

ಮೈಸೂರು: ಡಾ.ಬಿ.ಸಿ. ರಾಯ್ ಜನ್ಮದಿನ ಅಂಗವಾಗಿ ಶ್ರೀವಾಸುದೇವ ಮಹಾರಾಜ್ ಫೌಂಡೇಷನ್‌ನಿಂದ ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಇಬ್ಬರಿಗೆ ವೈದ್ಯರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಈ ಹಿಂದೆ ನಾನು ಮಿಲಿಟರಿ ಸೇವೆಯಲ್ಲಿದ್ದಾಗ ಒಮ್ಮೆ ಹೊಟ್ಟೆಗೆ ಗುಂಡೇಟು ಬಿದ್ದಿತ್ತು. ಆ ವೇಳೆ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ನನ್ನನ್ನು ಸೇನಾ ವೈದ್ಯರು ಗುಣಪಡಿಸಿದರು. ಈ ರೀತಿಯಲ್ಲಿ ವೈದ್ಯರು ಎಲ್ಲೆಡೆ ಸೇವೆ ಮಾಡುತ್ತಿದ್ದಾರೆ. ಹೀಗಾಗಿ ವೈದ್ಯರ ಸೇವೆ ಗಮನಿಸಿ ಅವರನ್ನು ಸನ್ಮಾನಿಸುವುದು ಉತ್ತಮ ಕೆಲಸ ಎಂದರು.
ದೇಶದ ಗಡಿಯಲ್ಲಿ ಸೈನಿಕರು ನಮ್ಮನ್ನು ಕಾಯುವ ಕೆಲಸ ಮಾಡಿದರೆ ದೇಶದ ಒಳಗೆ ಆಂತರಿಕ ಗಲಭೆಗಳು ನಡೆಯದಂತೆ ತಡೆಯುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ. ಇವರ ಸೇವೆಯೂ ಸಮಾಜದಲ್ಲಿ ಮಹತ್ವದ್ದಾಗಿದೆ ಎಂದು ಬಣ್ಣಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ ಅವರು ಮಾತನಾಡಿ ವೈದ್ಯರನ್ನು ಅಭಿನಂದಿಸಿದರು. ಪೂರ್ಣಿಮಾ ಆಸ್ಪತ್ರೆಯ ನಿರ್ದೇಶಕಿ ಹಾಗೂ ಪ್ರಸೂತಿ ತಜ್ಞೆ ಡಾ. ಪೂರ್ಣಿಮಾ ಮಧುಸೂದನ್, ರಾಮಕೃಷ್ಣ ನರ್ಸಿಂಗ್ ಹೋಮ್ ನಿರ್ದೇಶಕಿ ಡಾ.ಕೆ.ವಿ.ಲಕ್ಷ್ಮೀದೇವಿ ಅವರಿಗೆ ವೈದ್ಯರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಸಮಾಜ ಸೇವಕ ರಘುರಾಂ ವಾಜಪೇಯಿ, ವಾಸುದೇವ ಮಹಾರಾಜ್ ಫೌಂಡೇಷನ್ ಅಧ್ಯಕ್ಷ ಎಂ.ವಿ ನಾಗೇಂದ್ರ ಬಾಬು, ಜಯರಾಜ್ ಇದ್ದರು.