

ನಾಗಮಂಗಲ: ಶೇ.40 ಪರ್ಸೆಂಟ್ ಮಾತ್ರವಲ್ಲ, ಶೇ.100ಕ್ಕೆ 100ರಷ್ಟು ಕಮಿಷನ್ ಸರ್ಕಾರ ಎಂಬ ಖ್ಯಾತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ನಾಗಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಆರೋಪಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಎಲ್ಲ ಇಲಾಖೆಗಳ ಕೆಟ್ಟ ಪರಿಸ್ಥಿತಿಗೆ ಬಿಜೆಪಿ ಸರ್ಕಾರವೇ ಕಾರಣವಾಗಿದೆ. ಬಿಜೆಪಿ ಸರ್ಕಾರ ಒಂದು ರೀತಿಯಲ್ಲಿ 4ನೇ ಹಂತದ ಕ್ಯಾನ್ಸರ್ ರೋಗ ಇದ್ದ ಹಾಗೆ. ಇತ್ತ ಗುಣವೂ ಆಗುವುದೂ ಇಲ್ಲ, ಸುಮ್ಮನೂ ಇರಲ್ಲ. ಅಂತಹ ಕೆಟ್ಟ ಪರಿಸ್ಥಿತಿಗೆ ರಾಜ್ಯವನ್ನು ತಂದು ನಿಲ್ಲಿಸಿದೆ. ಡಿ.ದೇವರಾಜ ಅರಸು ನಿಗಮದಲ್ಲೂ ಕೆಲಸ ಮಾಡದೆ 47 ಕೋಟಿ ರೂ.ಗಳನ್ನು ಲೂಟಿ ಮಾಡಿದೆ ಎಂದು ದೂರಿದರು.
ರಾಜ್ಯ ಹಾಗೂ ರಾಷ್ಟ್ರದ ಉಳಿವಿಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅವಶ್ಯಕವಾಗಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಪ್ರಮುಖವಾಗಿ ಕೈ ಹಿಡಿದದ್ದು ಮಂಡ್ಯ ಜಿಲ್ಲೆ. ಇಲ್ಲಿನ 7 ಕ್ಷೇತ್ರಗಳಲ್ಲೂ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಲಾಗಿತ್ತು. ರಾಜ್ಯದಲ್ಲಿ ಮೂರು ಪಕ್ಷಗಳಿಗೂ ಬಹುಮತ ಬಾರದ ಹಿನ್ನೆಲೆಯಲ್ಲಿ ಬಿಜೆಪಿಯನ್ನು ದೂರವಿಡುವ ಸಲುವಾಗಿ ಎಚ್.ಡಿ.ಕುಮಾರಸ್ವಾಮಿ ಅವರ ಮನೆ ಬಾಗಿಲಿಗೆ ಹೋಗಿ ಮುಖ್ಯಮಂತ್ರಿ ಮಾಡಲಾಯಿತು. ಆದರೆ ಸಿಎಂ ಆಗಲು ಪ್ರಮುಖ ಕಾರಣವಾದ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿ ಮಾಡಲಿಲ್ಲ. ಮೈಶುಗರ್ ಕಾರ್ಖಾನೆಯನ್ನು ಪ್ರಾರಂಭಿಸಲು ಅವರಿಂದ ಸಹ ಸಾಧ್ಯವಾಗಲಿಲ್ಲ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಅನೇಕರು ಪಕ್ಷ ಬಿಟ್ಟರು. ಇದಕ್ಕೆ ಎಚ್.ಡಿ. ಕುಮಾರಸ್ವಾಮಿ ಅವರ ಸ್ವಯಂಕೃತ ಅಪರಾಧವೇ ಕಾರಣ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಆಗಿದ್ದಾಗ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿ ಮಾಡದ ಎಚ್.ಡಿ.ಕುಮಾರಸ್ವಾಮಿ, ಇನ್ನು ಸಾಮಾನ್ಯ ಶಾಸಕರಾಗಿ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಎಚ್ಡಿಕೆ ಏನೆಂದು ಜಿಲ್ಲೆಯ ಜನತೆಗೆ ಗೊತ್ತಿದೆ. ನಮ್ಮ ಜನ ಸ್ವಾಭಿಮಾನಿಗಳು. ಜಿಲ್ಲೆಯವರನ್ನು ಹೊರತುಪಡಿಸಿ ಬೇರೆ ಜಿಲ್ಲೆಯವರಿಗೆ ಅವಕಾಶ ಕೊಡುವುದಿಲ್ಲ ಎಂಬ ನಂಬಿಕೆ ನನಗಿದೆ. ಅವರೇ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಅವರ ಪಕ್ಷದ ಶಾಸಕರಿದ್ದರೂ ಅವರ ಮಗನನ್ನೇ ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಒಂದು ವೇಳೆ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದರೆ ಈ ಬಾರಿಯೂ ಸ್ವಾಭಿಮಾನ ಬಂದೇ ಬರುತ್ತದೆ ಎಂದು ಹೇಳಿದರು.
ಈ ಸಂದರ್ಭ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಸಚಿವ ನರೇಂದ್ರಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕ ಬಿ.ರಾಮಕೃಷ್ಣ, ಜಿಲ್ಲಾ ವಕ್ತಾರ ಸಿ.ಎಂ.ದ್ಯಾವಪ್ಪ, ಮನ್ಮುಲ್ ಮಾಜಿ ಅಧ್ಯಕ್ಷ ಜವರೇಗೌಡ, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಬೆಟ್ಟೇಗೌಡ, ಜಿಪಂ ಮಾಜಿ ಸದಸ್ಯ ಪ್ರಸನ್ನ ಇತರರಿದ್ದರು.