

ಕಳಸ: ಕಳಸ ಭದ್ರಾ ನದಿಯ ವಶಿಷ್ಠ ತೀರ್ಥ ಸಮೀಪ ರಾಜಸ್ಥಾನ ಮೂಲದ ಇಬ್ಬರು ಪ್ರವಾಸಿಗರು ಭಾನುವಾರ ಬೆಳಗ್ಗೆ ಮುಳುಗಿ ಮೃತಪಟ್ಟಿದ್ದಾರೆ.
ರಾಜಸ್ಥಾನದ ಜಗದೀಶ್(23), ಚೋಟಾ ಸಿಂಗ್(23) ಮೃತ ದುರ್ದೈವಿಗಳು. ರಾಜಸ್ಥಾನದ ಇವರು ಬೆಂಗಳೂರಿನ ಜ್ಯುವೆಲ್ಲರಿ ಶಾಪ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದರು. 12 ಜನ ಹೋಳಿ ಹಬ್ಬದ ಎರಡು ದಿನದ ರಜೆಯಲ್ಲಿ ಕಳಸ ಕಡೆ ಪ್ರವಾಸಕ್ಕೆ ಬಂದಿದ್ದಾರೆ. ಶನಿವಾರ ಕಳಸಕ್ಕೆ ಬಂದವರು ಸ್ಥಳೀಯ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಿ ಭಾನುವಾರ ಬೆಳಗ್ಗೆ ಮತ್ತೆ ಬೆಂಗಳೂರು ಕಡೆ ಪ್ರಯಾಣ ಬೆಳೆಸುವಾಗ ವಶಿಷ್ಠ ತೀರ್ಥದಲ್ಲಿರುವ ತೂಗು ಸೇತುವೆ ನೋಡಲು ಭದ್ರಾ ನದಿಗೆ ಬಂದಿದ್ದಾರೆ. ಸ್ವಲ್ಪ ಜನ ತೂಗು ಸೇತುವೆ ನೋಡಲು ಸೇತುವೆ ಬಳಿ ಹೋದರೆ ಇಬ್ಬರು ಮಾತ್ರ ಸ್ನಾನಕ್ಕೆಂದು ನೀರಿಗೆ ಇಳಿದಿದ್ದಾರೆ. ಆದರೆ ಇಬ್ಬರಿಗೂ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಲ್ಲ 12 ಮಂದಿ ಯುವಕರಾಗಿದ್ದು, ಹತ್ತಿರದ ಸಂಬಂಧಿಕರೇ ಆಗಿದ್ದಾರೆ.