ಇಬ್ರಾಹಿಂ ಉಚ್ಚಾಟನೆ ಪಕ್ಷದ ಎಲ್ಲರ ತೀರ್ಮಾನ:ಶಾಸಕ ಎ.ಮಂಜು

ಇಬ್ರಾಹಿಂ ಉಚ್ಚಾಟನೆ ಪಕ್ಷದ ಎಲ್ಲರ ತೀರ್ಮಾನ:ಶಾಸಕ ಎ.ಮಂಜು
Published on

ಹಾಸನ: ಪಕ್ಷಗಳು ಹೊಂದಾಣಿಕೆಯಾದ ಮಾತ್ರಕ್ಕೆ ಆಯಾ ಪಕ್ಷಗಳು ತಮ್ಮ ತತ್ವ ಸಿದ್ಧಾಂತ ಬಿಟ್ಟುಕೊಡಬೇಕು ಎಂದೇನಿಲ್ಲ ಎಂದು ಶಾಸಕ ಎ. ಮಂಜು ಹೇಳುವ ಮೂಲಕ ಜೆಡಿಎಸ್-ಬಿಜೆಪಿ ಮೈತ್ರಿಯನ್ನು ಬೆಂಬಲಿಸಿ ಮಾತನಾಡಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡ ತಕ್ಷಣ ಜಾತ್ಯತೀತ ತತ್ವ ಬದಲಾವಣೆ ಆಗಲ್ಲ. ಈ ಹಿಂದೆ ರಾಮಕೃಷ್ಣ ಹೆಗ್ಡೆ, ಬಂಗಾರಪ್ಪ ಅವರು ಇದ್ದಾಗ ಬಿಜೆಪಿ ಜತೆ ಜನತಾ ದಳ ಹೊಂದಾಣಿಕೆ ಮಾಡಿಕೊಂಡಿರಲಿಲ್ಲವೇ? ಈಗ ಯಾಕೆ ಅದರ ಬಗ್ಗೆ ಮಾತನಾಡುತ್ತಾರೆ. ಇಂದಿನ ರಾಜಕೀಯದಲ್ಲಿ ಯಾರೂ ಶತ್ರಗಳಲ್ಲ, ಯಾರು ಮಿತ್ರರೂ ಅಲ್ಲ. ಈಗ ನಮಗೆ ಕಾಣಿಸುತ್ತಿರುವುದು ಪಕ್ಷದ ವೈಯಕ್ತಿಕ ಆಸಕ್ತಿಗಿಂತ ದೇಶದ ಹಿತಾಸಕ್ತಿ. ಆ ದೃಷ್ಟಿಯಲ್ಲಿ ಒಂದಾಗಬೇಕು ಎಂದು ಇಬ್ಬರೂ ಕೂಡಿ ಒಪ್ಪಿಕೊಂಡಿರುವುದು ಸ್ವಾಗತಾರ್ಹ ಎಂದರು.

ಬಿಜೆಪಿ- ಜೆಡಿಎಸ್ ಮೈತ್ರಿಗೆ ಸಿಎಂ ಇಬ್ರಾಹಿಂ ಪಕ್ಷದ ಅಧ್ಯಕ್ಷರಾಗಿ ವಿರೋಧ ತೋರಿದಾಗ ಅವರ ಬದಲಾವಣೆ ಅನಿವಾರ್ಯ. ಹೀಗಾಗಿ ಜೆಡಿಎಸ್ ಪಕ್ಷ ಕುಮಾರಸ್ವಾಮಿ ಅವರನ್ನು ನೇಮಿಸಿದೆ. ಅದರಲ್ಲಿ ತಪ್ಪೇನು ಇಲ್ಲ. ಇಬ್ರಾಹಿಂ ಅವರು ಒರಿಜಿನಲ್ ಜೆಡಿಎಸ್ ನಮ್ದು ಎಂಬ ಹೇಳಿಕೆ ಯಾಕೆ ನೀಡಿದ್ದಾರೆ ಎಂಬುದನ್ನು ಅವರೇ ಹೇಳಬೇಕು ಹಾಗೂ ಜೆಡಿಎಸ್‌ನಿಂದ ಅವರನ್ನು ಉಚ್ಚಾಟನೆ ಮಾಡಿ ನೂತನ ಅಧ್ಯಕ್ಷರ ಆಯ್ಕೆ ಮಾಡಿರುವುದು ಪಕ್ಷದ ಎಲ್ಲರ ತೀರ್ಮಾನವಾಗಿದೆ ಎಂದು ಸ್ಪಷ್ಟಪಡಿಸಿದರು.

ಮೈತ್ರಿ ಸಂಬಂಧ ಹಲವಾರು ಸಭೆಗಳು ಆಗಿವೆ. ಎಲ್ಲ ಸಭೆಗಳು ಸಿ.ಎಂ.ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ನಡೆದಿವೆ. ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ಮಾಡಿದಾಗ ಅವರು ಏನನ್ನೂ ಮಾತನಾಡಲಿಲ್ಲ. ಸುಮ್ಮನೆ ಇದ್ದರೆ ಅದು ಒಪ್ಪಿಗೆ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಆಗ ಅವರು ಸುಮ್ಮನಿದ್ದು, ಈಗ ಹೇಳಿಕೆ ಕೊಡುವುದು ಸರಿಯಲ್ಲ. ಅವರು ಸಭೆಯಲ್ಲೇ ಚರ್ಚೆ ಮಾಡಬೇಕಿತ್ತು. ಅವರು ನನಗೆ ಏನನ್ನೂ ಹೇಳಿಲ್ಲ ಎಂದು ಹೇಳುವುದು ಅವರ ವ್ಯಕ್ತಿತ್ವಕ್ಕೆ ಗೌರವ ತರುವುದಿಲ್ಲ ಎಂದರು.

ಮಗನಿಗಾಗಿ ನಮ್ಮ ಮನೆ ಹಾಳು ಮಾಡಿದರು ಎಂಬ ಸಿ.ಎಂ.ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಎ.ಮಂಜು ಅವರು, ಇಬ್ರಾಹಿಂ ಅವರು ತಮ್ಮ ಮಗನನ್ನು ಅದೇ ಪಕ್ಷದಲ್ಲಿ ಎಂಎಲ್‌ಎಗೆ ನಿಲ್ಲಿಸಿರಲಿಲ್ಲವೇ? ಹೇಗೆ ಆ ರೀತಿ ಮಾತನಾಡುತ್ತಾರೆ. ದೇವೇಗೌಡರು ಪ್ರಧಾನಮಂತ್ರಿ ಆಗಿದ್ದಾಗ ಅವರ ಕ್ಯಾಬಿನೆಟ್‌ನಲ್ಲಿ ವಿಮಾನಯಾನ ಖಾತೆ ಸಚಿವರಾಗಿದ್ದರು. ಆಗ ಯಾರ ಮನೆ ಉದ್ಧಾರ ಆಯಿತು ಎಂದು ಹೇಳಲಿ. ಆದರೆ ತಮಗೆ ತೊಂದರೆಯಾದಾಗ ವೈಯಕ್ತಿಕ ವಿಚಾರ ಮಾತನಾಡುವುದು ಸರಿಯಲ್ಲ ಎಂದರು.

ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರು ಬಿಡಲು ತೀರ್ಮಾನ ಮಾಡಲಾಗಿದೆ. ಆರು ದಿನ ಮೊದಲು ಹೈ ಲೆವೆಲ್ ಕೆನಲ್‌ಗೆ ನೀರು ಬಿಡುತ್ತಾರೆ. ಉಳಿದ ಕೆನಲ್‌ಗಳಿಗೆ ಆರು ದಿನದ ನಂತರ ನೀರು ಬಿಡುತ್ತಾರೆ. ಕೆರೆ ತುಂಬಿಸಲು ನೀರು ಬಿಡುತ್ತಿರುವುದ್ದರಿಂದ ಯಾರು ಕೂಡ ಬೆಳೆ ಬೆಳೆಯಬಾರದು ಎಂದು ಸರ್ಕಾರ ಹೇಳಿದೆ. ಮಾರ್ಚ್‌ವರೆಗೂ ಕುಡಿಯುವ ನೀರು ಇದ್ದು, ಈಗಿರುವ ನೀರಿನಲ್ಲಿ ಮೂರು ಟಿಎಂಸಿ ನೀರನ್ನು ಕೆರೆ ತುಂಬಿಸಲು ಬಿಡುತ್ತಾರೆ. ಈಗಾಗಲೇ ಹೈ ಲೆವೆಲ್ ಕೆನಲ್‌ಗೆ ನೀರು ಬಿಟ್ಟಿದ್ದಾರೆ ಎಂದರು.

ಹಾಸನದಿಂದ ದೇವೇಗೌಡರು ಸ್ಪರ್ಧಿಸಲಿ:

ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡರು ಹಾಸನ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ನಾನು ಈಗಾಗಲೇ ಸಭೆಯಲ್ಲಿ ಮನವಿ ಮಾಡಿದ್ದೇನೆ. ಇವತ್ತೂ ಕೂಡ ನಾನು ಅದನ್ನೇ ಹೇಳುತ್ತೇನೆ. ಅವರದ್ದು ಇದು ಕೊನೇ ಚುನಾವಣೆ ಆಗಲಿದೆ. ಅವರು ಈ ಜಿಲ್ಲೆಯಿಂದಲೇ ನಿಲ್ಲಬೇಕು ಎನ್ನುವುದು ನನ್ನ ಒತ್ತಾಯವಾಗಿದೆ ಎಂದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಎ.ಮಂಜು ಅವರು, ಯಾರು ಯಾರ ಮೇಲೆ ಬೇಕಾದರೂ ಕೇಸ್ ಹಾಕಬಹುದಾಗಿದೆ. ಇದು ಹೊಸ ಕೇಸ್ ಅಲ್ಲ. ಹಳೆಯ ಪ್ರಕರಣವಾಗಿದೆ. ಆದರೆ ಯಾಕೆ ತನಿಖೆ ಮಾಡುತ್ತೀರಿ ಎಂದು ಸಿಬಿಐ ಅಧಿಕಾರಿಗಳನ್ನು ಕೇಳಲು ಯಾರಿಗೂ ಅಧಿಕಾರ ಇಲ್ಲವಾಗಿದೆ ಎಂದರು.

ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಂಜು ಅವರು, ಕಾಂಗ್ರೆಸ್ ಬಳಿಯೇ ಈಗ ಹೌಸ್‌ಫುಲ್ ಬೋರ್ಡ್ ಬಿದ್ದಿದೆ. ನನ್ನನ್ನು ಯಾಕೆ ಕರೆಯುತ್ತಾರೆ? ಅಲ್ಲಿಂದ ಹೋಗುವವರನ್ನು ತಡೆ ಹಿಡಿಯಲು ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಅರಸೀಕೆರೆಗೆ ಮಾತ್ರ ಸಚಿವರು ಭೇಟಿ ನೀಡುತ್ತಿರುವ ವಿಷಯವಾಗಿ ಮಾತನಾಡಿದ ಮಂಜು ಅವರು, ಅವರು ತಾಲೂಕು ಮಂತ್ರಿ ಅಲ್ಲಾ. ರಾಜ್ಯಕ್ಕೆ ಮಂತ್ರಿಯಾಗಿದ್ದಾರೆ. ಎಲ್ಲ ತಾಲೂಕುಗಳಿಗೆ ನೀವು ಬರಬೇಕು ಎಂದು ನಾನು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡುತ್ತೇನೆ. ನಿಮ್ಮ ಪಕ್ಷದವರು ಗೆದ್ದಿದ್ದಾರೆ ಎಂದು ಅತೀ ಪ್ರೀತಿ ತೋರಿಸುವುದು ಒಳ್ಳೆಯದಲ್ಲ. ಇಡೀ ಜಿಲ್ಲೆಯನ್ನು ಸಮಗ್ರವಾಗಿ ತೆಗೆದುಕೊಂಡು ಹೋಗುವುದು ಉಸ್ತುವಾರಿ ಸಚಿವರ ಜವಾಬ್ದಾರಿಯಾಗಿದೆ. ನಾವು ಅವರಿಗೆ ಸಹಕಾರ ಕೊಡಲು ಸಿದ್ಧರಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net