ಇಬ್ಬರು ಬೈಕ್ ಸವಾರರ ಸಾವು

bike_Bike Accident_2
Published on

ಹಾಸನ: ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.


ಅರಕಲಗೂಡು ತಾಲೂಕು ಎಚ್‌ಆರ್‌ಪಿ ವಡ್ಡರಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ಲೋಕೇಶ (30) ಹಾಗೂ ಅರಸೀಕೆರೆ ತಾಲೂಕು ಕರಿಮಾರನಹಳ್ಳಿಯ ಗಿರೀಶ(35) ಸಾವಿಗೀಡಾಗಿದ್ದು, ನಂಬಿಹಳ್ಳಿ ಗ್ರಾಮದ ಶಿವಸ್ವಾಮಿ ಗಾಯಗೊಂಡಿದ್ದಾರೆ.


ಎಚ್‌ಆರ್‌ಪಿ ವಡ್ಡರಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ಲೋಕೇಶ ಅವರು ಕೆಲಸದ ನಿಮಿತ್ತ ಭಾನುವಾರ ಅರಕಲಗೂಡಿಗೆ ತೆರಳಿದ್ದರು. ಕೆಲಸ ಮುಗಿಸಿ ರಾತ್ರಿ 11.30ರ ಸಮಯದಲ್ಲಿ ಊರಿಗೆ ವಾಪಸ್ ಬೈಕ್‌ನಲ್ಲಿ ಅಂಕನಾಯಕನಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬೈಕ್‌ನಲ್ಲಿ ವೇಗವಾಗಿ ಬಂದ ಅದೇ ಗ್ರಾಮದ ಮನು ಎಂಬಾತ ಲೋಕೇಶ ಅವರ ಬೈಕ್‌ಗೆ ಗುದ್ದಿದ್ದಾನೆ. ಡಿಕ್ಕಿ ರಭಸಕ್ಕೆ ರಸ್ತೆ ಮೇಲೆ ಬಿದ್ದ ಲೋಕೇಶನ ತಲೆ ಹಾಗೂ ದೇಹದ ಇತರ ಭಾಗಗಳಿಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಅರಕಲಗೂಡು ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.


ಮತ್ತೊಂದು ಪ್ರಕರಣದಲ್ಲಿ ಬೈಕ್‌ಗೆ ನಾಯಿ ಅಡ್ಡ ಬಂದಿದ್ದರಿಂದ ನಿಯಂತ್ರಣ ತಪ್ಪಿ ಬೈಕ್ ಸವಾರ ಬಿದ್ದು ಸಾವಿಗೀಡಾಗಿದ್ದಾರೆ. ಅರಸೀಕೆರೆ ತಾಲೂಕು ಕರಿಮಾರನಹಳ್ಳಿಯ ಗಿರೀಶ(35) ಮೃತಪಟ್ಟವರು. ಶನಿವಾರ ಗಿರೀಶ್ ಮತ್ತು ನಂಬಿಹಳ್ಳಿ ಗ್ರಾಮದ ಶಿವಸ್ವಾಮಿ ಎಂಬುವರು ಪೇಂಟ್ ಕೆಲಸಕ್ಕೆಂದು ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಕರಿಕಟ್ಟೆ ಬಾಗಿವಾಳು ಹತ್ತಿರ ನಾಯಿ ಅಡ್ಡ ಬಂದ ಪರಿಣಾಮ ಕೆಳಕ್ಕೆ ಬಿದ್ದು ಗಾಯಗೊಂಡರು. ಇಬ್ಬರನ್ನೂ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟಾಗಿದ್ದ ಗಿರೀಶ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗಿನ ಜಾವ 5.30ರಲ್ಲಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ಶಿವಸ್ವಾಮಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net