

ಮೈಸೂರು: ಹತ್ತು ದಿನಗಳ ಹಿಂದೆ ಕದ್ದ ಬೈಕ್‌ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಅದನ್ನು ತಳ್ಳಿಕೊಂಡು ಹೋಗುವಾಗ ಪೊಲೀಸರ ಕೈಗೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಆಲಂಬಾಡಿ ಗ್ರಾಮದ ಮೂಲದ, ಕೆ.ಆರ್.ಮೊಹಲ್ಲಾ ನಿವಾಸಿ ಎ.ಬಿ.ವಿಶ್ವ (26), ಕೂರ್ಗಳ್ಳಿಯ ಅಜಯ್‌ಕುಮಾರ್ (24) ಬಂಧಿತರು.
ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆ ಎದುರು ನಿಂತಿದ್ದ ಬೈಕ್‌ಅನ್ನು ಕದ್ದು ಮಾರಾಟ ಮಾಡಲು ಯೋಜಿಸಿದ್ದರು. ಈ ಹಿನ್ನೆಲೆಯಲ್ಲಿ ಬೈಕ್‌ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಬೋಗಾದಿ ರಿಂಗ್ ರೋಡ್‌ನ ಸರ್ವೀಸ್ ರಸ್ತೆಯಲ್ಲಿ ತಳ್ಳಿಕೊಂಡು ಹೋಗುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರನ್ನು ನೋಡಿ ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ತಕ್ಷಣ ಅವರನ್ನು ತಡೆದು ವಿಚಾರಿಸಿದಾಗ ಸೂಕ್ತ ಉತ್ತರ ನೀಡದ್ದನ್ನು ಗಮನಿಸಿ ಹೆಚ್ಚಿನ ವಿಚಾರಣೆ ಮಾಡಿದಾಗ ಕಳ್ಳತನ ಮಾಡಿರುವುದನ್ನು ಬಾಯಿಬಿಟ್ಟಿದ್ದಾರೆ. ಈ ಕುರಿತು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.