

ಚಿತ್ರದುರ್ಗ: ಅಪಘಾತದಲ್ಲಿ ಇಬ್ಬರು ಮೃತಪಟ್ಟ ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿದಂತೆ, ಇಬ್ಬರು ವಾಹನ ಸವಾರರಿಗೆ ನಗರದ ಸಿಜೆಎಂ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.
ನಗರದ ಜೋಗಿಮಟ್ಟಿ ರಸ್ತೆಯಲ್ಲಿ 2022 ಅಕ್ಟೋಬರ್ 18ರಂದು ಅಪಘಾತದಲ್ಲಿ ಬೈಕ್ ಸವಾರ ಮಂಜಣ್ಣ ಎಂಬುವರು ಮೃತಪಟ್ಟಿದ್ದರು. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಬಡಾವಣೆ ಠಾಣೆ ಪಿಐ ಟಿ.ಆರ್.ನಯೀಂ ಅಹಮದ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಡಿ.ಮಮತಾ, ಮತ್ತೊಂದು ಬೈಕ್‌ನ ಅಪರಾಧಿ ಸವಾರ ಗೋಪಾಲಕೃಷ್ಣನಿಗೆ ಒಂದು ವರ್ಷ ಆರು ತಿಂಗಳ ಸಾಧಾರಣ ಜೈಲು ಶಿಕ್ಷೆ ಹಾಗೂ 2300 ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
*ಲಾರಿ ಚಾಲಕನಿಗೆ ಶಿಕ್ಷೆ: ಚಿತ್ರದುರ್ಗದ ಆರ್‌ಟಿಒ ಕಚೇರಿ ಬಳಿಯ ರಾ.ಹೆ.48ರಲ್ಲಿ 2021 ಜನವರಿ 22ರಂದು ತನ್ನ ಮೊಮ್ಮಗನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಲಾರಿ ಗುದ್ದಿದ್ದು, ಬೈಕ್ ಸವಾರ ಧನಂಜಯ ಅಸು ನೀಗಿದ್ದರು. ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದರು.
ತನಿಖೆ ನಡೆಸಿದ್ದ ಬಡಾವಣೆ ಠಾಣೆ ಪಿಐ ಬಿ.ವಿ.ಪ್ರಕಾಶ್ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಅಪರಾಧಿ ಲಾರಿ ಚಾಲಕ ಮಂಡ್ಯ ಜಿಲ್ಲೆ, ಸಾದೊಳಲು ಗ್ರಾಮದ ಟಿ.ನಾಗರಾಜುಗೆ ಒಂದು ವರ್ಷ 9 ತಿಂಗಳ ಸಾಧಾರಣ ಜೈಲು ಶಿಕ್ಷೆ ಹಾಗೂ 2800 ರೂ.ದಂಡ ವಿಧಿಸಿ ತೀರ್ಪು ನೀಡಿದೆ.