

ಹುಬ್ಬಳ್ಳಿ: ಧಾರವಾಡದ ರೌಡಿಶೀಟರ್ ಫ್ರೂಟ್ ಇರ್ಫಾನ್ ಹತ್ಯೆಗೆ 10 ಲಕ್ಷ ರೂ. ಸುಪಾರಿ ನೀಡಲಾಗಿತ್ತು. ಹತ್ಯೆ ಹಿಂದೆ ಮುಂಬೈ ಮೂಲದ , ಮೈಸೂರು ಜೈಲಿನಲ್ಲಿರುವ ಕುಖ್ಯಾತ ರೌಡಿ ಬಚ್ಚಾಖಾನ್ ಪಾತ್ರವೂ ಇದೆ ಎಂಬುದನ್ನು ಪೊಲೀಸರು ತನಿಖೆಯಿಂದ ಕಂಡುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಫ್ರೂಟ್ ಇರ್ಫಾನ್ ಕೊಲ್ಲಲು ಮುಂಬೈ ಮೂಲದ ಯುವಕರಿಗೆ 10 ಲಕ್ಷ ರೂ.ಗೆ ಸುಪಾರಿ ನೀಡಲಾಗಿತ್ತು. ರಿಯಲ್ ಎಸ್ಟೇಟ್ ವ್ಯವಹಾರದ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗಿದ್ದು, ಧಾರವಾಡದ ವ್ಯಕ್ತಿಯೊಬ್ಬ ಬಚ್ಚಾಖಾನ್ ಮೂಲಕ ಕೃತ್ಯ ಮಾಡಿಸಿರುವುದಾಗಿ ತಿಳಿದುಬಂದಿದೆ.
ಬೈಕ್ ಸವಾರರು ವಶಕ್ಕೆ: ಹಳೇ ಹುಬ್ಬಳ್ಳಿ ದೇವರಗುಡಿಹಾಳದ ಅಲ್ತಾಜ್ ಹೋಟೆಲ್ ಎದುರು ಇರ್ಫಾನ್ ಶೂಟೌಟ್ ವೇಳೆ ಬುಲೆಟ್ ಹಾಗೂ ಡಿಯೋ ಬೈಕ್ ಸವಾರಿ ಮಾಡಿದ್ದ ಇಬ್ಬರು ಯುವಕರು ಪೊಲೀಸ್ ವಶದಲ್ಲಿದ್ದಾರೆ.
ಒಂದು ಮೂಲದ ಪ್ರಕಾರ ಈ ಯುವಕರು ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಶೂಟೌಟ್ ಬಳಿಕ ಧಾರವಾಡದ ಗ್ಯಾರೇಜ್ ಒಂದರ ಬಳಿ ಬೈಕ್ಗಳನ್ನು ಇಟ್ಟು, ಕಾರಿನಲ್ಲಿ ತಲೆಮರೆಸಿಕೊಂಡಿದ್ದರು. ನಿಪ್ಪಾಣಿ, ಬೆಳಗಾವಿ, ಮೈಸೂರು ಮತ್ತಿತರ ಕಡೆಗಳಲ್ಲಿ ಸುತ್ತಾಡಿ ಮರಳಿದ ಅವರು, ಭಯದಿಂದ ಬಂದು ಪೊಲೀಸರಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇನ್ನೊಂದು ಮೂಲದ ಪ್ರಕಾರ, ಅವರು ಧಾರವಾಡಕ್ಕೆ ಬರುತ್ತಿದ್ದಂತೆ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.
ಪ್ರಮುಖ ಹಂತಕರು ಮುಂಬೈ ಕಡೆಯವರಾಗಿದ್ದು, ಪರಾರಿಯಾಗಿದ್ದಾರೆ. ಪೊಲೀಸ್ ತನಿಖೆ ನಡೆದಿದೆ.