

ಹನೂರು: ನಾಲ್ಕು ತಿಂಗಳಿನಿಂದ ಕುಡಿಯುವ ನೀರಿಗೆ ಹಾಹಾಕಾರ.. ಹೂಳು ತುಂಬಿದ ಚರಂಡಿಯಿಂದ ವಾಸನೆ… ರಸ್ತೆ ಸದಿಯಲ್ಲಿ ಹರಿಯುವ ಕೊಳಚೆ ನೀರು… ಅಲ್ಲಲ್ಲಿ ಆಳೆತ್ತರಕ್ಕೆ ಬೆಳೆದು ನಿಂತಿರುವ ಗಿಡಗಂಟಿ….
ಇದು ಹನೂರಿನಿಂದ 2 ಕಿ.ಮೀ ಅಂತರದಲ್ಲಿರುವ ಚಂಗವಾಡಿ ಗ್ರಾಮದ ಭೋವಿ ಸಮುದಾಯ ವಾಸ ಮಾಡುತ್ತಿರುವ ಹೊಸ ಬಡಾವಣೆಯ ಪರಿಸ್ಥಿತಿ.
ಈ ಬಡಾವಣೆಯಲ್ಲಿ 2 ದಶಕಗಳಿಂದಲೂ ಜನರು ನೆಲೆಸಿದ್ದು, ಕೂಲಿಯನ್ನೇ ನಂಬಿ ಜೀವನ ನಡೆಸುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಸುಮಾರು 100 ಕುಟುಂಬವಿದ್ದು, 300ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ ಇಲ್ಲಿನ ಜನರಿಗೆ ಕುಡಿಯುವ ನೀರು, ರಸ್ತೆ, ಮನೆ ಸೇರಿದಂತೆ ಇತರ ಮೂಲ ಸೌಕರ್ಯ ಎಂಬುದು ಮರೀಚಿಕೆಯಾಗಿದೆ. ಜತೆಗೆ ಗ್ರಾಪಂ ಆಡಳಿತದ ನಿರ್ಲಕ್ಷೃತೆಯ ಪರಿಣಾಮ ಚರಂಡಿಯಲ್ಲಿನ ಹೂಳನ್ನು ಕಾಲಕಾಲಕ್ಕೆ ತೆಗೆಸುತ್ತಿಲ್ಲ ಹಾಗೂ ಗಿಡಗಂಟಿಗಳನ್ನು ತೆರೆವುಗೊಳಿಸಿಲ್ಲ. ಇದರಿಂದ ಇಲ್ಲಿನ ಜನರು ಕಷ್ಟದ ನಡುವೆ ಜೀವನ ನಡೆಸುವಂತಾಗಿದೆ. ಇಷ್ಟೆಲ್ಲ ಸಮಸ್ಯೆಯಿದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಗಮನಹರಿಸದಿರುವುದು ನಿಜಕ್ಕೂ ವಿಪರ್ಯಾಸ.
ಕುಡಿಯುವ ನೀರಿನ ಸಮಸ್ಯೆ ನೀಗಿಸಿ: ಬಡಾವಣೆಯಲ್ಲಿ 2 ತೊಂಬೆಗಳಿವೆೆ. ಆದರೆ 4 ತಿಂಗಳಿನಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ವಿದ್ಯುತ್ ಇರುವ ವೇಳೆಯಲ್ಲಿ ಕೆಲ ಸಮಯ ಮಾತ್ರ ನೀರು ಬರುತ್ತದೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಸಾಕಾಗುತ್ತಿಲ್ಲ. ಇದರಿಂದ ಬಿಂದಿಗೆ ನೀರಿಗೂ ಮಹಿಳೆಯರು ತೊಂಬೆ ಬಳಿ ಕಾದು ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಜತೆಗೆ ಕುಡಿಯುವ ನೀರಿಗಾಗಿ ಇರುವ ಒಂದು ಕೈ ಪಂಪ್ ಮೊರೆ ಹೋಗಬೇಕಿದ್ದು, ಮಹಿಳೆಯರು ಹಾಗೂ ವೃದ್ಧರು ಪಡುವ ಪಾಡು ಅಷ್ಟಿಷ್ಟಲ್ಲ. ಇತ್ತ ನೀರುಗಂಟಿ ಇಲ್ಲದ ಪರಿಣಾಮ ಇಲ್ಲಿನ ಜನರೇ ತೊಂಬೆಗೆ ನೀರೆತ್ತುವ ಮೋಟಾರ್ ಅನ್ನು ಚಾಲನೆ ಮಾಡಬೇಕಿದೆ. ಆದರೆ ಮೋಟಾರ್ ಆನ್ ಮಾಡುವ ಬಟನ್ ಹಲವು ತಿಂಗಳಿನಿಂದ ಕೆಟ್ಟಿರುವುದರಿಂದ ಜೀವಭಯದಲ್ಲೇ ದೊಣ್ಣೆಯಿಂದ ಮೋಟಾರ್ ಚಾಲನೆ ಮಾಡಬೇಕಾದ ಸ್ಥಿತಿ ಇದೆ.
ಮೊದಲು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾಪಂಗೆ ತೆರಳಿ ತಿಳಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ದಿನದಿಂದ ದಿನಕ್ಕೆ ನೀರಿಗಾಗಿ ಪರತಪಿಸುವಂತಾಗಿದೆ ಎಂದು ಬಡಾವಣೆ ನಿವಾಸಿಗಳಾದ ಸುಮತಿ, ಶಂಭಾಯಿ, ಮಾದಮ್ಮ, ನಲ್ಲಮ್ಮ, ರಾಜಮ್ಮ, ಸೆಲ್ವಿ, ಕಾರ್ತಿಕ ಹಾಗೂ ಚಿತ್ರಾ ಎಂಬುವರು ಅಳಲು ತೋಡಿಕೊಂಡಿದ್ದಾರೆ.
ಗುಂಡಿಯಲ್ಲಿ ನಿಲ್ಲುತ್ತಿದೆ ಕೊಳಚೆ ನೀರು: ಬಡಾವಣೆಯಲ್ಲಿ ಮುಖ್ಯ ರಸ್ತೆ ಸೇರಿದಂತೆ 6 ಬೀದಿಗಳಿವೆ. ಐದಾರು ವರ್ಷದ ಹಿಂದೆ 3 ಬೀದಿಗಳಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದ್ದು, ಈಗಾಗಲೇ ಕಲ್ಲುಗಳು ಕಿತ್ತು ಬಂದು ಹಾಳಾಗಿದೆ. ಇನ್ನು ಮುಖ್ಯ ರಸ್ತೆಗೆ 4 ತಿಂಗಳ ಹಿಂದೆ ಅರ್ಧದಷ್ಟು ಸಿಸಿ ರಸ್ತೆ ನಿರ್ಮಿಸಲಾಗಿದ್ದು, ಇನ್ನುಳಿದ ಭಾಗವನ್ನು ಹಾಗೆಯೇ ಬಿಡಲಾಗಿದೆ. ಇದರಿಂದ ಮಣ್ಣಿನ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದೆ.
ಕೆಲವು ಬೀದಿಗಳಲ್ಲಿ ಚರಂಡಿ ಇಲ್ಲದ ಪರಿಣಾಮ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಇದರಿಂದಾಗಿ ರಾತ್ರಿ ವೇಳೆ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇರುವ ಚರಂಡಿಗಳಲ್ಲಿ ಗ್ರಾಪಂ ಕಾಲಕಾಲಕ್ಕೆ ಹೂಳನ್ನು ತೆಗೆಸದ ಪರಿಣಾಮ ತ್ಯಾಜ್ಯ ಸಂಗ್ರಹವಾಗಿ ದುರ್ವಾಸನೆ ಬೀರುತ್ತಿರುವುದು ಒಂದೆಡೆಯಾದರೆ ಚರಂಡಿ ಆಚೀಚೆ ಹಾಗೂ ತಿರುಗಾಡುವ ರಸ್ತೆಯಲ್ಲಿ ಗಿಡಗಂಟಿ ಬೆಳೆದು ನಿಂತು ಅನೈರ್ಮಲ್ಯಕ್ಕೆ ಕಾರಣವಾಗಿದೆ.
ಮೂಲ ಸೌಕರ್ಯಕ್ಕೆ ಒತ್ತಾಯ: ಕುಡಿವ ನೀರು, ರಸ್ತೆ ಸೇರಿದಂತೆ ಹಲವು ಮೂಲ ಸೌಕರ್ಯಗಳ ಕೊರತೆ ಇದೆ. ಜತೆಗೆ ಗ್ರಾಪಂ ಅಸಮರ್ಪಕ ನಿರ್ವಹಣೆ ಪರಿಣಾಮ ಬಡಾವಣೆಯಲ್ಲಿ ಅನೈರ್ಮಲ್ಯ ಮನೆ ಮಾಡಿದೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಸಿಸಿ ರಸ್ತೆ, ಚರಂಡಿ ನಿರ್ಮಿಸಬೇಕು. ಹೂಳನ್ನು ತೆಗೆಸಬೇಕು. ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸುವುದರ ಮೂಲಕ ಶುಚಿತ್ವ ಕಾಪಾಡುವುದರ ಜತೆಗೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂಬುದು ನಿವಾಸಿಗಳ ಒತ್ತಾಯ.
ಚಂಗವಾಡಿ ಗ್ರಾಮಕ್ಕೆ ಬಂಡಳ್ಳಿ ಮುಖ್ಯ ರಸ್ತೆ ಬಳಿಯ ಬೋರ್‌ನಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಅಂತರ್ಜಲ ಮಟ್ಟ ಕುಸಿತದಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿರುವುದು ಗಮನಕ್ಕೆ ಬಂದಿದೆ. ಇದನ್ನು ಈಗಾಗಲೇ ತಾಪಂ ಇಒ ಅವರ ಗಮನಕ್ಕೂ ತರಲಾಗಿದೆ. ನೀರಿನ ಮೂಲ ತಿಳಿಸುವಂತೆ ಗ್ರಾಮಸ್ಥರಿಗೂ ತಿಳಿಸಲಾಗಿದ್ದು, 15 ಹಣಕಾಸು ಯೋಜನೆಯಡಿ ನೀರು ಪೂರೈಕೆಗೆ ಅಗತ್ಯ ಕ್ರಮವಹಿಸಲಾಗುವುದು. ಜತೆಗೆ ಚರಂಡಿ ಹೂಳು ತೆಗೆಸಲಾಗುವುದು. ಸಿಸಿ ರಸ್ತೆ ನಿರ್ಮಾಣ ಸಂಬಂಧ ಚರ್ಚಿಸಲಾಗುವುದು.
ಶಿವಕುಮಾರ್ ಪಿಡಿಒ, ಎಲ್ಲೇಮಾಳ
ನಿತ್ಯ ಇಲ್ಲಿ ನೀರಿನದ್ದೇ ಒಂದು ದೊಡ್ಡ ಸಮಸ್ಯೆಯಾಗಿದ್ದು, ಬಿಂದಿಗೆ ನೀರಿಗೂ ತೊಂದರೆ ಅನುಭವಿಸುತ್ತಿದ್ದೇವೆ. ವಯಸ್ಸಾದವರು ಕೈಪಂಪ್ ಒತ್ತಲು ಸಾಧ್ಯವಾಗದೆ ಕಷ್ಟ ಪಡುತ್ತಿದ್ದಾರೆ. ಇತ್ತ ಬಟನ್ ದುರಸ್ತಿಗೊಂಡಿರುವುದರಿಂದ ದೊಣ್ಣೆ ಮೂಲಕ ಮೋಟಾರ್ ಆನ್ ಮಾಡಬೇಕಾದ ಪರಿಸ್ಥಿತಿ ಇದೆ. ಚರಂಡಿಯಲ್ಲಿ ಹೂಳು ತುಂಬಿದ್ದು, ಬೀದಿಯಲ್ಲಿ ಕೊಳಚೆ ನೀರು ನಿಲ್ಲುವಂತಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲ.
ವೆಂಕಟಮ್ಮ, ಬಡಾವಣೆಯ ನಿವಾಸಿ