ಇನ್‌ಸ್ಪೆಕ್ಟರ್ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

Published on

ಹನೂರು: ತಾಲೂಕಿನ ಎಡಳ್ಳಿದೊಡ್ಡಿ-ಚಿಂಚಳ್ಳಿ ಮಾರ್ಗದಲ್ಲಿ ಶನಿವಾರ ಟ್ರಾೃಕ್ಟರ್‌ನಲ್ಲಿ ಸಾಗಿಸುತ್ತಿದ್ದ ಮುಸುಕಿನ ಜೋಳದ ಕಡ್ಡಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಇನ್ಸ್‌ಪೆಕ್ಟರ್ ಸಿ.ಆನಂದಮೂರ್ತಿ ಚಾಲಕನ ಗಮನಕ್ಕೆ ತರುವ ಮೂಲಕ ಅನಾಹುತ ತಪ್ಪಿಸಿದ್ದಾರೆ.

ಚಿಂಚಳ್ಳಿ ಗ್ರಾಮದ ಚಾಲಕ ರವಿ, ಕೂಲಿ ಕಾರ್ಮಿಕರಾದ ಬಸವಣ್ಣ, ಮಹದೇವಸ್ವಾಮಿ ಹಾಗೂ ಸಿದ್ದಪ್ಪ ಅವರೊಂದಿಗೆ ಆರ್.ಎಸ್. ದೊಡ್ಡಿಗೆ ತೆರಳಿ ಟ್ರಾೃಕ್ಟರ್‌ನಲ್ಲಿ ಮುಸುಕಿನ ಜೋಳದ ಕಡ್ಡಿಯನ್ನು ತುಂಬಿಕೊಂಡು ಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಈ ವೇಳೆ ಮುಸುಕಿನ ಜೋಳದ ಕಡ್ಡಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಗಾಳಿಯ ರಭಸಕ್ಕೆ ಜ್ವಾಲೆಯ ವೇಗ ಹೆಚ್ಚಾಗಿತ್ತು. ಆದರೆ ಯಾರ ಗಮನಕ್ಕೂ ಬಂದಿರಲಿಲ್ಲ. ಈ ವೇಳೆ ಬಂಡಳ್ಳಿ ಗ್ರಾಮಕ್ಕೆ ಬಕ್ರೀದ್ ಬಂದೋಬಸ್ತ್‌ಗೆ ತೆರಳಿ ಇದೇ ಮಾರ್ಗದಲ್ಲಿ ಹನೂರಿಗೆ ಕಾರಿನಲ್ಲಿ ಹಿಂದಿರುಗುತ್ತಿದ್ದ ಇನ್‌ಸ್ಪೆಕ್ಟರ್ ಸಿ. ಆನಂದಮೂರ್ತಿ ಅವರ ಗಮನಕ್ಕೆ ಬಂದಿದೆ.

ಕೂಡಲೇ ಕಾರಿನಿಂದ ಕೆಳಗಿಳಿದು ಟ್ರಾೃಕ್ಟರ್ ತಡೆದು ಕೂಲಿ ಕಾರ್ಮಿಕರನ್ನು ಕೆಳಗಿಳಿಸಿದರು. ಚಾಲಕ ರವಿ ತುಸು ದೂರ ತೆರಳಿ ಕೆಳಗೆ ಸುರಿಯುವಷ್ಟರಲ್ಲಿ ಮುಸುಕಿನ ಜೋಳದ ಕಡ್ಡಿ ಬಹುತೇಕ ಬೆಂಕಿಗಾಹುತಿಯಾಗಿತ್ತು. ಇನ್‌ಸ್ಪೆಕ್ಟರ್ ಆನಂದಮೂರ್ತಿ ಅವರ ಕರ್ತವ್ಯ ಪ್ರಜ್ಞೆಯಿಂದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್‌ಸ್ಪೆಕ್ಟರ್ ಕಾರ್ಯ ವೈಖರಿಗೆ ಕೂಲಿ ಕಾರ್ಮಿಕರು ಕೃತಜ್ಞತೆ ಸಲ್ಲಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮುಸುಕಿನ ಜೋಳದ ಕಡ್ಡಿಯಲ್ಲಿದ್ದ ಬೆಂಕಿಯನ್ನು ನಂದಿಸಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಬದಿಗೆ ಸರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net