

ಅರಕಲಗೂಡು: ಇಬ್ಬರು ಸರಗಳ್ಳರನ್ನು ಬಂಧಿಸಿ 60 ಸಾವಿರ ರೂ ಬೆಲೆಯ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಮತ್ತು ಇಂಡಿಕಾ ಕಾರನ್ನು ಇಲ್ಲಿನ ಪೊಲೀಸರು ವಶಪಡಿಸಿ ಕೊಂಡಿದ್ದಾರೆ.
ಹಾಸನ ತಾಲೂಕು ಕಟ್ಟಾಯ ಹೋಬಳಿ ಬನವಾಸೆ ಗ್ರಾಮದ ಸ್ವಾಮಿ, ಹಾಲಿ ಬೆಂಗಳೂರು ನಾಗಸಂದ್ರ ನಿವಾಸಿ ಹಾಗೂ ತುಮಕೂರು ತಾಲೂಕು ಶೆಟ್ಟರಹಳ್ಳಿ ಗ್ರಾಮದ ವಿನೋದ್ ಹಾಲಿ ರಾಮನಗರ ತಾಲೂಕು ಬಿಡದಿ ನಿವಾಸಿ ಬಂಧಿತ ಆರೋಪಿಗಳು. ವ್ಯಾಪಾರದ ನೆಪದಲ್ಲಿ ತಾಲೂಕಿನ ಸಂತೆ ಮರೂರು ಗ್ರಾಮದಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿರುವ ಸಾವಿತ್ರಮ್ಮಣ್ಣಿ ಎಂಬುವರ ಚಿನ್ನದ ಸರವನ್ನು ನ. 17 ರಂದು ಅಪಹರಿಸಿ ಪರಾರಿಯಾಗಿದ್ದರು.
ಪ್ರಕರಣದ ಪತ್ತೆಗೆ ತನಿಖಾ ತಂಡ ರಚಿಸಲಾಗಿತ್ತು. ಆರೋಪಿಗಳನ್ನು ಗೊರೂರು ಬಳಿ ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಿಪಿಐ ಎಸ್.ಎಂ.ರಘುಪತಿ, ಪಿಎಸ್ಐ ಆರ್. ಧನರಾಜ್, ಸಿಬ್ಬಂದಿಗಳಾದ ಸುರೇಸ್, ಪ್ರಕಾಶ್, ದಿನೇಶ್ ಧನರಾಜ್ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.