

ಹುಬ್ಬಳ್ಳಿ: ಧಾರವಾಡದ ರೌಡಿಶೀಟರ್ ಫ್ರೂಟ್ ಇರ್ಫಾನ್ ಶೂಟೌಟ್ ಪ್ರಕರಣದಲ್ಲಿ ಮೈಸೂರು ಜೈಲಿನಲ್ಲಿರುವ ಮುಂಬೈ ಮೂಲದ ರೌಡಿ ಬಚ್ಚಾಖಾನ್ ಹೆಸರು ಕೇಳಿ ಬರುತ್ತಿದೆ. ಆತನ ಶಿಷ್ಯರು ಪಿಸ್ತೂಲ್ ಸರಬರಾಜು ಮಾಡಿದ್ದು, ಆತನ ಬೆಂಬಲಿಗರೂ ಭಾಗಿಯಾಗಿದ್ದಾರೆಯೆ ಎಂಬ ಅನುಮಾನ ವ್ಯಕ್ತವಾಗಿದೆ.
ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳ ಆಧಾರದ ಮೇಲೆ ಧಾರವಾಡ ಮೂಲದ ಮೂವರು ಯುವಕರ ಗುರುತು ಖಚಿತಪಡಿಸಿಕೊಂಡಿರುವ ಪೊಲೀಸರಿಗೆ ವಿಚಾರಣೆ ವೇಳೆ ಹಲವು ಮಹತ್ವದ ಮಾಹಿತಿಗಳು ಲಭ್ಯವಾಗಿವೆ. ಹಲವರ ವಿಚಾರಣೆ ನಡೆದಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ. ಪ್ರಕರಣದಲ್ಲಿ ಬಚ್ಚಾಖಾನ್ ಶಿಷ್ಯನಾಗಿರುವ ಮುಂಬೈ ಮೂಲದ ಯುವಕನೊಬ್ಬ ಅಲ್ಲಿಂದ ಪಿಸ್ತೂಲ್ ತಂದು, ಸ್ವತಃ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಮುಂಬೈ ಮೂಲದ ಬಚ್ಚಾಖಾನ್ನನ್ನು ಕೆಲವು ವರ್ಷದ ಹಿಂದೆ ಧಾರವಾಡ ಕಾರಾಗೃಹಕ್ಕೆ ಕರೆತಂದು ಇಡಲಾಗಿತ್ತು. ಅದೇ ಜೈಲಿನಲ್ಲಿದ್ದ ಧಾರವಾಡ ಮೂಲದ ಕೆಲವು ಅಪರಾಧಿಕ ಪ್ರವೃತ್ತಿಯವರು ಬಚ್ಚಾಖಾನ್ ಜತೆ ಸ್ನೇಹ ಸಾಧಿಸಿದ್ದರು. ಮಹಾರಾಷ್ಟ್ರದಿಂದ ತನ್ನ ಶಿಷ್ಯರ ಮೂಲಕ ಅಕ್ರಮ ಶಸ್ತ್ರಾಸ್ತ್ರವನ್ನು ಬಚ್ಚಾಖಾನ್ ಕಳುಹಿಸಿಕೊಟ್ಟಿರುವ ಅನುಮಾನ ಮೂಡಿದೆ. ಈ ಆಯಾಮದಲ್ಲೂ ತನಿಖೆ ನಡೆದಿರುವುದರಿಂದ ಕುತೂಹಲ ಹೆಚ್ಚಿದೆ.