

ಮೈಸೂರು: ನಿರಂತರವಾಗಿ ಇಯರ್ ಫೋನ್ ಬಳಕೆಯಿಂದ ಭವಿಷ್ಯದಲ್ಲಿ ಕಿವುಡುತನ ಸಮಸ್ಯೆ ಸೃಷ್ಟಿಯಾಗುವ ಆತಂಕ ಎದುರಾಗಿದೆ ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಪ್ರಭಾರ ನಿರ್ದೇಶಕಿ ಪ್ರೊ.ಮಂಜುಳಾ ಕಳವಳ ವ್ಯಕ್ತಪಡಿಸಿದರು.
ನಗರದ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ 63ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿನದಿಂದ ದಿನಕ್ಕೆ ಮೊಬೈಲ್ ಬಳಕೆ ಅತಿಯಾಗುತ್ತಿದೆ. ಜತೆಗೆ, ಇಯರ್ ಫೋನ್ ಹಾಕಿಕೊಂಡು ನಿರಂತರವಾಗಿ ಮಾತನಾಡುವುದು, ಸಂಗೀತ ಕೇಳುವ ಅಭ್ಯಾಸವೂ ಹೆಚ್ಚಾಗುತ್ತಿದೆ.
ಈ ರೀತಿ ದೀರ್ಘಕಾಲ ಬಳಕೆಯಿಂದ ಕಿವುಡತನ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದು ಭವಿಷ್ಯದಲ್ಲಿ ಗಂಭೀರ ಆರೋಗ್ಯ ಸಮಸ್ಯೆಯಾಗಿ ಕಾಡಲಿದೆ. ಆದ್ದರಿಂದ ಈ ಕುರಿತು ಅರಿವು ಮೂಡಿಸಬೇಕಿದೆ ಎಂದರು.
ಎನ್‌ಸಿಇಆರ್‌ಟಿ ನಿರ್ದೇಶಕ ಪ್ರೊ.ದಿನೇಶ್ ಪ್ರಸಾದ್ ಸಕ್ಲಾನಿ ಆನ್‌ಲೈನ್ ಮೂಲಕ ಮಾತನಾಡಿದರು. ಡಾ.ಅನಿಲ್‌ಕುಮಾರ್, ಆರ್‌ಐಇ ಪ್ರಾಂಶುಪಾಲ ಪ್ರೊ.ಪ್ರದ್ಯುಮ್ನ ಕುಮಾರ್ ಸೇಠಿ, ಡಾ.ವಿ.ಪ್ರಸಾದ್, ಡಾ.ಬಿ.ಸುಜಾತಾ ಇನ್ನಿತರರಿದ್ದರು.