

ಗದಗ: ಇಬ್ಬರು ಸರಗಳ್ಳರನ್ನು ಬಂಧಿಸಿ 98 ಸಾವಿರ ರೂ. ಮೌಲ್ಯದ 40 ಗ್ರಾಂ ಚಿನ್ನದ ತಾಳಿ ಸರ ಮತ್ತು 20 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನವನ್ನು ಮಂಗಳವಾರ ಶಹರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಗರದ ಗಂಗಾಪೂರಪೇಟೆಯ ಸಂಜಯ ಬಸಪ್ಪ ಕೊಪ್ಪದ ಮತ್ತು ನವಲಗುಂದ ತಾಲೂಕಿನ ಮಹ್ಮದ್ ರಫೀಕ್ ಪೀರಸಾಬ್ ಹುನಗುಂದ ಬಂಧಿತ ಆರೋಪಿಗಳು. ನಗರದ ಕಳಸಾಪೂರ ರಸ್ತೆಯ ರಿಂಗ್ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಇಬ್ಬರನ್ನು ಅನುಮಾನದ ಮೇಲೆ ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದಾಗ ಸರಗಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.
ಫೆ. 9ರಂದು ಸ್ಥಳೀಯ ಸವೋದಯ ಕಾಲನಿಯಲ್ಲಿ ಉಮಾದೇವಿ ಗುರುಪಾದಪ್ಪ ನೆಲವಡಿ ಎಂಬುವವರ ತಾಳಿ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ಪಿ.ವಿ. ಸಾಲಿಮಠ ನೇತೃತ್ವದ ತಂಡ ತನಿಖೆ ನಡೆಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂಡದಲ್ಲಿ ಪಿಎಸ್ಐ ಜಿ.ಟಿ. ಜಕ್ಕಲಿ, ಬಿ.ಜಿ. ಹೊರಕೇರಿ, ವಿ.ಎಸ್. ಶೆಟ್ಟೆಣ್ಣವರ, ಎಸ್.ವಿ. ಗುಡ್ಡಿಮಠ, ಎಚ್.ವಿ. ಯಡಿಯೂರ, ಪಿ.ಎಸ್. ಕಲ್ಲೂರ ಇದ್ದರು.