

ಕೆಂಭಾವಿ : ಶುದ್ಧ ಕುಡಿಯುವ ನೀರಿನ ಘಟಕ ನಾಶಪಡಿಸಿ ನಲ್ಲಿ (ನಳ) ಮುರಿದಿದ್ದರಿಂದ ರೊಚ್ಚಿಗೆದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವ್ಯಕ್ತಿಯೊಬ್ಬನಿಗೆ ಚಪ್ಪಲಿಯಿಂದ ಹೊಡೆದು ಮತ್ತೊಬ್ಬರಿಗೆ ಕೈ ತಿರುವಿ ಕಪಾಳಮೋಕ್ಷ ಮಾಡಿದ ಘಟನೆ ಶನಿವಾರ ನಡೆದಿದೆ.
ಮಲ್ಲಾ(ಬಿ) ಗ್ರಾಮದಲ್ಲಿ ನಡೆದಿರುವ ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಮಲ್ಲಾ ಗ್ರಾಮಸ್ಥರಾದ ಸಿದ್ದಣ್ಣ ದೊಡ್ಡಮನಿ ಹಾಗೂ ಶಿವಶಂಕರ ತಳವಾರ ನೀರು ತರಲು ಹೋಗಿದ್ದಾರೆ. ಆಗ ಬಿಲ್ ಕಲೆಕ್ಟರ್ ಕರೆಂಟ್ ಹೋಗಿದೆ. ಬಂದ ಬಳಿಕ ಬಿಡುತ್ತೇನೆ ಎಂದಿದ್ದಾರೆ. ಆ ವೇಳೆ ಮಾತಿಗೆ ಮಾತು ಬೆಳೆದಿದೆ. ಪಿಡಿಒ ಜತೆ ಫೋನ್‌ನಲ್ಲಿ ಮಾತನಾಡುವಂತೆ ಬಿಲ್ ಕಲೆಕ್ಟರ್ ತಿಳಿಸಿದ್ದಾನೆ. ಸಿದ್ದಣ್ಣ ಮಾತನಾಡಿದ್ದಾನೆ. ಆಗ ಪಿಡಿಒ ಪುತ್ರಪ್ಪಗೌಡ ಮತ್ತು ಸಿದ್ದಣ್ಣ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊAಡಿದ್ದಾರೆ.
ಪಿಡಿಒ ಅವರಿಬ್ಬರನ್ನು ಕರೆಸಿ ಗ್ರಾಮ ಪಂಚಾಯಿತಿ ಆವರಣಕ್ಕೆ ಬರುತ್ತಿದ್ದಂತೆ ಒಬ್ಬನಿಗೆ ಚಪ್ಪಲಿಯಿಂದ ಹೊಡೆದರೆ, ಮತ್ತೊಬ್ಬನ ಕೈ ತಿರುವಿ ಕಪಾಳಕ್ಕೆ ಹೊಡೆಯುತ್ತಾರೆ. ಇದನ್ನು ಬಹುತೇಕ ಗ್ರಾಮಸ್ಥರು ನಿಂತು ನೋಡುತ್ತಿದ್ದು, ಕೆಲವರು ಬಿಡಿಸಲು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪಿಡಿಒ ಮತ್ತು ಗ್ರಾಮದ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ.