

ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಂದ 97,400 ರೂ. ಮೌಲ್ಯದ 5 ಕೆಜಿ 100 ಗ್ರಾಂ ಗಾಂಜಾ, 1,000 ರೂ. ನಗದು ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಗದಗ ಜಿಲ್ಲೆ ತಿಮ್ಮಾಪುರ ಗ್ರಾಮದ ಮಾರುತಿ ಕಲ್ಲಪ್ಪ ಹರನಶಿಕಾರಿ (21) ಹಾಗೂ ಚಂದಪ್ಪ ಸಿದ್ದಪ್ಪ ಹರನಶಿಕಾರಿ (25) ಬಂಧಿತರು.
ಶಿಶುವಿನಹಾಳ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಯಿಂದ ಗಾಂಜಾ ಪಡೆದು ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಎಸಿಪಿ ಶಂಕರ ರಾಗಿ ಮಾರ್ಗದರ್ಶನದಲ್ಲಿ ಉಪನಗರ ಠಾಣೆ ಇನ್ಸ್ಪೆಕ್ಟರ್ ಎಸ್.ಕೆ ಹೊಳೆಯಣ್ಣವರ ನೇತೃತ್ವದ ತಂಡ ದೇಸಾಯಿ ವೃತ್ತದ ಬಳಿ ದೇಶಪಾಂಡೆ ನಗರದ ಅಸೆಸನ್ಸ್ ಚರ್ಚ್ ಬಳಿ ಆರೋಪಿಗಳನ್ನು ಬಂಧಿಸಿದೆ.
ಹು-ಧಾ ಅವಳಿ ನಗರದಲ್ಲಿ ಗಾಂಜಾ ದಂಧೆ ಕುರಿತು ‘ಹುಬ್ಬಳ್ಳಿಗೂ ಉಂಟು ನಶೆಯ ನಂಟು’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ಯಲ್ಲಿ ಆ. 30ರಂದು ವಿಶೇಷ ವರದಿ ಪ್ರಕಟವಾಗಿತ್ತು. ವರದಿ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇದರ ಹಿಂದಿರುವ ಗಾಂಜಾ ಮಾರಾಟ ಜಾಲ ಭೇದಿಸಬೇಕಿದೆ.
ಆಯುಕ್ತರ ಶ್ಲಾಘನೆ :
ಪಿಎಸ್ಐ ಸೀತಾರಾಮ, ಅಶೋಕ ಬಿ.ಎಸ್.ಪಿ., ಸಿಬ್ಬಂದಿ ಸುನೀಲ ಪಾಂಡೆ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಕರಬಸಪ್ಪ ನೆಲಗುಡ್ಡ, ಬಸವರಾಜ ಸುಣಗಾರ, ಉಮೇಶ ಹೆದ್ದೇರಿ, ರೇಣಪ್ಪ ಸಿಕ್ಕಲಗಾರ, ರವಿ ಹೊಸಮನಿ, ನಾಗರಾಜ ಬೀರಣ್ಣವರ, ಸಂತೋಷ ಅಳಗವಾಡಿ, ಮಾಬುಸಾಬ ಮುಲ್ಲಾ, ಮಂಜು ಕಮತದ ತಂಡದಲ್ಲಿದ್ದರು. ಈ ತಂಡದ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪಿಯುಸಿ ವಿದ್ಯಾರ್ಥಿ ಗಾಂಜಾ ಮಾರಾಟಗಾರ !
ಇಬ್ಬರು ಆರೋಪಿಗಳಲ್ಲಿ ಓರ್ವ ಮಾರುತಿ ಹರಿಣಶಿಕಾರಿ ಗದಗನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಾಲೇಜಿನ ಪಿಯುಸಿ ವಿದ್ಯಾರ್ಥಿಯಾಗಿದ್ದು, ಹುಬ್ಬಳ್ಳಿ- ಧಾರವಾಡದ ವಿದ್ಯಾರ್ಥಿಗಳೇ ಬಂಧಿತರ ಟಾರ್ಗೆಟ್ ಆಗಿದ್ದರು ಎಂದು ಸ್ವತಃ ಡಿಸಿಪಿ ಪಿ. ಕೃಷ್ಣಕಾಂತ ಅವರೇ ಬಹಿರಂಗ ಪಡಿಸಿದ್ದಾರೆ.
ಮಾರುತಿ ತನ್ನ ಸಹೋದರ ಸಂಬಂಧಿ ಚಂದಪ್ಪ ಜತೆ ಸೇರಿಕೊಂಡು ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ. ಚೀಟಿಗಳಲ್ಲಿ ಗಾಂಜಾ ಪುಡಿ ತುಂಬಿ 50, 100, 200 ರೂ.ಗೆ ಮಾರಾಟ ಮಾಡುತ್ತಿದ್ದ ಎಂಬ ಆತಂಕಕಾರಿ ಸಂಗತಿ ಪ್ರಾಥಮಿಕ ತನಿಖೆಯಿಂದ ಹೊರಬಿದ್ದಿದೆ.
ವಿದ್ಯಾರ್ಥಿಯೊಬ್ಬ ಗಾಂಜಾ ಮಾರಾಟಕ್ಕೆ ಇಳಿದಿರುವುದರ ಹಿಂದೆ ಬೃಹತ್ ಜಾಲ ಇರುವ ಶಂಕೆ ಮೂಡುತ್ತಿದೆ. ಹಾಗಾಗಿ, ಪೊಲೀಸರು ಈ ಹಿಂದಿನ ಜಾಲ ಭೇದಿಸುವ ಮೂಲಕ ಭವಿಷ್ಯದಲ್ಲಿ ಬೆಳಗಬೇಕಾದ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕಿದೆ.
ಡ್ರಗ್ಸ್ ಕುರಿತು ಮಾಹಿತಿ ನೀಡಿ
ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಬೇರೆ ನಗರ, ರಾಜ್ಯಗಳಿಂದ ಹಲವು ವಿದ್ಯಾರ್ಥಿಗಳಿದ್ದಾರೆ. ಅಂಥವರಿಗೆ ದಂಧೆಕೋರರು ಗಾಂಜಾ ಮಾರಾಟ ಮಾಡುತ್ತಿದ್ದಾರೆ. ಇಂತಹ ಅಕ್ರಮ ಚಟುವಟಿಕೆಗಳ ಯಾವುದೇ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ನನ್ನ ಮೊ.ಸಂ. 94808 02005 ಗೆ ಕರೆ ಮಾಡಿ ಮಾಡಿ ನೀಡಬಹುದು ಎಂದು ಡಿಸಿಪಿ ಕೃಷ್ಣಕಾಂತ ಮನವಿ ಮಾಡಿದ್ದಾರೆ.
ಗದುಗಿನಲ್ಲೂ ಗಾಂಜಾ ವಶ
ಗದಗ: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಅವಳಿನಗರ ಪೊಲೀಸರು 14 ಸಾವಿರ ರೂ. ಮೌಲ್ಯದ ಸುಮಾರು ಒಂದೂವರೆ ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬೆಟಗೇರಿಯ ನೇಕಾರ ಕಾಲನಿ ನಿವಾಸಿ ಮಂಜುನಾಥ ಕಾಳೆ ಬಂಧಿತ. ಆಟೋ ಚಾಲಕನಾಗಿರುವ ಮಂಜುನಾಥ ಕಾಳೆ ನೇಕಾರ ಕಾಲನಿಯ ಬಯಲು ಜಾಗದಲ್ಲಿ ಮಾರಾಟ ಮಾಡುವಾಗ ದಾಳಿ ನಡೆಸಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ.