ಇಬ್ಬರು ಕೊಲೆ ಆರೋಪಿಗಳ ಬಂಧನ

15 YERRISWAMY 02
Published on

ಬಳ್ಳಾರಿ : ತಾಲೂಕಿನ ಸುಲ್ತಾನಪುರ ಗ್ರಾಮದ ಸಾ ಕಾರ್ಖಾನೆಯಲ್ಲಿ ಹಣದ ವಿಷಯವಾಗಿ ವ್ಯಕ್ತಿಯನ್ನು ಕೊಲೆಗೈದ ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಎಸ್ಪಿ ಡಾ.ವಿ.ಜೆ. ಶೋಭಾರಾಣಿ ಹೇಳಿದರು.
ನಗರದ ಎಸ್ಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸುಲ್ತಾನಪುರ ಗ್ರಾಮದ ನಿವಾಸಿಗಳಾದ ಸುರೇಂದ್ರ, ಕಿಶೋರಿ ಲಾಲ್ ಬಂಧಿತರು. ರಾಮಶಂಕರ್ ವಿಶ್ವಕರ್ಮ ಕೊಲೆಯಾದವ. ಕಳೆದ ಕೆಲ ತಿಂಗಳ ಹಿಂದೆ ಆರೋಪಿಗಳಿಗೆ ರಾಮಶಂಕರ್ ಒಂದು ಲಕ್ಷ ರೂ. ಹಣ ಸಾಲ ನೀಡಿದ್ದನು. ಕೊಟ್ಟ ಹಣ ವಾಪಾಸ್ಸು ಕೇಳಿದ್ದಕ್ಕೆ ಈ ಇಬ್ಬರು ಆರೋಪಿಗಳು ಸುಲ್ತಾನಪುರದ ಜಿಂದಾಲ್ ಸಾ ಕಾರ್ಖಾನೆಯ ಸೇಫ್ಟಿ ರೂಮ್‌ನಲ್ಲಿ ಕರೆದುಕೊಂಡು ಹೋಗಿ ಹತ್ಯೆಗೈದಿದ್ದಾರೆ. ಪೊಲೀಸರ ತನಿಖೆಯಲ್ಲಿ ಆರೋಪಿಗಳು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಕುರಿತು ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.
ಪ್ರತ್ಯೇಕ ಪ್ರಕರಣದಲ್ಲಿ ಮನೆಗಳ್ಳರ ಬಂಧನ : ನಗರದ ಕಪ್ಪಗಲ್ ರಸ್ತೆಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಇಲ್ಲಿನ ರೇಣುಕಾ ನಗರದ ನಿವಾಸಿ ಆರೋಪಿ ಕಾರ್ತಿಕನನ್ನು ಬಂಧಿಸಿಲಾಗಿದೆ. ಆರೋಪಿಯಿಂದ 8.26 ಲಕ್ಷ ರೂ. ಮೌಲ್ಯದ 165 ಗ್ರಾಂ ಬಂಗಾರ ಹಾಗೂ 25 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಈಗಾಗಲೇ ಆರೋಪಿ ವಿರುದ್ಧ ಜಿಲ್ಲೆಯ ಕೌಲಬಜಾರ್ ಠಾಣೆ ಐದು, ಗಾಂಧಿನಗರ ಠಾಣೆ 14 ಹಾಗೂ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದನು. ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅನುಮಾಸ್ಪದವಾಗಿ ತಿರುಗಾಡುತ್ತಿದ್ದ ಆಂಧ್ರದ ಕಲ್ಯಾಣದುರ್ಗಂ ನಿವಾಸಿ ವಡ್ಡೆ ಪೀಟಲ ಗಂಗಾಧರ ಎಂಬ ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಕಳೆದ ವರ್ಷ ಇಲ್ಲಿನ ವಡ್ಡರಬಂಡೆಯಲ್ಲಿ ಹಾಗೂ ಕಂಪ್ಲಿ ತಾಲೂಕಿನ ಮನೆಯೊಂದರ ಬೀಗ ಮುರಿದು ಬಂಗಾರ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ 4.20 ಲಕ್ಷ ರೂ. ಮೌಲ್ಯದ 60 ಗ್ರಾಂ ಬಂಗಾರ ಹಾಗೂ ಹತ್ತು ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು. ನಗರದಲ್ಲಿ ಸೂಕ್ತ ಪಾರ್ಕಿಂಗ್ ಸಮಸ್ಯೆಯಿಂದ ಟ್ರಾಫಿಕ್ ಸಮಸ್ಯೆಯಿದೆ. ಅಧಿಕಾರಿಗಳ ಜತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು. ರಸ್ತೆಯ ಬದಿ ಬೈಕ್ ನಿಲ್ಲಿಸಬೇಡಿ ಎಂದರೆ, ಬೈಕ್ ಎಲ್ಲಿ ನಿಲ್ಲಿಸಬೇಕು ಎಂದು ಸವಾರರು ಪಶ್ನಿಸುವುದು ಸಾಮಾನ್ಯವಾಗಿದೆ. ಆದ್ದರಿಂದ, ನಗರದ ವಿವಿಧಡೆ ಪರ್ಯಾಯವಾಗಿ ಪಾರ್ಕಿಂಗ್ ಅನುಕೂಲ ಮಾಡಲು ಸ್ಥಳ ಗುರುತಿಸಲಾಗುವುದು. ಬೈಕ್ ಸವಾರರು ಹೆಲ್ಮೇಟ್ ಹಾಗೂ ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಿ ಚಾಲನೆ ಮಾಡಬೇಕು ಎಂದು ಮನವಿ ಮಾಡಿದರು. ಎಎಸ್ಪಿ ಕೆ.ಪಿ. ರವಿಕುಮಾರ, ನವೀನಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net