ಇಲಾಖೆ ಸುಪರ್ದಿಯಲ್ಲಿದ್ದ ಶ್ರೀಗಂಧ ಮಾಯ!

21Ravig2
Published on

ಬೆಳಗಾವಿ: ಅಕ್ರಮ ತಡೆಯಲು ಆಯಾ ಇಲಾಖೆಗಳು ಇನ್ನಿಲ್ಲದ ಕಸರತ್ತು ನಡೆಸುತ್ತವೆ. ಸಿಬ್ಬಂದಿ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ. ಹಾಗೆ ವಶಪಡಿಸಿಕೊಂಡ ದಾಸ್ತಾನೇ ಮಾಯವಾದರೆ ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತದೆ. ಅಂಥದ್ದೇ ಪ್ರಕರಣವೊಂದು ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಅಕ್ರಮವಾಗಿ ಸಾಗಿಸುತ್ತಿದ್ದ ಶ್ರೀಗಂಧದ ಕಟ್ಟಿಗೆಯ ನಾಟುಗಳನ್ನು ಜಪ್ತಿ ಮಾಡಿ ಸಂಗ್ರಹಿಸಿಟ್ಟಿದ್ದ ಗೋದಾಮಿಗೆ ಅರಣ್ಯ ಇಲಾಖೆ ಸಿಬ್ಬಂದಿಯೇ ಕನ್ನ ಹಾಕಿದರೇ ಎಂಬ ಪ್ರಶ್ನೆ ಅರಣ್ಯ ಇಲಾಖೆ ಸಚಿವರ ತವರು ಜಿಲ್ಲೆಯ ನಾಗರಿಕರಲ್ಲಿ ಇದೀಗ ಉದ್ಭವವಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಫೆ.26ರಂದು ದೂರು ಕೂಡ ದಾಖಲಾಗಿದೆ. ತನಿಖೆ ನಡೆಸದೆ ಇಡೀ ಪ್ರಕರಣವನ್ನೇ ಮುಚ್ಚಿಹಾಕಲು ಯತ್ನಿಸುತ್ತಿರುವುದು ಮತ್ತಷ್ಟು ಅನುಮಾನ ಹುಟ್ಟುಹಾಕಿದೆ. ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಜಪ್ತಿಯಾದ ಅರಣ್ಯ ಸಂಪತ್ತು ಇಲಾಖೆಯ ಗೋದಾಮಿನಿಂದಲೂ ಕಳ್ಳತನ ಆಗುವುದಕ್ಕೆ ಕಾರಣಗಿದ್ದಾರೆ ಎಂದು ಉನ್ನತ ಅಧಿಕಾರಿಗಳೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಫೆಬ್ರವರಿಯಲ್ಲಿ ನಡೆದಿತ್ತು ಪರಿಶೀಲನೆ: 2019-20ನೇ ಸಾಲಿನಲ್ಲಿ ಅಕ್ರಮವಾಗಿ ಕಟ್ಟಿಗೆ ಸಾಗಿಸುತ್ತಿದ್ದ ಪ್ರಕರಣಗಳಲ್ಲಿ ವಿವಿಧ ಅರಣ್ಯ ಸಂಪತ್ತನ್ನು ನಗರದ ಎರಡು ಪ್ರಮುಖ ಪೊಲೀಸ್ ಠಾಣೆಗಳಿಗೆ ಅಂಟಿಕೊಂಡೇ ಇರುವ ಅರಣ್ಯ ಇಲಾಖೆಯ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು. ಅಲ್ಲಿ ಶ್ರೀಗಂಧ, ನೀರಗಂಧ, ಗುವಾಡಾ ಸೇರಿ ವಿವಿಧ ಜಾತಿಯ ಕಟ್ಟಿಗೆ ತುಂಡುಗಳು ಹಾಗೂ ವನ್ಯಮೃಗಗಳ ಚರ್ಮ, ಕೊಂಬು, ಸಾಗಣೆಗೆ ಬಳಸಿದ ವಾಹನಗಳು ಹಾಗೂ ಆಯುಧ ಇಡಲಾಗಿತ್ತು. ಆದರೆ, ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಿರಲಿಲ್ಲ. ಫೆ.12ರಂದು ಇಲಾಖೆ ಅಧಿಕಾರಿಗಳು ಈ ಗೋದಾಮಿನ ಕೀಲಿ ತೆಗೆದು ಪರಿಶೀಲನೆ ನಡೆಸಿದ್ದರು. ಅದಾದ ಹತ್ತು ದಿನದ ಬಳಿಕ ಸಿಬ್ಬಂದಿ ಗೋದಾಮಿನ ಬಳಿ ತೆರಳಿದ್ದಾಗ ಬಾಗಿಲದ ಚಿಲಕ ಮುರಿದು ಕಟ್ಟಿಗೆ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಬಳಿಕ ಆರ್‌ಎಫ್‌ಒ ವಿನಯ ಗೌಡರ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

1.47 ಲಕ್ಷ ರೂ.ಮೌಲ್ಯದ ಶ್ರೀಗಂಧ ಕಳವು: 13 ಅಡಿ ಉದ್ದ, 55 ಸೆ.ಮೀ ದಪ್ಪ ಇದ್ದ -11 ಕೆಜಿಯ ತುಂಡು (28,600 ರೂ.), 9.6 ಅಡಿ ಉದ್ದದ 47 ಸೆ.ಮೀ ದಪ್ಪ ಇದ್ದ 9 ಕೆಜಿ (23,400 ರೂ), 7.5 ಅಡಿ ಉದ್ದದ 45 ಸೆ.ಮೀ ದಪ್ಪ ಇದ್ದ 7 ಕೆಜಿ(18,200 ರೂ), 3.1 ಅಡಿ ಉದ್ದ, 56 ಸೆ.ಮೀ ದಪ್ಪ ಇದ್ದ 4.5 ಕೆಜಿ (11,700 ರೂ),
27 ಕೆಜಿಯ ಸಣ್ಣ ತುಂಡುಗಳು (21,600 ರೂ), 10.3 ಅಡಿ ಉದ್ದ, 52 ಸೆ.ಮೀ ದಪ್ಪ ಇದ್ದ 9 ಕೆಜಿ (23,400 ರೂ.) ಹಾಗೂ 9.8 ಅಡಿ ಉದ್ದ, 37 ಸೆ.ಮೀ ದಪ್ಪ ಇದ್ದ 8 ಕೆಜಿಯ ತುಂಡು (20,800 ರೂ) ಸೇರಿ ಒಟ್ಟು 75.5 ಕೆಜಿ ತೂಕದ 1.47 ಲಕ್ಷ ರೂ.ಮೌಲ್ಯದ ಶ್ರೀಗಂಧ ಕಳ್ಳತನವಾಗಿದೆ.

ಗೋದಾಮಿನಲ್ಲಿದ್ದ ಶ್ರೀಗಂಧ ಕಳ್ಳತನ ಯಾವಾಗ ನಡೆದಿದೆ ಎಂಬುದರ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಗೋದಾಮಿಗೆ ಕನಿಷ್ಠ ಸಿಸಿ ಟಿವಿ ಕ್ಯಾಮರಾ ಕೂಡ ಅಳವಡಿಸಿರಲಿಲ್ಲ ಎಂಬ ಮಾಹಿತಿ ಇದೆ. ಪ್ರಕರಣದ ತನಿಖೆ ನಡೆಯುತ್ತಿದೆ.|ಡಾ.ಎಂ.ಬಿ.ಬೋರಲಿಂಗಯ್ಯ ನಗರ ಪೊಲೀಸ್ ಆಯುಕ್ತಗೋದಾಮಿನ ಚಿಲಕ ಮುರಿದು ಶ್ರೀಗಂಧದ ಚಿಕ್ಕ ಚಿಕ್ಕ ತುಂಡು ಕದ್ದೊಯ್ಯಲಾಗಿದೆ. ಇನ್ನುಳಿದ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ. ಅರಣ್ಯ ಇಲಾಖೆ ಕಚೇರಿಯಲ್ಲಿನ ಶ್ರೀಗಂಧ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿಂತೆ ಇಲಾಖೆ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಿಲ್ಲ.| ವಿನಯ .ಎಸ್.ಗೌಡರ ಉಪವಲಯ ಅರಣ್ಯಾಧಿಕಾರಿ

| ರವಿ ಗೋಸಾವಿ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net