ಇಬ್ಬರು ದರೋಡೆಕೋರರ ಬಂಧನ

Crime Logo
Published on

ಧಾರವಾಡ: ಜಮೀನಿನ ಶೆಡ್​ನಲ್ಲಿ ಮಲಗಿದ್ದ ವೃದ್ಧನ ಮೇಲೆ ಹಲ್ಲೆ ಮಾಡಿ ಚಿನ್ನ, ನಗದು ದರೋಡೆ ಮಾಡಿದ್ದ ಇಬ್ಬರನ್ನು ಗ್ರಾಮೀಣ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ತಾಲೂಕಿನ ವರವನಾಗಲಾವಿ ಗ್ರಾಮದ ವೃದ್ಧ ಈಶ್ವರ ಕಲಭಾವಿ ಎಂಬಾತ ಆ. 28ರಂದು ತನ್ನ ಜಮೀನಿನ ಶೆಡ್​ನಲ್ಲಿ ಮಲಗಿದ್ದ. ಅಲ್ಲಿಗೆ ನುಗ್ಗಿದ ಅದೇ ಗ್ರಾಮದ ನಿಂಗಪ್ಪ ತಡಕೋಡ ಹಾಗೂ ಮಂಜುನಾಥ ನೀರಲಕಟ್ಟಿ, ವೃದ್ಧ ಹೊದ್ದುಕೊಂಡಿದ್ದ ಚಾದರದಿಂದ ಮುಚ್ಚಿ ಹಲ್ಲೆ ಮಾಡಿದ್ದರು. ನಂತರ ಈಶ್ವರನ ಕೈಯಲ್ಲಿದ್ದ 15,000 ರೂ. ಮೌಲ್ಯದ ಚಿನ್ನದ ಉಂಗುರ ಹಾಗೂ 2,000 ರೂ. ನಗದು ಕಿತ್ತುಕೊಂಡು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಅದೇ ಗ್ರಾಮದ ನಿಂಗಪ್ಪ ಹಾಗೂ ಮಂಜುನಾಥನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕೊಲೆ ಪ್ರಕರಣ, ಮತ್ತಿಬ್ಬರ ಬಂಧನ

ಧಾರವಾಡ: ತಾಲೂಕಿನ ನರೇಂದ್ರ ಗ್ರಾಮದಲ್ಲಿ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮೀಣ ಠಾಣೆ ಪೊಲೀಸರು ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ.

ಗ್ರಾಮದ ಪರವೀನ್​ಭಾನು ಎಂಬಾಕೆಯೊಂದಿಗೆ ಸೋಮಯ್ಯ ಪೂಜಾರ ಎಂಬಾತ ಅನೈತಿಕ ಸಂಬಂಧ ಹೊಂದಿದ್ದ. ಅದಕ್ಕೆ ಅಡ್ಡಿಯಾಗಿದ್ದ ಪರವೀನ್​ಭಾನು ಪತಿ ಪೀರಸಾಬ ನದಾಫ್​ನನ್ನು ಆ. 27ರಂದು ಕರೆದೊಯ್ದು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸೋಮಯ್ಯನನ್ನು ಪೊಲೀಸರು ಬಂಧಿಸಿದ್ದರು. ಆರೋಪಿಯು ಪೀರಸಾಬನನ್ನು ಕೊಲೆ ಮಾಡಿ ಎಂ.ಕೆ. ಹುಬ್ಬಳ್ಳಿ ಬಳಿಯ ಹೊಳೆಯಲ್ಲಿ ಎಸೆದು ಬಂದಿದ್ದ. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು, ಕೊಲೆಗೆ ಸಹಕರಿಸಿದ ಪೀರಸಾಬನ ಪತ್ನಿ ಪರವೀನ್​ಭಾನು ಹಾಗೂ ಮಲ್ಲಿಕಾರ್ಜುನ ಅಗಸರ ಎಂಬಿಬ್ಬರನ್ನು ಬಂಧಿಸಿದ್ದಾರೆ. ಗ್ರಾಮೀಣ ಡಿವೈಎಸ್​ಪಿ ರವಿ ನಾಯಕ ಮಾರ್ಗದರ್ಶನದಲ್ಲಿ ಸಿಪಿಐ ಎಸ್.ಬಿ.ಪಾಟೀಲ ಮತ್ತು ಪಿಎಸ್​ಐಗಳಾದ ಮಹೇಂದ್ರಕುಮಾರ ನಾಯಕ, ಸುಮಾ ನಾಯಕ ಹಾಗೂ ಸಿಬ್ಬಂದಿ ತನಿಖೆ ನಡೆಸಿದ್ದರು.

ಬಾರ್​ಗೆ ಕನ್ನಾ ಹಾಕಿದ ಖದೀಮ

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯಲ್ಲಿರುವ ಬಾರ್​ವೊಂದಕ್ಕೆ ರಾತ್ರಿ ನುಗಿದ್ದ ಕಳ್ಳ ಅಲ್ಲಿಯೇ ಕುಳಿತು ಮದ್ಯ ಸೇವಿಸಿ ಹಣ ದೋಚಿದ ಘಟನೆ ನಡೆದಿದೆ. ಮಂಜುನಾಥನಗರ ಬಳಿಯ ಬಾರ್​ನಲ್ಲಿ ಕಳ್ಳತನ ಮಾಡಿದ್ದಲ್ಲದೇ ಒಂದು ಪೆಗ್ ಏರಿಸಿದ ಐನಾತಿ ಕಳ್ಳನ ಕರಾಮತ್ತು ಬಾರ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಬಾರ್​ನಲ್ಲಿದ್ದ ಸಾವಿರಾರು ರೂಪಾಯಿ ಹಾಗೂ ವಿವಿಧ ಬ್ರಾಂಡ್​ನ ಮದ್ಯ ಕಳ್ಳತನ ಮಾಡಿದ್ದಾನೆ ಎನ್ನಲಾಗಿದೆ. ಗೋಕುಲ್ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net