ಇಮ್ಮಡಿಗೆ ‘ಜೈಲೇ ಗತಿ’

Emmadi Mahadevaswamy
Published on

ಚಾಮರಾಜನಗರ : ದೇಶವನ್ನೇ ಬೆಚ್ಚಿ ಬೀಳಿಸಿದ್ದ ಗಡಿಜಿಲ್ಲೆ ಚಾಮರಾಜನಗರ ಹೈಪ್ರೊೈಲ್ ಕೇಸ್‌ನ ಪ್ರಮುಖ ಆರೋಪಿಗೆ ಜೈಲಿನಿಂದ ಹೊರ ಬರಬೇಕೆಂಬ ಕನಸು ಮತ್ತೆ ಭಗ್ನವಾಗಿದೆ.

2018ರ ಡಿ.14ರಲ್ಲಿ ಹನೂರು ತಾಲೂಕಿನ ಸುಳವಾಡಿಯ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ ನಡೆದಿದ್ದ ವಿಷ ಪ್ರಸಾದ ಪ್ರಕರಣ ಬೆಚ್ಚಿ ಬೀಳಿಸಿತ್ತು. ಜೈಲಿನಲ್ಲಿರುವ ಈ ಕೇಸ್‌ನ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಬಂಧನದಿಂದ ಹೊರಬರಬೇಕೆಂಬ ಪ್ರಯತ್ನ ಮತ್ತೆ ವಿಲವಾಗಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇಮ್ಮಡಿ ಮಹದೇವಸ್ವಾಮಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಬುಧವಾರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಅವರು ಜಾಮೀನು ನಿರಾಕರಿಸಿದ್ದಾರೆ.

ಮೂರನೇ ಬಾರಿಗೆ ಪ್ರಯತ್ನ: ಜಾಮೀನಿಗಾಗಿ ಸುಪ್ರೀಂಕೋರ್ಟ್‌ವರೆಗೂ ಹೋಗಿರುವ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಿಲ್ಲಾ ನ್ಯಾಯಾಲಯದಲ್ಲಿ ಮೂರನೇ ಬಾರಿಗೆ ಪ್ರಯತ್ನ ನಡೆಸಿ ಸೋತಿರೋದು. ಜಿಲ್ಲಾ ನ್ಯಾಯಾಲಯ, ಹೈ ಕೋರ್ಟ್, ಸುಪ್ರೀಂಕೋರ್ಟ್‌ಗೆ ಹೋಗಿ ಜಾಮೀನು ಕೋರಿ ಸಲ್ಲಿಸಿದ್ದ ಹಿನ್ನಡೆ ಅನುಭವಿಸಿದ್ದರು. ಮತ್ತೆ ಪ್ರಯತ್ನ ಬಿಡದೆ ಜಿಲ್ಲಾ ಕೋರ್ಟ್‌ಗೆ ಮೂರೇ ಬಾರಿಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಎರಡು ಬಾರಿ ಅರ್ಜಿ ತಿರಸ್ಕಾರಗೊಂಡಂತೆ ಮೂರನೇ ಬಾರಿಯೂ ಸಹ ಅರ್ಜಿ ತಿರಸ್ಕಾರವಾಗಿದೆ. ಈ ಪ್ರಕರಣದ ಉಳಿದ ಆರೋಪಿಗಳಾದ ಅಂಬಿಕಾ, ಮಾದೇಶ್ ಮತ್ತು ದೊಡ್ಡಯ್ಯ ಕೂಡ ಜೈಲಿನಲ್ಲಿದ್ದಾರೆ. ಇವರೂ ಸಹ ಜಾಮೀನು ಪಡೆಯಲು ಪ್ರಯತ್ನ ನಡೆಸಿದ್ದಾರೆ.

ಈ ಪ್ರಕರಣವು ದೇಶದಲ್ಲೇ ದೊಡ್ಡ ಸದ್ದು ಮಾಡಿತ್ತು. ಪ್ರಕರಣದಲ್ಲಿ ಸಂತ್ರಸ್ತರು ಇಂದಿಗೂ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ಕೇಸ್‌ನ ಬೆಳವಣಿಗೆ ಕುರಿತು ಸಾರ್ವಜನಿಕರಿಗೆ ಕುತೂಹಲ ಹೆಚ್ಚು. ಇಮ್ಮಡಿ ಮಹದೇವಸ್ವಾಮಿಯ ಜಾಮೀನು ಅರ್ಜಿ ವಿಚಾರಣೆ ಏನಾಗಬಹುದು ಎನ್ನುವ ಕುತೂಹಲ ಮನೆ ಮಾಡಿತ್ತು.

ಏನಿದು ಘಟನೆ?: 2018ರ ಡಿ.14ರಂದು ಸುಳವಾಡಿಯ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ದೇಗುಲಕ್ಕೆ ಬರುವ ಭಕ್ತರಿಗೆ ವಿತರಿಸಲು ಪ್ರಸಾದ (ರೈಸ್ ಬಾತ್) ತಯಾರಿಸಲಾಗಿತ್ತು. ಇದನ್ನು ಸೇವಿಸಿದ ಭಕ್ತರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದರು. ಪ್ರಸಾದದಲ್ಲಿ ವಿಷ ಮಿಶ್ರಣವಾಗಿರುವುದು ತಿಳಿಯಿತು. ಇದನ್ನು ಸೇವಿಸಿದ್ದ 17 ಭಕ್ತರು ಮೃತಪಟ್ಟರು. 120ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡರು. ತನಿಖೆ ನಡೆಸಿದ ಪೊಲೀಸರು ಸಾಲೂರು ಮಠದ ಅಂದಿನ ಕಿರಿಯ ಶ್ರೀಗಳಾಗಿದ್ದ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ್, ದೊಡ್ಡಯ್ಯನನ್ನು ಬಂಧಿಸಿದರು.

ಮಾರಮ್ಮನ ದರ್ಶನ: ವಿಷ ಪ್ರಸಾದ ಪ್ರಕರಣದ ಬಳಿಕ ಕಿಚ್ಚುಗುತ್ತಿ ಮಾರಮ್ಮನ ದೇಗುಲವನ್ನು ಬಂದ್ ಮಾಡಲಾಗಿತ್ತು. ಭಕ್ತರು ದೇಗುಲದ ಹೊರಗೆ ನಿಂತು ಕೈ ಮುಗಿದು ಹೋಗುತ್ತಿದ್ದರು. 22 ತಿಂಗಳ ಬಳಿಕ ಸರ್ಕಾರದಿಂದ ದೇಗುಲದ ಬಾಗಿಲು ತೆರೆಯಲಾಯಿತು. ಪೂಜೆ-ಹೋಮ, ಹವನಗಳನ್ನು ಮಾಡಿ ಭಕ್ತರಿಗೆ ಮಾರಮ್ಮನ ದರ್ಶನದ ಭಾಗ್ಯ ಲಭಿಸಿತು. ದೇಗುಲಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. ತಮಿಳುನಾಡಿನಿಂದಲೂ ಸಹ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ.

ಸಂತ್ರಸ್ತರಿಗೆ ಆರೋಗ್ಯದ್ದೇ ಚಿಂತೆ: ಕಿಚ್ಚುಗುತ್ತಿ ಮಾರಮ್ಮನ ದೇಗುಲದಲ್ಲಿ ವಿಷ ಪ್ರಸಾದ ಸೇವಿಸಿ ಅಸ್ವಸ್ಥರಾಗಿದ್ದವರು ಇಂದಿಗೂ ಸಹ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ ಎನ್ನುತ್ತಾರೆ. ಮೃತರ ಕುಟುಂಬಕ್ಕೆ ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಜಮೀನು ನೀಡುವುದಾಗಿ ಭರವಸೆ ನೀಡಿದ್ದರು. ಈ ಆಶ್ವಾಸನೆ ಇನ್ನೂ ಈಡೇರಿಲ್ಲ. ಬಿದರಹಳ್ಳಿ ಗ್ರಾಮದಲ್ಲಿ ಪ್ರೌಢಶಾಲೆ ತೆರೆಯುವುದಾಗಿ ಹೇಳಿದ್ದರು. ಈ ಭರವಸೆಯೂ ಕಾರ್ಯಗತವಾಗಿಲ್ಲ.

ವರ್ಗಾವಣೆ ಖಂಡಿಸಿದ್ದ ಸಂಘಟನೆಗಳು: ಈ ಕೇಸ್‌ನಲ್ಲಿ ಸಂತ್ರಸ್ತರ ಪರವಾಗಿ ವಾದ ಮಾಡುತ್ತಿದ್ದ ಟಿ.ಎಚ್.ಲೋಲಾಕ್ಷಿ ಅವರನ್ನು ಮೈಸೂರಿನ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ಸುದ್ದಿ ಸಾರ್ವಜನಿಕ ವಲದಯಲ್ಲಿ ಚರ್ಚೆಗೆ ಗ್ರಾಸವಾಗಿ ವಿರೋಧ ವ್ಯಕ್ತವಾಗಿತ್ತು. ಕೊಳ್ಳೇಗಾಲದಲ್ಲಿ ಪ್ರಗತಿ ಪರ ಸಂಘಟನೆಗಳು ಟಿ.ಎಚ್.ಲೋಲಾಕ್ಷಿ ಅವರ ವರ್ಗಾವಣೆಯನ್ನು ಖಂಡಿಸಿದ್ದವು. ಬಳಿಕ ಲೋಲಾಕ್ಷಿ ಅವರನ್ನು ಈ ಪ್ರಕರಣದ ವಿಚಾರಣೆಗಾಗಿ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ರಾಜ್ಯ ಸರ್ಕಾರ ನೇಮಿಸಿತು. ಪ್ರಕರಣದ ವಿಚಾರಣೆ ದಿನಾಂಕದಂದು ನ್ಯಾಯಾಲದಲ್ಲಿ ಹಾಜರಿದ್ದು, ಪ್ರಕರಣವನ್ನು ನಡೆಸುವಂತೆ ಸೂಚಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net