

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ
ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ಪೂರೈಕೆ ವ್ಯವಸ್ಥೆ ಸರಿಪಡಿಸುವುದಕ್ಕೆ ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಪರದಾಡುತ್ತಿದ್ದರೆ, ಅತ್ತ ಆಗಾಗ ಬಂದು ಹೋಗುವ ಕರೆಂಟ್ ಅವ್ಯವಸ್ಥೆ ಗ್ರಾಹಕರಿಗೆ ಶಾಕ್ ನೀಡುತ್ತಿದೆ.
ಗಾಳಿ-ಮಳೆಯಿಂದ ಒಂದೆಡೆ ವಿದ್ಯುತ್ ತಂತಿ ತುಂಡಾಗುವುದು, ಮರ ಬೀಳುವುದು, ಕಂಬ ಮುರಿದು ಬೀಳುವುದು ಸಾಮಾನ್ಯ. ಎಲ್ಲಿ ಕಂಬ ಮುರಿದು ಬಿದ್ದರೂ, ತಂತಿ ತುಂಡಾದರೂ ಅದನ್ನು ಸರಿಪಡಿಸಿ ವಿದ್ಯುತ್ ಪೂರೈಸುವಲ್ಲಿ ಹೆಸ್ಕಾಂ ಸಿಬ್ಬಂದಿಗೆ ಅಷ್ಟೇನೂ ತೊಂದರೆಯಾಗುತ್ತಿಲ್ಲ. ಆದರೆ, ಮುಖ್ಯವಾಗಿ ಅವರನ್ನು ಕಾಡುತ್ತಿರುವುದು ಇನ್ಸುಲೇಟರ್ ಪಂಕ್ಚರ್. ಮಳೆ-ಬಿಸಿಲು ಬಿದ್ದರೆ, ಮರದ ಕಡ್ಡಿಗಳು ತಾಗಿ ಇನ್ಸುಲೇಟರ್ ಪಂಕ್ಚರ್ ಆಗುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಹಾವು, ಓತಿಕ್ಯಾತ ಮತ್ತಿತರ ಪ್ರಾಣಿಗಳು ಇನ್ಸುಲೇಟರ್ ಹಾಗೂ ತಂತಿ ಸುತ್ತಿಕೊಳ್ಳುತ್ತಿರುವುದರಿಂದ ಅದು ಪಂಕ್ಚರ್ ಆಗಿ ವಿದ್ಯುತ್ ಕಡಿತಗೊಳ್ಳುವುದು ಹೆಚ್ಚಾಗಿದೆ. ಇದರಿಂದಾಗಿ ಯಾವ ಕಂಬದಲ್ಲಿ ಇನ್ಸುಲೇಟರ್ ಪಂಕ್ಚರ್ ಆಗಿದೆ ಎಂಬುದನ್ನು ಪರಿಶೀಲಿಸಲು ಎಲ್ಲ ಕಂಬ ಹತ್ತಿ ನೋಡುವುದೇ ಹೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿಗೆ ದೊಡ್ಡ ಕೆಲಸವಾಗಿದೆ.
ಯಾವುದೋ ಒಂದು ಕಂಬದಲ್ಲಿ ಕೆಟ್ಟಿರುವ ಇನ್ಸುಲೇಟರ್ ಅನ್ನು ಸರಿಪಡಿಸಿ ವಿದ್ಯುತ್ ಸಂಪರ್ಕ ನೀಡಿದರೆ, ಕೆಲ ಸಮಯ ಅಷ್ಟೆ ಕರೆಂಟ್ ಸರಿಯಿರುತ್ತದೆ. ನಂತರ ವಿದ್ಯುತ್ ಕಡಿತವಾಗುತ್ತಿದೆ. ಹೀಗೆ ದಿನವಿಡೀ ಹೆಸ್ಕಾಂ ಸಿಬ್ಬಂದಿ ಗಾಳಿ-ಮಳೆಯಲ್ಲಿ ವಿದ್ಯುತ್ ಕಂಬ ಹತ್ತಿಳಿದು ಪ್ರತಿಯೊಂದು ಇನ್ಸುಲೇಟರ್ ನೋಡುವುದರಲ್ಲಿಯೇ ಸುಸ್ತಾಗಿ ಹೋಗುತ್ತಿದ್ದಾರೆ.
ಆಗಾಗ ಬಂದು ಹೋಗುವ ಕರೆಂಟ್ನಿಂದ ಗ್ರಾಹಕರಿಗೆ ತಲೆ ಬಿಸಿ ಉಂಟಾಗಿ ಹೆಸ್ಕಾಂ ಅಧಿಕಾರಿಗಳಿಗೆ ಏನ್ರಿ ಅವ್ಯವಸ್ಥೆ. ಒಂದು ನಿಮಿಷವೂ ಸರಿಯಾಗಿ ಕರೆಂಟ್ ಇರುವುದಿಲ್ಲ ಎಂದು ಕೂಗಾಡುವ ಸ್ಥಿತಿ ಉಂಟಾಗಿದೆ. ಆದರೂ, ತಾಳ್ಮೆಯಿಂದ ಹೆಸ್ಕಾಂ ಅಧಿಕಾರಿಗಳು ಕಾರ್ಯನಿರ್ವಹಿಸುತ್ತ ವಿದ್ಯುತ್ ಸಂಪರ್ಕ ನೀಡಲು ಮುಂದಾಗಿದ್ದಾರೆ.
ಹಲವು ದಿನಗಳಿಂದ ಮಳೆ-ಗಾಳಿಯಿಂದ ಸಮರ್ಪಕ ವಿದ್ಯುತ್ ಸಂಪರ್ಕ ನೀಡುವುದಕ್ಕೆ ತೊಂದರೆ ಆಗುತ್ತಿದೆ. ಮುಖ್ಯವಾಗಿ ಇನ್ಸುಲೇಟರ್ ಪಂಕ್ಚರ್ ಆಗುತ್ತಿರುವುದರಿಂದ ಅದನ್ನು ಕಂಡುಹಿಡಿಯುವುದಕ್ಕೆ ಹೆಚ್ಚು ಸಮಯ ಹಿಡಿಯುತ್ತಿದೆ. ಆದರೂ, ಸಮಸ್ಯೆ ಪತ್ತೆ ಮಾಡಿ ವಿದ್ಯುತ್ ಸಂಪರ್ಕ ನೀಡುತ್ತಿದ್ದೇವೆ. ಸಂಪರ್ಕ ನೀಡಿದ ಕ್ಷಣಾರ್ಧದಲ್ಲಿಯೇ ಗಾಳಿ-ಮಳೆಯಿಂದ ಅಲ್ಲಲ್ಲಿ ಮರ ಬಿದ್ದು ಪುನಃ ಸಂಪರ್ಕ ಕಡಿತಗೊಳ್ಳುತ್ತಿದೆ. ವಾರದಲ್ಲಿ ಅಂದಾಜು 15 ಹೊಸ ಇನ್ಸುಲೇಟರ್ಗಳನ್ನು ಅಳವಡಿಸಲಾಗಿದೆ. ದಿಲೀಪ್, ಇಂಜಿನಿಯರ್ ಹೆಸ್ಕಾಂ ಉಪವಿಭಾಗ ಸಿದ್ದಾಪುರ