

ಮೈಸೂರು: ಕರ್ನಾಟಕಕ್ಕೆ ಯಾವುದೇ ದೇಶ, ರಾಜ್ಯದಿಂದ ಬಂದಿದ್ದರೂ ಇಲ್ಲಿ ಕನ್ನಡವನ್ನು ಕಲಿಯಬೇಕು. ಕನ್ನಡವನ್ನು ಗೌರವಿಸಬೇಕು. ಇಲ್ಲಿ ಕನ್ನಡಿಗನೆ ಸಾರ್ವಭೌಮನಾಗಿರಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಆರ್. ಮಹೇಶ್ ಅಭಿಪ್ರಾಯಪಟ್ಟರು.
ಕುವೆಂಪುನಗರದಲ್ಲಿರುವ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸ್ವಾತಂತ್ರ್ಯಪೂರ್ವದಲ್ಲಿಯೇ ಹುಯಿಲಗೋಳು ನಾರಾಯಣರಾಯರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಕವಿತೆ ಬರೆದಿದ್ದರು. ಕುವೆಂಪು, ಬೇಂದ್ರೆ, ಮಾಸ್ತಿವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತ, ಕೆ.ಎಸ್. ನರಸಿಂಹಸ್ವಾಮಿ ಸೇರಿದಂತೆ ಹಲವಾರು ಕವಿ, ಸಾಹಿತಿಗಳು ನೆಲ, ಜಲ, ನಾಡು ನುಡಿಯ ಬಗ್ಗೆ ತಮ್ಮ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು ಎಂದು ಬಣ್ಣಿಸಿದರು.
ಆದರೂ ಕನ್ನಡ ನಾಡಿನಲ್ಲಿ ನೂರಕ್ಕೆ ನೂರರಷ್ಟು ಕನ್ನಡ ಮಾತನಾಡುವವರಿಲ್ಲ ಎಂಬುದು ನೋವಿನ ಸಂಗತಿ. ಕವಿ ಜಿ.ಪಿ. ರಾಜರತ್ನಂ ಅವರು ಕನ್ನಡದ ಅಭಿಮಾನದ ಬಗ್ಗೆ ಎಷ್ಟು ಹೇಳಿದರೂ ತೀರದು. ನರಕಕ್ಕೆ ಇಳಿಸಿ, ನಾಲಿಗೆ ಸೀಳಿಸಿ, ಬಾಯ್ ಹೊಲುಸುದ್ರುನು ಮೂಗಿನಲ್ಲಿ ಆಡ್ತಿನಿ ಕನ್ನಡ ಪದವನ್ನು ಎನ್ನುತ್ತಾರೆ. ಈ ಅಭಿಮಾನ ಪ್ರತಿಯೊಬ್ಬ ಕನ್ನಡಿಗರಿಗೂ ಬರಬೇಕು ಎಂದರು.
ನಿಲಯಪಾಲಕರಾದ ಜಗದೀಶ್ ಕೋರಿ, ಚಿಕ್ಕವಡ್ಗಲ್ಲ, ನಾಗರಾಜು ತೇಜಸ್ವಿನಿ, ಮಂಜುಳಾ, ಭಾಗ್ಯಲಕ್ಷ್ಮಿ, ವಸಂತ, ಪ್ರವೀಣ್, ಸುದೀಪ್, ಬಿ.ಎ. ಯೋಗೇಶ್ ಇದ್ದರು.