

ಮೈಸೂರು: ಪೊಲೀಸರೊಂದಿಗೆ ಬಂದಿರುವುದಾಗಿ ಹೇಳಿಕೊಂಡು ಮಹಿಳೆಯೊಬ್ಬರ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ವೇಶ್ಯಾವಾಟಿಕೆಯ ಆರೋಪ ಮಾಡಿ, ಬೆದರಿಸಿ ಚಿನ್ನದ ಓಲೆ ಪಡೆದ ದೂರಿನ ಮೇರೆಗೆ ಇಬ್ಬರು ಪತ್ರಕರ್ತರು ಸೇರಿ ಮೂವರನ್ನು ಹೆಬ್ಬಾಳ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ರವಿಚಂದ್ರ ಹಂಚ್ಯಾ, ಪತ್ರಕರ್ತ ಮಂಜುನಾಥ್, ಪೊಲೀಸ್ ಎಂದು ಹೇಳಿಕೊಂಡಿದ್ದ ಕೆ.ಎಚ್.ಹನುಮಂತರಾಜ್ ಬಂಧಿತರು. ತಲೆಮರೆಸಿಕೊಂಡಿರುವ ಆರೋಪಿಗಳಾದ ಪತ್ರಕರ್ತ ಸೂರ್ಯವರ್ಧನ್, ಯೋಗೇಶ್ ಹಾಗೂ ದೊರೆಸ್ವಾಮಿಗಾಗಿ ಶೋಧ ಮುಂದುವರಿದಿದೆ.
ಡಿ.28ರಂದು ಸಂಜೆ ಆರೋಪಿಗಳು ನಮ್ಮ ಮನೆಗೆ ನುಗ್ಗಿ, ನಾವು ಮೀಡಿಯಾದವರು ಪೊಲೀಸರೊಂದಿಗೆ ಬಂದಿದ್ದು, ನೀವು ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ, ನಿಮ್ಮ ವಿರುದ್ಧ ಕೇಸ್ ಹಾಕಿಸುತ್ತೇವೆ ಎಂದು ಬೆದರಿಸಿದರು ಎಂದು ಹೆಬ್ಬಾಳ ಮೊದಲನೇ ಹಂತದ ನಿವಾಸಿದ ಮಹಿಳೆಯೊಬ್ಬರು ಹೆಬ್ಬಾಳ ಠಾಣೆಗೆ ಗುರುವಾರ ರಾತ್ರಿ ದೂರು ನೀಡಿದ್ದರು.
ನಾನು ವೇಶ್ಯಾವಾಟಿಕೆ ನಡೆಸುತ್ತಿಲ್ಲ ಎಂದರೂ ಒಪ್ಪದ ಅವರು, ಈ ವಿಷಯವನ್ನು ಯಾರಿಗೂ ಹೇಳಬಾರದು ಎಂದಾಂದರೆ 1 ಲಕ್ಷ ರೂ. ಕೊಡಬೇಕು ಎಂದು ಬೆದರಿಸಿದರು. ಅಷ್ಟು ಹಣವಿಲ್ಲ ಎಂದಾಗ ಚಿನ್ನದ ಕಿವಿಯೋಲೆ ಬಿಚ್ಚಿಸಿಕೊಂಡು, ಬೇಗ ಹಣ ನೀಡುವಂತೆ ತಿಳಿಸಿ ತೆರಳಿದ್ದರು.
ಘಟನೆಯ ಬಳಿಕ ದೂರು ನೀಡಿದ್ದು, ಸಮಸ್ಯೆಯಾಗಬಹುದೆಂಬ ಆತಂಕದಿಂದ ಕಿವಿಯೋಲೆ ನೀಡಿರುವ ವಿಚಾರವನ್ನು ತಿಳಿಸಿರಲಿಲ್ಲ. ಅವರನ್ನು ಕರೆದು ಎಚ್ಚರಿಕೆ ನೀಡುವಂತೆ ಮನವಿ ಮಾಡಿದ್ದೆ. ನಂತರ ಆರೋಪಿಗಳು ಓಲೆ ವಾಪಸ್ ಕೊಟ್ಟು, 1 ಲಕ್ಷ ರೂ. ಕೊಡುವಂತೆ ಬೆದರಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.