

ನಾಗಮಂಗಲ: ಮನೆ ಬೀಗ ಮುರಿದು ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ನಾಗಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು, 20 ಲಕ್ಷ ರೂ. ಮೌಲ್ಯದ 360 ಗ್ರಾಂ ಚಿನ್ನಾಭರಣ ಹಾಗೂ 1.3 ಕೆ.ಜಿ. ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಮನಗರ ತಾಲೂಕಿನ ತಡಿಕೋಗಿಲು ಗ್ರಾಮದ ಹಾಲಿ ಬೆಂಗಳೂರು ದಕ್ಷಿಣ ತಾವರೆಕೆರೆ ಹೋಬಳಿಯ ಚುಂಚನಕುಪ್ಪೆ ಅಂಚೆ ಚಂದ್ರಪ್ಪ ಸರ್ಕಲ್‌ನ ದೊಡ್ಡ ಆಲದಮರ ವಾಸಿ ಕೋಳಿ ಅಂಗಡಿ ವ್ಯಾಪಾರಿ ನರಸಿಂಹಯ್ಯ ಎಂಬುವರ ಪುತ್ರ ಟಿ.ಎನ್.ಹರೀಶ್ ಅಲಿಯಾಸ್ ಕೊಂಗ ಅಲಿಯಾಸ್ ಕೋಳಿ(32) ಹಾಗೂ ಬೆಂಗಳೂರಿನ ಪೀಣ್ಯ 2ನೇ ಕ್ರಾಸ್, 1ನೇ ಮೈನ್‌ನ ಆಂಜನೇಯ ದೇವಸ್ಥಾನದ ಬಳಿಯಿರುವ ಮುನಿಯಪ್ಪ ಎಂಬುವರ ಪುತ್ರ ಕಾಂತರಾಜ್ ಅಲಿಯಾಸ್ ಮೋರಿ ಕಾಂತ, ಅಲಿಯಾಸ್ ಕಾಂತ(45) ಬಂಧಿತ ಆರೋಪಿಗಳಾಗಿದ್ದಾರೆ.
ಪಟ್ಟಣ ವ್ಯಾಪ್ತಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳ್ಳರು ಮನೆ ಬೀಗ ಮುರಿದು ಚಿನ್ನಾಭರಣ ಮತ್ತು ಬೆಳ್ಳಿ ಪದಾರ್ಥಗಳನ್ನು ದೋಚಿರುವ ಸಂಬಂಧ ನಾಗಮಂಗಲ ಪಟ್ಟಣ, ಗ್ರಾಮಾಂತರ, ಬಿಂಡಿಗನವಿಲೆ ಮತ್ತು ಬೆಳ್ಳೂರು ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ ತಾಲೂಕಿನ ಅಂಚೆಚಿಟ್ಟನಹಳ್ಳಿ ಗ್ರಾಮದ ಮಲ್ಲಿಕಾರ್ಜುನ್ ಬಿನ್ ಲೇಟ್ ಶಿವಣ್ಣ ಎಂಬುವರು ಮೇ 4ರ ಮಧ್ಯಾಹ್ನ ತಮ್ಮ ಮನೆಗೆ ಬೀಗಹಾಕಿ ಬೀಗದ ಕೀಲಿಯನ್ನು ಎಂದಿನಂತೆ ಮನೆ ಹತ್ತಿರವೇ ಇಟ್ಟು ಜಮೀನಿಗೆ ತೆರಳಿದ್ದ ವೇಳೆ ಕಳ್ಳರು ಮನೆಯ ಬೀಗ ತೆಗೆದು ಬೀರುವಿನಲ್ಲಿಟ್ಟಿದ್ದ ಚಿನ್ನದ ಒಡವೆಗಳನ್ನು ಕದ್ದೊಯ್ದಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಲ್ಲಿಕಾರ್ಜುನ್ ದೂರು ದಾಖಲಿಸಿದ್ದರು.
ತಾಲೂಕಿನಾದ್ಯಂತ ಮನೆ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಮನಗಂಡು ಜಿಲ್ಲಾ ಎಸ್ಪಿ ಎನ್.ಯತೀಶ್, ಅಪರ ಜಿಲ್ಲಾ ಎಸ್ಪಿ ಸಿ.ಈ.ತಿಮ್ಮಯ್ಯ ಅವರ ನಿರ್ದೇಶನದಂತೆ ನಾಗಮಂಗಲ ಉಪ ವಿಭಾಗದ ಡಿವೈಎಸ್‌ಪಿ ಲಕ್ಷ್ಮೀನಾರಾಯಣಪ್ರಸಾದ್ ಮೇಲುಸ್ತುವಾರಿಯಲ್ಲಿ ಸಿಪಿಐ ನಿರಂಜನ್ ಹಾಗೂ ಗ್ರಾಮಾಂತರ ಠಾಣೆ ಪಿಎಸ್ಸೈ ರವಿಕುಮಾರ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿತ್ತು.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರ ತಂಡ ಟಿ.ಎನ್.ಹರೀಶ್ ಎಂಬ ಆರೋಪಿಯನ್ನು ಮೇ 21ರ ಮಧ್ಯಾಹ್ನ ಕುಣಿಗಲ್ ತಾಲೂಕಿನ ಯಡಿಯೂರಿನಲ್ಲಿ ಬಂಧಿಸಿ ಠಾಣೆಗೆ ಕರೆತಂದು ತೀವ್ರ ವಿಚಾರಣೆಗೊಳಪಡಿಸಿದ ವೇಳೆ ಈ ಕೃತ್ಯಗಳಲ್ಲಿ ಮತ್ತೊಬ್ಬ ಆರೋಪಿ ಭಾಗಿಯಾಗಿರುವುದಾಗಿ ಸುಳಿವು ನೀಡಿದ. ಕಾರ್ಯಾಚರಣೆ ಮಂದುವರಿಸಿದ ಪೊಲೀಸರ ತಂಡ ಕಾಂತರಾಜು ಎಂಬ ಆರೋಪಿಯನ್ನು ಮೇ 25ರಂದು ಕುಣಿಗಲ್ ಟೌನಿನಲ್ಲಿ ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದ ವೇಳೆ ತಾಲೂಕಿನ ಹಲವೆಡೆ ಮನೆಗಳ ಬೀಗ ಮುರಿದು ಚಿನ್ನಾಭರಣ ಮತ್ತು ಬೆಳ್ಳಿ ಪದಾರ್ಥಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ನಾಗಮಂಗಲ ಗ್ರಾಮಾಂತರ ಮತ್ತು ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ 2 ಪ್ರಕರಣ, ನಾಗಮಂಗಲ ಪಟ್ಟಣ ಮತ್ತು ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ 1 ಪ್ರಕರಣಗಳಲ್ಲಿ ಕಳುವಾಗಿದ್ದ 20 ಲಕ್ಷ ರೂ. ಮೌಲ್ಯದ 360ಗ್ರಾಂ ಚಿನ್ನ ಒಡವೆ ಮತ್ತು 1.3 ಕೆ.ಜಿ. ತೂಕದ ಬೆಳ್ಳಿ ಪದಾರ್ಥಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಪಿಐ ಕೆ.ಎಸ್.ನಿರಂಜನ್, ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ವೈ.ಎನ್.ರವಿಕುಮಾರ್, ಬೆಳ್ಳೂರು ಠಾಣೆಯ ಪಿಎಸ್‌ಐ ಲೋಕೇಶ್, ಬಿಂಡಿಗನವಿಲೆ ಠಾಣೆಯ ಪಿಎಸ್‌ಐ ರಾಜೇಂದ್ರ, ಎಎಸ್‌ಐ ಟಿ.ಲಿಂಗರಾಜು, ಪೇದೆಗಳಾದ ಪ್ರಶಾಂತ್‌ಕುಮಾರ್, ನಟೇಶ್‌ಬಾಬು, ಉಮೇಶ್, ಎಂ.ಸಿದ್ದಪ್ಪ, ಸಿದ್ದರಾಜು ಮತ್ತು ಬಿ.ಆರ್.ಚೇತನ್ ಆರೋಪಿಗಳ ಪತ್ತೆಕಾರ್ಯದಲ್ಲಿ ಪಾಲ್ಗೊಂಡಿದ್ದರು.