ಇಬ್ಬರು ಕೊಲೆ ಆರೋಪಿಗಳ ಬಂಧನ

19-gdg-sp shivaprakash devaraj
Published on

ಗದಗ: ಕಳೆದ ಸೋಮವಾರ ಜಿಲ್ಲೆಯ ನರಗುಂದ ತಾಲೂಕಿನ ಗುರ್ಲಕಟ್ಟಿಯಲ್ಲಿ ನಡೆದಿದ್ದ ಸಂಗನಗೌಡ ನಾಯ್ಕನೂರ ಎಂಬುವರ ಕೊಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದೇ ಗ್ರಾಮದ ಸುರೇಶಗೌಡ ಕಲ್ಲನಗೌಡ ಪಾಟೀಲ (30) ಹಾಗೂ ಗುರ್ಲಕಟ್ಟಿಯಲ್ಲಿ ವಾಸಿಸುವ ಸವದತ್ತಿ ತಾಲೂಕಿನ ಹೂಲಿ ಮೂಲದ ಈರಣ್ಣ ಉಮೇಶ ಅಂತಕ್ಕನವರ (25) ಅವರನ್ನು ಬಂಧಿಸಲಾಗಿದೆ ಎಂದರು.
2022ರ ಸೆ. 19 ರಂದು ಮಧ್ಯಾಹ್ನ 2.30ರ ಸುಮಾರಿಗೆ ಗ್ರಾಮದ ಗ್ರಾಮ ಪಂಚಾಯಿತಿ ಮುಖ್ಯ ರಸ್ತೆಯಲ್ಲಿ ಸಂಗನಗೌಡ ನಾಯ್ಕನೂರ ಎಂಬುವವನ ಹೊಟ್ಟೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಇದಕ್ಕೂ ಮುನ್ನ ಆರೋಪಿತರು ಮೃತನ ಮನೆಗೆ ಬಂದು ಗಂಡನನ್ನು ಕೊಲ್ಲುವ ಬಗ್ಗೆ ಹೇಳಿಹೋಗಿದ್ದರು ಎಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಹೆಂಡತಿ ಪ್ರಿಯಾ ಸಂಗನಗೌಡ ನಾಯ್ಕನೂರ ಈ ಕುರಿತು ನರಗುಂದ ಠಾಣೆಗೆ ದೂರು ನೀಡಿದ್ದರು.
ದೂರು ಆಧರಿಸಿ ನರಗುಂದ ಉಪ-ವಿಭಾಗದ ಆರಕ್ಷಕ ಉಪಾಧೀಕ್ಷಕ ವೈ.ಎಸ್. ಏಗನಗೌಡ್ರ ಮಾರ್ಗದರ್ಶನದಲ್ಲಿ ನರಗುಂದ ಪೊಲೀಸ್ ಇನ್ಸ್​ಪೆಕ್ಟರ್ ಮಲ್ಲಯ್ಯ ಜಿ. ಮಠಪತಿ ಅವರ ನೇತೃತ್ವದಲ್ಲಿ ಪಿಎಸ್​ಐ ಸುನೀಲಕುಮಾರ ನಾಯಕ ಹಾಗೂ ಸಿಬ್ಬಂದಿ ವಿ.ಡಿ ಕೊಣ್ಣೂರ, ಚಂದ್ರು ಕಾಕನೂರ, ಖಾಜೇಸಾಬ ಮುಲ್ಲಾನವರ, ಸುರೇಶ ಚಟ್ರಿ, ಎನ್.ಎಸ್ ಬಾರಕೇರ ಅವರನ್ನೊಳಗೊಂಡ ವಿಶೇಷ ತಂಡ ಸವದತ್ತಿ ತಾಲೂಕಿನ ಇನಾಮಹೊಂಗಲ್ ಹತ್ತಿರ ಇರುವ ಶಿರೂರ ಗ್ರಾಮದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಚಾಕು, ಟಂ ಟಂ ವಾಹನ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಕರಣದ ತನಿಖೆ ಕಾರ್ಯ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿವರಿಸಿದರು.

ಕೊಲೆ ಪ್ರಕರಣದಲ್ಲಿ ದೂರುದಾರರಾಗಿರುವ ಮೃತನ ಹೆಂಡತಿ ಹಾಗೂ ಬಂಧಿತ ಆರೋಪಿ ಸುರೇಶಗೌಡನ ಮಧ್ಯೆ ಸಂಬಂಧ ಇರುವ ಬಗ್ಗೆಯೂ ಚರ್ಚೆಯಾಗುತ್ತಿದ್ದು, ಇದು ಸೇರಿ ಎಲ್ಲ ಆಯಾಮಗಳಲ್ಲೂ ತನಿಖೆ ಮಾಡುತ್ತೇವೆ. | ಶಿವಪ್ರಕಾಶ ಡಿ., ಎಸ್​ಪಿ, ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net