ಇಬ್ಬರು ಮಕ್ಕಳೊಂದಿಗೆ ತಾಯಿ ಅನುಮಾನಾಸ್ಪದ ಸಾವು

ಇಬ್ಬರು ಮಕ್ಕಳೊಂದಿಗೆ ತಾಯಿ ಅನುಮಾನಾಸ್ಪದ ಸಾವು
Published on

ಹಾಸನ : ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ನಗರದ ದಾಸರಕೊಪ್ಪಲಿನಲ್ಲಿ ಮಂಗಳವಾರ ನಡೆದಿದ್ದು. ತಾಯಿ ಶಿವಮ್ಮ (36), ಮಕ್ಕಳಾದ ಪವನ (10), ಸಿಂಚನಾ (7) ಮೃತ ದುರ್ದೈವಿಗಳು.
ಮನೆಯ ಬಾಗಿಲು, ಕಿಟಕಿಗಳನ್ನು ಮುಚ್ಚಿ, ಗ್ಯಾಸ್ ಓಪನ್ ಮಾಡಿಕೊಂಡು ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ, ಮಕ್ಕಳ ಬಾಯಿ, ಮೂಗಿನಲ್ಲಿ ರಕ್ತ, ಶಿವಮ್ಮ ಅವರ ಬಾಯಿಯಲ್ಲಿ ನೊರೆ ಪತ್ತೆಯಾಗಿರುವುದು ಕೊಲೆ ನಡೆದಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಅಲ್ಲದೇ ಮಹಿಳೆಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಇದ್ದಿದ್ದೆ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಮೃತಳ ಪತಿ ತೀರ್ಥ ಮೂಲತಃ ಸೀಗೆ ಸಮೀಪದ ಯಲಗುಂದ ಗ್ರಾಮದವರು. ಕಳೆದ 8 ತಿಂಗಳ ಹಿಂದೆ ದಾಸರಕೊಪ್ಪಲಿನಲ್ಲಿ ಬಾಡಿಗೆಗೆ ಮನೆ ಪಡೆದು ಪತ್ನಿ, ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ತೀರ್ಥ ಕಳೆದ ಒಂದು ತಿಂಗಳಿಂದ ತುಮಕೂರಿನಲ್ಲಿ ಬೇಕರಿ ಕೆಲಸ ಮಾಡಿಕೊಂಡಿದ್ದ. ಶಿವಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿಕೊಂಡು ದಾಸರಕೊಪ್ಪಲಿನಲ್ಲಿ ವಾಸವಾಗಿದ್ದರು. ಪತಿ ಸೋಮವಾರ ಸಂಜೆ ತುಮಕೂರಿನಿಂದ ಹಾಸನಕ್ಕೆ ಬಂದಿದ್ದಾರೆ. ಪತ್ನಿ-ಮಕ್ಕಳು ಕಾಣಿಸದೆ, ಮನೆ ಬಾಗಿಲು ಹಾಕಿದ್ದರಿಂದ ರಾತ್ರಿ ಇಡೀ ಮನೆ ಮಹಡಿ ಮೇಲೆ ಮಲಗಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಮನೆಯೊಳಗೆ ಗ್ಯಾಸ್ ವಾಸನೆ ಬರುವುದು ಗೊತ್ತಾಗಿದೆ. ಬಳಿಕ ನಕಲಿ ಕೀ ಮಾಡುವವರ ಸಹಾಯದಿಂದ ಬಾಗಿಲು ತೆಗೆದು ನೋಡಿದಾಗ ಪತ್ನಿ, ಇಬ್ಬರು ಮಕ್ಕಳು ಸಾವನಪ್ಪಿರುವುದು ಪತ್ತೆಯಾಗಿದೆ.
ವಿಷಯ ತಿಳಿದ ಕೂಡಲೇ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಡಿವೈಎಸ್‌ಪಿ ಮುರಳೀಧರ್ ಹಾಗು ಪೆನ್‌ಷನ್ ಮೊಹಲ್ಲಾ ಪೊಲೀಸರು, ಎಫ್‌ಎಸ್‌ಎಲ್ ಮತ್ತು ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 3 ಗಂಟೆವರೆಗೆ ಪರಿಶೀಲನೆ ನಡೆಸಿ, ಬಳಿಕ ಮೃತದೇಹಗಳನ್ನು ಮರಣೋತ್ತರ ವೈದ್ಯಕೀಯ ಪರೀಕ್ಷೆಗಾಗಿ ಹಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು.

ಬೇರೊಬ್ಬ ವ್ಯಕ್ತಿ ಮನೆಯಲ್ಲಿದ್ದ:
ತೀರ್ಥ ದಂಪತಿ ಈ ಹಿಂದೆ ವಿಜಯಪುರದಲ್ಲಿ ಬೇಕರಿ ನಡೆಸುತ್ತಿದ್ದರು. ಈ ವೇಳೆ ಅವರೊಂದಿಗೆ ಈರಣ್ಣ ಎಂಬಾತ ಕೆಲಸಕ್ಕೆ ಸೇರಿಕೊಂಡಿದ್ದ. ಆತನೊಂದಿಗೆ ಶಿವಮ್ಮ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಹೇಳಲಾಗುತ್ತಿದೆ. ಈರಣ್ಣನಿಗೂ ಮದುವೆಯಾಗಿ ಮೂರು ಮಕ್ಕಳಿದ್ದರು ಎನ್ನಲಾಗಿದ್ದು, ಆತ ಕಳೆದ ವಾರದ ಹಿಂದೆ ವಿಜಯಪುರದಿಂದ ಹಾಸನಕ್ಕೆ ಬಂದು ಶಿವಮ್ಮ ಅವರ ಮನೆಯಲ್ಲೇ ಇದ್ದು, ಸೋಮವಾರ ಹೋಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಶಿವಮ್ಮ ಅವರ ತಾಯಿ ಹುಲಿಯಮ್ಮ ಅವರು ಮಾತನಾಡಿ, ನನ್ನ ಮಗಳು-ಅಳಿಯ ಈ ಮೊದಲು ವಿಜಯಪುರದಲ್ಲಿ ಬೇಕರಿ ನಡೆಸುತ್ತಿದ್ದರು. ಅಲ್ಲಿ ಕೆಲಸಕ್ಕಿದ್ದ ಈರಣ್ಣ ಎಂಬಾತ ಹಾಸನದಲ್ಲಿ ಕೆಲಸಕ್ಕೆ ಸೇರಿಕೊಳ್ಳಲೆಂದು ಬಂದು ಕಳೆದ ಒಂದು ವಾರದಿಂದ ಈ ಮನೆಯಲ್ಲೇ ಇದ್ದ. ಇದು ನಮ್ಮ ಅಳಿಯನಿಗೆ ಗೊತ್ತಿರಲಿಲ್ಲ ಎಂದು ನೀಡಿರುವ ಹೇಳಿಕೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ರಾತ್ರಿ ಇಡೀ ಮನೆ ಮೇಲೆ ಮಲಗಿದ್ದೆ
ಈ ಕುರಿತು ಪತಿ ತಿರ್ಥ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಮದುವೆಯಾಗಿ 12 ವರ್ಷ ಆಗಿತ್ತು. ನಮ್ಮಿಬ್ಬರ ನಡುವೆ ಯಾವುದೇ ಜಗಳ ಆಗಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಯಾವ ಸಮಸ್ಯೆಯೂ ಇರಲಿಲ್ಲ. ನಾನು ತುಮಕೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಒಂದು ತಿಂಗಳಿಂದ ಮನೆ ಬಂದಿರಲಿಲ್ಲ. ಆದರೆ, ನಿತ್ಯ ಪತ್ನಿ ಮಕ್ಕಳ ಜತೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದೆ. ಸೋಮವಾರವೂ ಕರೆ ಮಾಡಿ ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದೆ. ಮಧ್ಯಾಹ್ನ 3 ಗಂಟೆಗೆ ತುಮಕೂರಿನಿಂದ ಹೊರಟು ಹಾಸನಕ್ಕೆ ಬಂದೆ. ಸಂಜೆ 6 ಗಂಟೆ ವೇಳೆಗೆ ಪತ್ನಿ ಫೋನ್ ಸ್ವಿಚ್‌ಆಫ್ ಆಗಿತ್ತು. ನಾನು ಎಷ್ಟೇ ಮನೆ ಬಾಗಿಲು ಬಡಿದರೂ ತೆರೆಯಲಿಲ್ಲ. ಮನೆಯ ಬಾಗಿಲಿಗೆ ಬೀಗ ಹಾಕಿದ್ದರಿಂದ ಎಲ್ಲೋ ಹೋಗಿರಬಹುದು ಎಂದು ಮನೆಯ ಮಹಡಿ ಮೇಲೆ ಮಲಗಿದೆ. ಬೆಳಗ್ಗೆ ಎದ್ದು ನೋಡಿದಾಗ ಮನೆಯೊಳಗೆ ಗ್ಯಾಸ್ ವಾಸನೆ ಬರುತ್ತಿರುವುದು ಪತ್ತೆಯಾಯಿತು. ಕೂಡಲೇ ಕಟ್ಟಿನಕೆರೆ ಮಾರುಕಟ್ಟೆಯಿಂದ ನಕಲಿ ಕೀ ಮಾಡುವವರನ್ನು ಕರೆದುಕೊಂಡು ಬಂದು ಬಾಗಿಲು ತೆರೆಸಿದಾಗ ಪತ್ನಿ, ಮಕ್ಕಳು ಸಾವನ್ನಪ್ಪಿರುವುದು ಕಂಡು ಬಂತು ಎಂದು ಕಣ್ಣೀರು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net