ಇಮೇಜ್ ವೃದ್ಧಿಗೆ ಹಳ್ಳಿ ಕಡೆಗೆ ಸಿಪಿವೈ

3
Published on

ಚನ್ನಪಟ್ಟಣ: ಸಚಿವ ಸಂಪುಟ ಸೇರುವ ಗುಂಗಿನಿಂದ ಹೊರಬಂದಂತಿರುವ ಮಾಜಿ ಸಚಿವ ಯೋಗೇಶ್ವರ್ ಅವರು ಪಕ್ಷ ಬಲವರ್ಧನೆ ಹಾಗೂ ಇಮೇಜ್ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ತಾಲೂಕಿನ ವಿವಿಧ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿದ ಅವರು, ಅನ್ಯಪಕ್ಷದ ಮುಖಂಡರನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ತಾಲೂಕು ರಾಜಕೀಯದಲ್ಲಿ ಸಕ್ರಿಯಗೊಳ್ಳುವ ಸಂದೇಶ ರವಾನಿಸಿರುವ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ಧ್ರುವೀಕರಣದ ಮುನ್ಸೂಚನೆ ನೀಡಿದ್ದಾರೆ.

ಸಿಪಿವೈ ಸಕ್ರಿಯ

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ನಂತರ, ಕ್ಷೇತ್ರದಿಂದ ಕೊಂಚಮಟ್ಟಿನ ಅಂತರ ಕಾಯ್ದುಕೊಂಡಿದ್ದ ಯೋಗೇಶ್ವರ್, ಸರ್ಕಾರ ಉರುಳಿಸುವ, ಸಿಎಂ ಗಾದಿಯಿಂದ ಇಳಿಸುವ, ಏರಿಸುವ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಈ ಮಧ್ಯೆ ಸಚಿವ ಸಂಪುಟ ಸೇರುವ ನಿಟ್ಟಿನಲ್ಲಿ ತಮ್ಮೆಲ್ಲ ಸಮಯ ಹಾಗೂ ಶ್ರಮ ವ್ಯಯಿಸಿದ್ದರು. ಈ ಮೂಲಕ ಕ್ಷೇತ್ರಕ್ಕೆ ಬಂದು ಹೋಗುತ್ತಿದ್ದರೂ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಲಿಲ್ಲ. ಈ ಮಧ್ಯೆ ಸಿ.ಪಿ.ಯೋಗೇಶ್ವರ್ ಬಿಜೆಪಿಯಿಂದ ದೂರವಾಗುತ್ತಾರೆ, ಮತ್ತೆ ಕಾಂಗ್ರೆಸ್‌ಗೆ ವಾಪಸ್ ಆಗುತ್ತಾರೆ ಎಂಬ ಮಾತುಗಳು ದಟ್ಟವಾಗಿದ್ದವು. ಆದರೆ, ಈ ವಿಚಾರವನ್ನು ಇತ್ತೀಚೆಗೆ ಅಲ್ಲಗೆಳೆದಿದ್ದ ಅವರು, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಲ್ಲ, ಬಿಜೆಪಿ ಬಿಡೋಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದರ ಹಿಂದೆಯೇ ತಾಲೂಕು ರಾಜಕಾರಣದ ಬಗ್ಗೆ ಚಿತ್ತ ಹರಿಸಿರುವ ಅವರು, ಪಕ್ಷದ ಮುಖಂಡರ ಜತೆ ಪಕ್ಷದ ಸಂಘಟನೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.

ಮಾಹಿತಿ ಕಲೆ ಹಾಕಿರುವ ಸೈನಿಕ

ತಾಲೂಕಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡಿರುವ ಎರಡನೇ ಹಾಗೂ ಮೂರನೇ ಹಂತದ ನಾಯಕರು ಹಾಗೂ ಕಾರ್ಯಕರ್ತರ ಪಟ್ಟಿಯನ್ನು ಆಪ್ತರ ಮೂಲಕ ಸಂಗ್ರಹಿಸಿರುವ ಸಿಪಿವೈ, ಹಂತ ಹಂತವಾಗಿ ಅವರನ್ನು ಸೆಳೆಯಲು ಯೋಜನೆ ರೂಪಿಸಿದ್ದಾರೆ. ಕಾರ್ಯಕರ್ತರ ಮೂಲಕ ಅವರನ್ನು ಮನವೊಲಿಸುವ ನಂತರ ಖುದ್ದು ಪಕ್ಷಕ್ಕೆ ಕರೆತರುವ ಚಿಂತನೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಜೆಡಿಎಸ್ ಮುಖಂಡರು ಬಿಜೆಪಿಗೆ

ತಾಲೂಕಿನ ಸುಳ್ಳೇರಿ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ್ದ ಅವರು, ಕೆಲ ಜೆಡಿಎಸ್ ಮುಖಂಡರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಇನ್ನು ಕೆಲ ಮುಖಂಡರ ಜತೆ ಮಾತುಕತೆ ನಡೆಸಿದ್ದು, ಮುಂದಿನ ಚುನಾವಣೆಯಲ್ಲಿ ನನ್ನೊಂದಿಗೆ ನಿಲ್ಲಬೇಕು, ನಾನೂ ಸಹ ನಿಮ್ಮೊಂದಿಗೆ ಇರುತ್ತೇನೆ. ನನಗೆ ಶಕ್ತಿ ತುಂಬುವ ಕೆಲಸ ಮಾಡಿ ಎಂದು ಮನವೊಲಿಸಿದ್ದಾರೆ. ಇದರೊಂದಿಗೆ ಹಲವು ರಾಜಕೀಯ ಚರ್ಚೆ ನಡೆಸಿರುವ ಅವರು, ಮುಖಂಡರ ಮನವೊಲಿಸುವಲ್ಲಿ ಸಫಲಗೊಂಡಿದ್ದಾರೆ.

ಹಲವರ ಸಂಪರ್ಕ?

ವಿಶೇಷವಾಗಿ ಜೆಡಿಎಸ್ ಮುಖಂಡರಿಗೆ ಗಾಳ ಹಾಕುತ್ತಿರುವ ಯೋಗೇಶ್ವರ್ ಕ್ಷೇತ್ರದಲ್ಲಿ ಪ್ರಬಲ ಎದುರಾಳಿಗೆ ಈ ಮೂಲಕ ಸೆಡ್ಡು ಹೊಡೆಯಲು ಯೋಜನೆ ರೂಪಿಸಿದ್ದಾರೆ. ಸ್ಥಳೀಯ ಮುಖಂಡರಲ್ಲಿ ಇರುವ ಭಿನ್ನಾಭಿಪ್ರಾಯ, ಪಕ್ಷದ ವರಿಷ್ಠರ ನಡೆಯಿಂದ ಅಸಮಾಧಾನಗೊಂಡಿರುವವರ ಸಂಪರ್ಕ ಸಾಧಿಸಿದ್ದಾರೆ. ಆ ಮುಖಂಡರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಮುಂದಿನ ದಿನಗಳಲ್ಲಿ ಜತೆಗೂಡುವ ಭರವಸೆ ನೀಡಿದ್ದಾರೆ. ಒಟ್ಟಾರೆ, ತಾಲೂಕು ರಾಜಕಾರಣದಲ್ಲಿ ಇಮೇಜ್ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಯೋಗೇಶ್ವರ್ ಮುಂದಡಿ ಇಟ್ಟಿದ್ದು, ಗುರುವಾರ ಜಾನಪದ ಲೋಕದಲ್ಲಿ ಮತ್ತೊಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net