ಇಬ್ಬರು ಕೊಲೆಗಾರರಿಗೆ ಜೀವಾವಧಿ ಶಿಕ್ಷೆ

Justice
Published on

ಚಿತ್ರದುರ್ಗ: ತನ್ನ ಪತ್ನಿಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾನೆಂಬ ದ್ವೇಷದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಪ್ರಕರಣ ಸಂಬಂಧ ಅಪರಾಧಿ ಪತಿ, ಆತನ ಸಹಚರನಿಗೆ ನಗರದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಕಠಿಣ ಶಿಕ್ಷೆ, ತಲಾ 1 ಲಕ್ಷ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.

ತಾಲೂಕಿನ ಗೋನೂರು ಗ್ರಾಮದ ಮಂಜುನಾಥ, ಮಲ್ಲಾಪುರ ಗೊಲ್ಲರಹಟ್ಟಿ ಗ್ರಾಮದ ಮಂಜಣ್ಣ ಶಿಕ್ಷೆಗೆ ಗುರಿಯಾದವರು.

ಘಟನೆ ಹಿನ್ನೆಲೆ: ಗೋನೂರು ಗ್ರಾಮದ ಸ್ವಾಮಿ ಯಾನೆ ಬುಲ್ಲಿ ಪತ್ನಿಯ ವಿರುದ್ಧ ಕೆಟ್ಟ ದೃಷ್ಟಿ ಬೀರುತ್ತಿದ್ದಾನೆ ಎಂದು ಮಂಜುನಾಥ್‌ಗೆ ಶಂಕೆ ವ್ಯಕ್ತವಾಗಿದೆ. ವರ್ತನೆ ಸರಿಯಲ್ಲವೆಂದು ಹಲವು ಬಾರಿ ಎಚ್ಚರಿಕೆ ಕೂಡ ನೀಡಿದ್ದಾನೆ. ಅದು ಬದಲಾಗದ ಕಾರಣ 2022ರ ಜೂ. 8ರಂದು ಬಂಗಾರದ ಗುಡ್ಡದ ಕಣಿವೆಮಾರಮ್ಮ ದೇವಿ ದೇಗುಲ ಬಳಿ ಕರೆದೊಯ್ದು ಹಲ್ಲೆ ಮಾಡಿ, ಹತ್ಯೆಗೈದಿದ್ದಾನೆ. ಸಹಚರ ಮಂಜಣ್ಣ ಸಾಥ್ ನೀಡಿದ್ದಾನೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶಂಕರಪ್ಪ ನಿಂಬಣ್ಣ ಕಲ್ಕನಿ ಅವರು, ಇಬ್ಬರ ಮೇಲಿನ ಆರೋಪ ಸಾಬೀತಾದ್ದರಿಂದ ಶಿಕ್ಷೆ, ದಂಡ, ಪಾವತಿಸದಿದ್ದಲ್ಲಿ 6 ತಿಂಗಳ ಕಠಿಣ ಸಜೆ ವಿಧಿಸಿದ್ದಾರೆ. ಪರಿಹಾರದ ಮೊತ್ತ ಮೃತ ಸ್ವಾಮಿ ತಾಯಿ ಚಿನ್ನಮ್ಮಗೆ ಪಾವತಿಸುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಎನ್.ಎಸ್. ಮಲ್ಲಯ್ಯ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net