ಇಲಾಖೆ ಅಧಿಕಾರಿಗಳ ಜತೆ ಸುರ್ಜೇವಾಲಾ ಚರ್ಚಿಸಿಲ್ಲ - ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Laxmi
Published on

ಬೆಳಗಾವಿ: ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಸಚಿವರು, ಶಾಸಕರನ್ನು ಕರೆದು ಚರ್ಚಿಸಿದ್ದಾರೆ. ಆದರೆ, ಇಲಾಖೆ ಅಧಿಕಾರಿಗಳನ್ನು ಕರೆದು ಚರ್ಚಿಸಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಗಳಲ್ಲಿನ ಅಭಿವೃದ್ಧಿ ಕೆಲಸಗಳು, ಯೋಜನೆಗಳ ಅನುಷ್ಠಾನ, ಅಭಿವೃದ್ಧಿ ಕೆಲಸ ಹೇಗೆ ನಡೆಯುತ್ತಿವೆ ಎಂಬುದರ ಕುರಿತು ಕೇಳಿದ್ದಾರೆ. ಮೂರು ತಿಂಗಳಿಗೊಮ್ಮೆ ನಡೆಯುವ ರೂಟಿನ್ ಕೆಲಸ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸೆಪ್ಟೆಂಬರ್‌ನಲ್ಲಿ ರಾಜ್ಯ ರಾಜಕಾರಣದಲ್ಲಿ ಕ್ರಾಂತಿಯಾಗುತ್ತದೆ ಎಂಬ ಹೇಳಿಕೆಗೆ ಅವರನ್ನೇ ನೀವು ಕೇಳಿ. ನಮ್ಮದು ಹೈಕಮಾಂಡ್ ಹೇಳಿದಂತೆ ನಡೆಯುವ ಪಕ್ಷ. ಈ ವಿಚಾರವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು.

ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಬಹಳ ವರ್ಷಗಳಿಂದ ಹೋರಾಟ ನಡೆದಿದೆ. ನಾವು ಕುಡಿಯುವ ನೀರಿಗಾಗಿ ನೀರು ಕೇಳುತ್ತಿದ್ದೇವೆಯೇ ಹೊರತು, ನೀರಾವರಿಗಾಗಿ ಅಲ್ಲ. ಈ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ಗೋವಾ ಸರ್ಕಾರವೂ ಒಪ್ಪಿದೆ ಎಂದು ಬಿಜೆಪಿಯವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಹೇಳಿ ಸಿಹಿ ಹಂಚಿದರು. ಈ ವಿಷಯವನ್ನು ಚುನಾವಣಾ ಅಸ್ತ್ರವಾಗಿ ಮಾಡಿಕೊಂಡರು. ಈಗ ಯೋಜನೆ ಬಗ್ಗೆ ಮಾತನಾಡುತ್ತಿಲ್ಲ .ಮಹದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡುತ್ತಿದೆ ಎಂಬ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿಕೆಗೆ, ಕುಡಿಯುವ ನೀರು, ಆರೋಗ್ಯ ಮತ್ತು ಶಿಕ್ಷಣದ ವಿಚಾರದಲ್ಲಿ ರಾಜಕೀಯ ಮಾಡುವ ಅನಿವಾರ್ಯತೆ ಕಾಂಗ್ರೆಸ್‌ಗೆ ಇಲ್ಲ ಎಂದರು.

ಕರ್ನಾಟಕ ಅಥವಾ ಗೋವಾ ಭಾರತದ ಅವಿಭಾಜ್ಯ ಅಂಗಗಳು. ಗೋವಾದಿಂದ ಚಿಕಿತ್ಸೆ, ವ್ಯವಹಾರಕ್ಕಾಗಿ ಅನೇಕರು ಕರ್ನಾಟಕಕ್ಕೆ ಬರುತ್ತಾರೆ. ಕರ್ನಾಟಕದವರು ಅಲ್ಲಿಗೆ ಹೋಗುತ್ತಾರೆ. ಗೋವಾ ರಾಜ್ಯಕ್ಕೆ ಬೇರೆ ರಾಜ್ಯದವರು ಹೋಗದಿದ್ದರೆ ಪ್ರವಾಸೋದ್ಯಮ ಬೆಳೆಯುವುದಿಲ್ಲ. ಕನ್ನಡಿಗರ ಮೇಲೆ ಹಲ್ಲೆ ಮಾಡುವುದು ತಪ್ಪು. ಅಲ್ಲಿನ ಸರ್ಕಾರ ಮಧ್ಯಸ್ಥಿಕೆ ವಹಿಸಿ ಇದನ್ನು ಸರಿಪಡಿಸಬೇಕೇ ಹೊರತು, ಸರ್ಕಾರ ಮೌನ ವಹಿಸಬಾರದು. ಗಡಿ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರ ಗಮನಕ್ಕೆ ಈ ವಿಷಯ ತರುತ್ತೇನೆ ಎಂದರು.

ರಾಜ್ಯದಲ್ಲಿ ಅಪೆಕ್ಸ್ ಬ್ಯಾಂಕ್ ಬಿಟ್ಟರೆ, ಡಿಸಿಸಿ ಬ್ಯಾಂಕ್ ದೊಡ್ಡದು. ಸಚಿವ ಸತೀಶ ಜಾರಕಿಹೊಳಿ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ ಅವರೊಂದಿಗೆ ಚರ್ಚಿಸಿ, ಚುನಾವಣೆ ವಿಷಯವಾಗಿ ಹೆಜ್ಜೆ ಇರಿಸುತ್ತೇವೆ. ರೈತರಿಗೆ ಅನುಕೂಲವಾಗುವ ದಿಸೆಯಲ್ಲಿ ನಿರ್ಣಯ ಕೈಗೊಳ್ಳುತ್ತೇವೆ. ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸ್ಪರ್ಧಿಸುವ ಬಗ್ಗೆ ಚರ್ಚಿಸಿಲ್ಲ. | ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net