ಇಲಾಖೆ ಪರೀಕ್ಷಾ ಅಕ್ರಮ ಸಹಿಸುವುದಿಲ್ಲ

8 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ನಕಲು ವಿಧಾನವನ್ನು ಅವಲಂಬಿಸದಂತೆ ಅವರಲ್ಲಿ ಅಧ್ಯಯನದ ಆಸಕ್ತಿ ಹೆಚ್ಚಿಸಿ ಪಾರದರ್ಶಕ ಪರೀಕ್ಷೆಗಳ ಸಂಘಟನೆಗೆ ಶಿಕ್ಷಕರು ಶ್ರಮಿಸಬೇಕು. ಯಾವುದೇ ಸಂದರ್ಭದಲ್ಲಿ ಪರೀಕ್ಷಾ ಅಕ್ರಮಗಳನ್ನು ಇಲಾಖೆ ಸಹಿಸುವುದಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ಕಿತ್ತೂರು ಕರ್ನಾಟಕ ವಲಯದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಹೇಳಿದರು.
ನಗರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರೌಢ ಶಾಲಾ ಶಿಕ್ಷಕರ ಬೆಳಗಾವಿ ವಿಭಾಗ ಮಟ್ಟದ ಚಿತ್ರಕಲಾ ಶಿಕ್ಷಕರ ಚಿತ್ರಕಲಾಕೃತಿಗಳ ರಚನಾ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಹ್ಯಾಕಾಶ ಸಂಶೋಧನೆಯೂ ಸೇರಿ ಅನೇಕ ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯಲ್ಲಿ ಹೆಜ್ಜೆ ಹಾಕುತ್ತಿದೆ. ಹಾಗಾಗಿ ಭಾರತ ಉತ್ಕೃಷ್ಟ ಮಾನವ ಸಂಪನ್ಮೂಲವನ್ನು ಅಪೇಕ್ಷಿಸುತ್ತಿದೆ. ಇದಕ್ಕೆ ಪೂರಕವಾಗಿ ಶಾಲಾ ಶಿಕ್ಷಣದ ಬೋಧನೆ ರೂಪುಗೊಳ್ಳಬೇಕು ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಂಜೀವ ಬಿಂಗೇರಿ, ಹಿರಿಯ ಚಿತ್ರಕಲಾ ಪರಿವೀಕ್ಷಕ ಪಿ.ಆರ್. ಬಾರಕೇರ, ವೃತ್ತಿ ಶಿಕ್ಷಣದ ಹಿರಿಯ ಸಹಾಯಕ ನಿರ್ದೇಶಕ ಬಿ.ವೈ. ಭಜಂತ್ರಿ, ಸರ್ಕಾರಿ ಚಿತ್ರಕಲಾ ಕಾಲೇಜಿನ ಪ್ರಾಚಾರ್ಯ ಡಾ. ಬಸವರಾಜ ಕುರಿ, ಸಾರ್ವಜನಿಕ ಸಂಪರ್ಕಾಧಿಕಾರಿ ಸುಜಾತಾ ತಿಮ್ಮಾಪುರ, ಇ-ಆಡಳಿತ ನಿರ್ವಹಣಾಧಿಕಾರಿ ಶಾಂತಾ ಮೀಸಿ, ಇತರರು ಇದ್ದರು.
ಬೆಳಗಾವಿ, ಬಾಗಲಕೋಟ, ವಿಜಯಪುರ, ಉತ್ತರಕನ್ನಡ, ಧಾರವಾಡ, ಗದಗ, ಹಾವೇರಿ, ಶಿರಸಿ, ಚಿಕ್ಕೋಡಿ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಗಳ 50 ಚಿತ್ರಕಲಾ ಶಿಕ್ಷಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net