ಇನ್ಸ್​ಪೆಕ್ಟರ್ ವಿರುದ್ಧವೇ ಪ್ರಕರಣ ದಾಖಲು

H15 Prabhu Surin 1
Published on

ಹುಬ್ಬಳ್ಳಿ: ನವನಗರದ ಹಿರಿಯ ನಾಗರಿಕ ಓಂಕಾರ ಗೌಡ ಪಾಟೀಲ (74) ಅವರಿಗೆ ಜೀವ ಬೆದರಿಕೆ ಹಾಕಿ ಕೋಟಿ ರೂ. ಮೌಲ್ಯದ 2 ಕೆಜಿ ಚಿನ್ನಾಭರಣ ಕಿತ್ತುಕೊಂಡ ಆರೋಪದಡಿ ನವನಗರ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಪ್ರಭು ಸೂರಿನ್ ಸೇರಿ ಮೂವರ ವಿರುದ್ಧ ಅವರದ್ದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ನಾರಾಯಣ ರೆಡ್ಡಿ ರಾವ್ ನಗರ ನಿವಾಸಿಗಳಾದ ಶಿವಲೀಲಾ ಪಾಟೀಲ (34), ಸಂತೋಷಕುಮಾರ ಗುಡ್ಡಾಪುರಮಠ (32) ಹಾಗೂ ನವನಗರ ಠಾಣೆ ಇನ್ಸ್​ಪೆಕ್ಟರ್ ಪ್ರಭು ಸೂರಿನ್ (40) ಆರೋಪಿಗಳು.

ಓಂಕಾರಗೌಡ ಅವರ ಪುತ್ರ ಗದಿಗೆಪ್ಪಗೌಡ ಲಂಡನ್​ನಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದರು. ಕಳೆದ ಮೇ ತಿಂಗಳಲ್ಲಿ ಮೃತಪಟ್ಟಿದ್ದರು.

ಗದಿಗೆಪ್ಪಗೌಡ ಪತ್ನಿ ಶಿವಲೀಲಾ, ಆಕೆಯ ಬಂಧು ಸಂತೋಷಕುಮಾರ ಹಾಗೂ ಇನ್ಸ್​ಪೆಕ್ಟರ್ ಪ್ರಭು ಸೂರಿನ್ ಜೂನ್ 26ರಂದು ಜೀವ ಬೆದರಿಕೆ ಹಾಕಿ 2 ಕೆಜಿ ಚಿನ್ನಾಭರಣ ಕಿತ್ತುಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ.

ಇನ್ಸ್​ಪೆಕ್ಟರ್ ಒಬ್ಬರ ವಿರುದ್ಧ ಅವರದ್ದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಧಾರವಾಡ ಜಿಲ್ಲೆಯಲ್ಲಿ ಇದೇ ಮೊದಲು ಎನ್ನಲಾಗಿದೆ. ಓಂಕಾರಗೌಡ ಅವರು ಪ್ರಕರಣ ದಾಖಲಿಸಲು ಹಲವು ಬಾರಿ ನವನಗರ ಪೊಲೀಸ್ ಠಾಣೆಗೆ ಅಲೆದಾಡಿದ್ದರು. ಆದರೆ, ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದರು. ಆ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ಸ್​ಪೆಕ್ಟರ್ ಪ್ರಭು ಸೂರಿನ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯ ನೇತೃತ್ವವನ್ನು ಎಸಿಪಿ ಶಂಕರ ರಾಗಿ ಅವರಿಗೆ ವಹಿಸಲಾಗಿದೆ.

ಸುಳ್ಳು ಆರೋಪ: ಶಿವಲೀಲಾ ತನ್ನ ಆಭರಣಗಳನ್ನು ತಂದೆ- ತಾಯಿ ಜತೆ ನವನಗರಕ್ಕೆ ಬಂದು ಬ್ಯಾಂಕ್ ಲಾಕರ್​ನಲ್ಲಿ ಇಟ್ಟಿದ್ದರು. ಗದಿಗೆಪ್ಪಗೌಡ ಸಾವಿನ ನಂತರ ಓಂಕಾರಗೌಡ ಅವರೇ ಸೊಸೆ ಜತೆ ಬ್ಯಾಂಕ್​ಗೆ ತೆರಳಿ ಚಿನ್ನಾಭರಣ ಬಿಡಿಸಿ ಕೊಟ್ಟಿದ್ದರು. ಓಂಕಾರಗೌಡ ಅವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಠಾಣೆಗೆ 8 ಬಾರಿ ವಿವಿಧ ದೂರಿನ ಅರ್ಜಿ ಸಲ್ಲಿಸಿದ್ದಾರೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಇನ್ಸ್​ಪೆಕ್ಟರ್ ಪ್ರಭು ಸೂರಿನ್ ಆರೋಪಿಸಿದ್ದಾರೆ.

ಲಂಡನ್​ನಲ್ಲಿ ಆತ್ಮಹತ್ಯೆ ಪ್ರಕರಣ: ಮೇ ತಿಂಗಳಲ್ಲಿ ಗದಿಗೆಪ್ಪಗೌಡ ಲಂಡನ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಕುರಿತು ಅಲ್ಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯೋ, ಆತ್ಮಹತ್ಯೆಯೋ ಎಂಬ ಸಂಶಯವೂ ಇದೆ. ಆ ಹಿನ್ನೆಲೆಯಲ್ಲಿ ಲಂಡನ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net