಗಲಿ.
ಶಾಹೀದ್ ಖಾನ್ ಗ್ರಾಮಸ್ಥ, ಶನಿವಾರಸಂತೆ

ಪ್ರಯಾಣಿಕರಿಗೆ ತೊಂದರೆ
ಶನಿವಾರಸಂತೆ ಗ್ರಾಮ ಪಂಚಾಯಿತಿಯಾದರೂ ದೊಡ್ಡ ಪಟ್ಟಣದ ಮಾದರಿಯಲ್ಲಿ ಬೆಳೆಯುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಬಂದು ಹೋಗುತ್ತವೆ. ಆದರೆ, ಸರಿಯಾದ ನಿಲ್ದಾಣವಿಲ್ಲದೆ ಬಸ್‌ಗಳು ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ನಿಲ್ಲುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಜಗನ್ ಪಾಲ್ ಶನಿವಾರಸಂತೆ ನಿವಾಸಿ

ಶಾಲಾ ಮಕ್ಕಳಿಗೆ ತೊಂದರೆ
ಶನಿವಾರಸಂತೆ ಗ್ರಾಮಕ್ಕೆ ಬರುವವರಿಗೆ ದೊಡ್ಡ ಕಸದ ರಾಶಿ ಸ್ವಾಗತ ಮಾಡುತ್ತದೆ. ಕಸದ ರಾಶಿಗೆ ಹೊಂದಿಕೊಂಡಂತೆ ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಉರ್ದು ಶಾಲೆ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಿದೆ. ಇದರಿಂದ ಪಾದಚಾರಿಗಳು ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಗ್ರಾಮ ಪಂಚಾಯಿತಿಯ ಇಚ್ಛಾಶಕ್ತಿ ಕೊರತೆಯಿಂದಾಗಿ ಕಸದ ರಾಶಿ ಬೃಹತ್ ಎತ್ತರಕ್ಕೆ ಬೆಳೆಯುತ್ತಿದೆ.
ಆದೀಲ್ ಪಾಷ ಶನಿವಾರಸಂತೆ, ಗ್ರಾಮಸ್ಥ

ನೆಲದ ಮೇಲು ಕುಳಿತು ವ್ಯಾಪಾರ
ಶನಿವಾರಸಂತೆಯ ಸಂತೆ ಮಾರುಕಟ್ಟೆ ಅಭಿವೃದ್ಧಿಯಾಗಬೇಕಿದೆ. ಮಾರುಕಟ್ಟೆಯಿಂದ ಇತರ ಮಾರಕಟ್ಟೆಗೆ ತರಕಾರಿ ಸರಬರಾಜಾಗುತ್ತದೆ. ಸಂತೆ ದಿನದಲ್ಲಿ ಸಣ್ಣ ವ್ಯಾಪಾರಿಗಳು ನೆಲದಲ್ಲೆ ಕುಳಿತು ವ್ಯಾಪಾರ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ವ್ಯಾಪಾರಿಗಳು ಹಾಗೂ ಗ್ರಾಹಕರು ತೊಂದರೆ ಅನುಭವಿಸುತಿದ್ದಾರೆ.
ಭಾಸ್ಕರ್ ಶನಿವಾರಸಂತೆ, ಗ್ರಾಮಸ್ಥ

ಶಾಲೆಗೆ ವಿಶೇಷ ಅನುದಾನ ಅಗತ್ಯ
ಶನಿವಾರಸಂತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶತಮಾನ ಕಂಡ ಶಾಲೆಯಾಗಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಉತ್ತಮ ಕ್ರೀಡಾಪಟುಗಳಾಗಿದ್ದಾರೆ. ಆದರೆ, ಶಾಲೆ ಸಂಪೂರ್ಣ ಶಿಥಿಲವಸ್ಥೆ ತಲುಪಿದ್ದು, ಶಾಲೆಯನ್ನು ಅಬಿವೃದ್ಧಿಪಡಿಸಬೇಕಾಗಿದೆ. ಶತಮಾನ ಕಂಡ ಶಾಲೆಯಾದ ಹಿನ್ನೆಲೆಯಲ್ಲಿ ವಿಶೇಷ ಅನುದಾನ ಶಾಲೆಗೆ ನೀಡಿ ಇನ್ನಷ್ಟು ಅಭಿವೃದ್ಧಿಪಡಿಸಬೇಕಾಗಿದೆ.
ಶರತ್ ಶೇಖರ್ ಗ್ರಾಪಂ ಸದಸ್ಯ, ಶನಿವಾರಸಂತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net