

ಎನ್.ಆರ್.ಪುರ: ಕಳೆದ 20 ವರ್ಷಗಳಿಂದ ಒಂದೇ ಒಂದು ಆಶ್ರಯ ನಿವೇಶನ, ಮನೆಯನ್ನಾಗಲೀ ವಿತರಿಸಿಲ್ಲ. ಇದೇ ಮೊದಲ ಬಾರಿಗೆ ಪಪಂ ವ್ಯಾಪ್ತಿಯ 50 ಜನರಿಗೆ ಮನೆ ಮಂಜೂರು ಮಾಡಿಸಿಕೊಂಡು ಬರಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪಪಂನಲ್ಲಿ ಶನಿವಾರ ಆಶ್ರಯ ಮನೆ ಫಲಾನುಭವಿಗಳಿಗೆ ಮನೆ ಕಟ್ಟುವ ಕಾರ್ಯಾದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ಮುಖ್ಯ. ಅದರೊಂದಿಗೆ ಕ್ಷೇತ್ರದ ಬಡವರಿಗೆ ಸೂರು ಒದಗಿಸುವುದು, ನಿವೇಶನ ನೀಡುವುದು ಕೂಡ ನಮ್ಮ ಜವಾಬ್ದಾರಿ. ಈಗಾಗಲೇ 50 ಆಶ್ರಯ ಮನೆಗಳು ಮಂಜೂರಾಗಿವೆ ಎಂದರು.
ಪಟ್ಟಣದಲ್ಲಿ ಅಕ್ರಮವಾಗಿ ನಿರ್ವಿುಸಿಕೊಂಡ 80ಕ್ಕಿಂತ ಅಧಿಕ ವರ್ಷವಾದ ಮನೆಗಳನ್ನು ಸಕ್ರಮ ಮಾಡಿಕೊಡುವ ಬಗ್ಗೆ ಈಗಾಗಲೆ ಸಂಬಂಧಿಸಿದವರ ಬಳಿ ನಿಯೋಗ ತೆರಳಿ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವರಿಗೂ ಸಕ್ರಮ ಭಾಗ್ಯ ದೊರೆಯುವ ನಿರೀಕ್ಷೆ ಇದೆ ಎಂದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಡಿ.ಬಿ.ಚಂದ್ರೇಗೌಡ ಅವರು ಶಾಸಕರಾಗಿದ್ದ ಸಂದರ್ಭ ಆಶ್ರಯ ನಿವೇಶನ ಹಾಗೂ ಮನೆಗಳನ್ನು ವಿತರಿಸಿದ್ದು ಬಿಟ್ಟರೆ ಇಪ್ಪತ್ತು ವರ್ಷಗಳಿಂದ ಸೌಲಭ್ಯ ಸಿಕ್ಕಿರಲಿಲ್ಲ. ಶಾಸಕರ ಶ್ರಮದಿಂದ 50 ಮನೆಗಳು ಮಂಜೂರಾಗಿವೆ. ಸರ್ಕಾರದ ಆದೇಶದಂತೆ ಖಾತೆ ಇರುವವರಿಗೆ ಮನೆ ಕಟ್ಟಲು ಆದೇಶ ನೀಡಬೇಕು. ಅದರಂತೆ 12 ಫಲಾನುಭವಿಗಳಿಗೆ ಮನೆ ಕಟ್ಟಲು ಕಾರ್ಯಾದೇಶ ನೀಡಲಾಗುತ್ತಿದೆ. ಇದರಲ್ಲಿ ಮೊದಲ ಹಂತದಲ್ಲಿ ನಾಲ್ಕು ಜನರಿಗೆ ಕಾರ್ಯಾದೇಶ ಪತ್ರ ನೀಡಲಾಗುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ 158 ಜನರಿಗೆ ಆಶ್ರಯ ನಿವೇಶನ ಹಂಚುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. 3.36 ಕೋಟಿ ರೂ. ಅನುದಾನದಲ್ಲಿ ಲೇಔಟ್ ನಿರ್ವಿುಸುವ ಚಿಂತನೆ ನಡೆಸಲಾಗಿದೆ ಎಂದು ವಿವರಿಸಿದರು.