

ಆರ್.ಕೃಷ್ಣ ಮೈಸೂರು
ಮೈಸೂರಿನ ಹೆಗ್ಗುರುತಾಗಿರುವ ಮರದ ಕೆತ್ತನೆಯ ಇನ್‌ಲೆ ಕಲೆ (ಹುದುಗು ಕಲೆ) ಪುನರುಜ್ಜೀವನಕ್ಕೆ ಕ್ರಿಯಾಯೋಜನೆ ಸಿದ್ಧಗೊಂಡಿದೆ.
ಮೈಸೂರು ಹೆಸರಿನೊಂದಿಗೆ ಬೆರತು ಹೋಗಿರುವ ವೀಳ್ಯದೆಲೆ, ಮೈಸೂರು ಪಾಕ್, ಗಂಧದ ಎಣ್ಣೆ, ವೀರನಗೆರೆ ಬದನೆಕಾಯಿ, ನಂಜನಗೂಡು ರಸಬಾಳೆ ಜತೆಗೆ ಮರದ ಕೆತ್ತನೆಯೂ ದೇಶ, ವಿದೇಶಗಳಲ್ಲಿ ತನ್ನದೇ ವಿಶಿಷ್ಟ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ.
ಆದರೆ, ಇತ್ತೀಚಿನ ಆಧುನಿಕ ಆವಿಷ್ಕಾರಗಳಿಂದಾಗಿ ಸಾಂಪ್ರಯಿಕವಾಗಿ ಮೈಸೂರು ಅರಸರಿಂದ ಪೋಷಿಸಲ್ಪಟ್ಟಿರುವ ಇನ್‌ಲೆ ಕಲೆಯೂ ನಶಿಸುವ ಹಾದಿಯಲ್ಲಿದೆ. ಹೀಗಾಗಿ ಇದರ ಪುನರುಜ್ಜೀವನಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯಡಿ ಪ್ರಸಿದ್ಧ ರೋಸ್‌ವುಡ್ ಇನ್‌ಲೆ ಕಲೆ (ಹುದುಗು ಕಲೆ)ಯನ್ನು ಉಳಿಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ.
ಕಲೆಗೆ ರಾಜಾಶ್ರಯ
ನೂರಾರು ವರ್ಷಗಳ ಹಿಂದೆ ರಾಜಾಶ್ರಯದಲ್ಲಿ ಆರಂಭವಾದ ಮರದ ಕೆತ್ತನೆಯ ಕಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ತೊಡಗಿಸಿಕೊಂಡಿದ್ದರು. ರಾಜ್ಯ, ದೇಶ, ವಿದೇಶಗಳಲ್ಲಿಯೂ ಮೈಸೂರು ಇನ್‌ಲೆ ಕಲೆಗೆ ಬಹುಬೇಡಿಕೆ ಇತ್ತು. ಆದರೆ, ಇತ್ತೀಚಿನ ವರ್ಷದಲ್ಲಿ ಕಲೆ ಕುಂಟಿತಗೊಳ್ಳುತ್ತಾ ಸಾಗಿದೆ.
ಕಲೆ ಸಂರಕ್ಷಿಸುವ ಹಿನ್ನೆಲೆಯಲ್ಲಿ ಈಗಾಗಲೇ ಇನ್‌ಲೆ ಕಲೆಯಲ್ಲಿ ತೊಡಗಿಸಿಕೊಂಡಿರುವ ಕಲಾವಿದರ ಸಮೀಕ್ಷೆ ನಡೆಸಿ ಅವರೊಂದಿಗೆ ಸಭೆಯೊಂದನ್ನು ನಡೆಸಿ ಅವರ ಸಮಸ್ಯೆಗಳನ್ನು ಆಲಿಸಲಾಗಿದೆ. ಮಾರುಕಟ್ಟೆ ವ್ಯವಸ್ಥೆ, ಕಚ್ಚಾ ಸಾಮಗ್ರಿಗಳ ಪೂರೈಕೆ ಹಂತದಲ್ಲಿ ಮಧ್ಯವರ್ತಿಗಳ ಹಾವಳಿ ಸೇರಿದಂತೆ ಅವರಿಗೆ ಇರುವ ಸಮಸ್ಯೆಯನ್ನು ಆಲಿಸಲಾಗಿದೆ.
ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೈಗಾರಿಕೆ ನಗರದಲ್ಲಿಯೇ ಮಾರಾಟಕ್ಕೆ ವ್ಯವಸ್ಥೆ ಮಾಡಿ ಇನ್‌ಲೆ ಟೂರಿಸಂ ಕಲ್ಪನೆಯಲ್ಲಿ ವ್ಯಾಪಾರ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ. ಕಚ್ಚಾ ಸಾಮಗ್ರಿ ಖರೀದಿಗೆ ಸಂಬಂಧಿಸಿದಂತೆ ನಾನಾ ಕಾನೂನು ತೊಡಕುಗಳು ಇದ್ದು, ಅದನ್ನು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಲು ನಿರ್ಧಾರ ಮಾಡಲಾಗಿದೆ.
ಹೊಸ ಪೀಳಿಗೆ ರೂಪಿಸಲು ಉತ್ತೇಜನ: ಈ ಕಲೆಗೆ ಉತ್ತೇಜನ ನೀಡಲು ಕಲಾವಿದರ ಇನ್ನಿತರ ವಿನ್ಯಾಸಗಳ ರಚನೆ ಹಾಗೂ ಕೌಶಲಾಭಿವೃದ್ಧಿಗೆ ಸಂಬಂಧಿಸಿದಂತೆ ವಿಶೇಷ ತರಬೇತಿ ನೀಡಲು ತೀರ್ಮಾನಿಸಲಾಗಿದೆ. ಈಗಾಗಲೇ ಕಲೆಯಲ್ಲಿ ತೊಡಗಿಸಿಕೊಂಡಿರುವ ಕುಟುಂಬದ ಇನ್ನಿತರ ಸದಸ್ಯರು, ಇಲ್ಲವೇ ಆಸಕ್ತಿ ಇರುವ ಇತರರಿಗೆ ಇನ್‌ಲೆ ಕಲೆಯ ತರಬೇತಿ ನೀಡಿ ಈ ಕಲೆಯಲ್ಲಿ ತೊಡಗಿಸಿಕೊಳ್ಳುವ ಹೊಸ ಪೀಳಿಗೆಯನ್ನು ರೂಪಿಸಲಾಗುತ್ತದೆ.
ಈ ಮೂಲಕ ಅಳಿವಿನಂಚಿನಲ್ಲಿರುವ ಕಲೆಯನ್ನು ಪುನಃಶ್ಚೇತನಗೊಳಿಸುವುದು ಮಾತ್ರವಲ್ಲದೆ, ಹುದುಗು ಕಲೆಯಲಿ ್ಲನಿರತರಾಗಿರುವ ಕಲಾವಿದರ ಸಮಸ್ಯೆಗಳೆಲ್ಲವನ್ನೂ ಪಟ್ಟಿ ಮಾಡಿ ಅವುಗಳನ್ನು ಪರಿಹರಿಸಿ ಅವರ ಆರ್ಥಿಕ ಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಮಧ್ಯವರ್ತಿಗಳ ಹಾವಳಿ
ಅತ್ಯಾಕರ್ಷವಾಗಿರುವ ಯಾವುದೇ ಬಣ್ಣ ಇಲ್ಲದೇ ಮರದಲ್ಲಿ ದೊರೆಯುವ ವಿವಿಧ ಬಣ್ಣದ ಚೂರುಗಳಲ್ಲಿಯೇ ನಾವೀಣ್ಯಪೂರ್ಣ ಕಲಾಕೃತಿ ರೂಪಿಸುವ ಕಲಾವಿದರ ಶ್ರಮವನ್ನು ಮಧ್ಯವರ್ತಿಗಳು ಲಾಭವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.
ಕಲಾವಿದರು ತಾವು ತಯಾರಿಸಿದ ಕಲಾಕೃತಿಗಳನ್ನು ಮಾರಾಟ ಮಾಡಲು ಸಮಯದ ಅಭಾವ ಹಾಗೂ ಸ್ಥಳದ ಕೊರತೆ ಉಂಟಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಮಧ್ಯವರ್ತಿಗಳು ಕಲಾವಿದರಿಂದ ಕಲಾಕೃತಿಗಳನ್ನು ಕಡಿಮೆ ದರಕ್ಕೆ ಖರೀದಿಸಿ, ಎರಡು ಪಟ್ಟು ಹಣಕ್ಕೆ ಮಾರುತ್ತಾರೆ.
ಕಡಿಮೆ ದರಕ್ಕೆ ಖರೀಸಿದರೂ ತಕ್ಷಣಕ್ಕೆ ಹಣ ನೀಡದೆ ಎರಡು, ಮೂರು ತಿಂಗಳ ಕಾಲ ಸಮಯ ತೆಗೆದುಕೊಳ್ಳುವುದಲ್ಲದೆ ಆ ಹಣದಲ್ಲಿಯೂ ಕಮಿಷನ್ ಪಡೆಯುತ್ತಾರೆ ಎನ್ನುವ ಆರೋಪವಿದೆ. ಇದರಿಂದ ಈ ಕಲೆಯನ್ನು ನಂಬಿ ಬದುಕುತ್ತಿರುವವರಿಗೆ ಸಿಗಬೇಕಾದ ನ್ಯಾಯಯುತ ಲಾಭ ಸಿಗುತ್ತಿಲ್ಲ. ಈ ಕಾರಣಕ್ಕೆ ಸಾಕಷ್ಟು ಕಲಾವಿದರು ಕಲಾಕೃತಿ ತಯಾರಿಸುವ ಕೆಲಸ ಬಿಟ್ಟು ಬೇರೆ ಕಡೆಗೆ ತೆರಳುತ್ತಿದ್ದಾರೆ. ಇದರಿಂದ ಕಲಾಕೃತಿ ತಯಾರಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ.
ಮೈಸೂರು ಕಲಾಕೃತಿಗಳಿಗೆ ಬಾರಿ ಬೇಡಿಕೆ
ಮೈಸೂರಿನಲ್ಲಿ ತಯಾರಾದ ಕಲಾಕೃತಿಗಳು ದೇಶ ವಿದೇಶದಲ್ಲೂ ಭಾರಿ ಜನಮನ್ನಣೆ ಪಡೆದಿವೆ. ಪ್ರಸಿದ್ಧ ಪ್ರವಾಸಿತಾಣ ಅಲ್ಲದೆ, ಸ್ಟಾರ್ ಹೋಟೆಲ್‌ಗಳಲ್ಲಿ ಕಲಾಕೃತಿಗಳ ಪ್ರದರ್ಶನ ಇವೆ. ಕಲಾಕೃತಿಗಳ ಗಾತ್ರಕ್ಕೆ ತಕ್ಕಂತೆ ಹಣ ನಿಗದಿಪಡಿಸಲಾಗುತ್ತಿದೆ. ಇನ್ನು ತಮ್ಮ ಇಚ್ಛೆಯಂತೆ ಕಾಲಕೃತಿಗಳನ್ನು ತಯಾರಿಸಲು ಲಕ್ಷ ರೂ. ವರೆಗೂ ಬೆಲೆ ನಿಗದಿಪಡಿಸಲಾಗುತ್ತದೆ.
ಮರದ ಮೂಲಕ ದೇವರ ಮೂರ್ತಿ, ವಾಲ್ ಫ್ರೇಮ್, ಅರಮನೆ ಅಥವಾ ಅದ್ಭುತವಾದ ಕಟ್ಟಡಗಳ ಕಲಾಕೃತಿ, ಗಣ್ಯರ, ಸೆಲೆಬ್ರಿಟಿಗಳ ಚಿತ್ರ ಬಿಡಿಸಿ ಮರದ ಕೆತ್ತನೆ ಮೂಲಕ ಕೃತಿಗಳನ್ನು ರಚಿಸಲಾಗುತ್ತಿದೆ.
ದಶಕಗಳಿಂದ ವಂಶಪಾರಂಪರ್ಯವಾಗಿ ಬಂದಿರೋ ಈ ಕಲೆಯನ್ನು ಪೋಷಿಸಿಕೊಂಡು ಬರುತ್ತಿರುವವರಿಗಾಗಿ ನಗರದ ಮೇಟಗಳ್ಳಿ ಬಳಿ ಕರಕುಶಲನಗರವನ್ನೇ ಸ್ಥಾಪಿಸಲಾಗಿದೆ. ಇಲ್ಲಿ 1,200 ಕುಟುಂಬಗಳ 2000 ಕಲಾವಿದರು ಇಂದಿಗೂ ಈ ಸುಂದರ ಕಲಾಕೃತಿಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕ್ರಿಯಾಯೋಜನೆ ಸಿದ್ಧಗೊಂಡಿದೆ
ಹೆಸರು ವಾಸಿಯಾಗಿರುವ ಇನ್‌ಲೆ ಕಲೆಗೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ ಸೇರಿದಂತೆ ಹಲವು ಸಮಸ್ಯೆಗಳು ಕಲಾವಿದರನ್ನು ಕಾಡುತ್ತಿವೆ. ಹೀಗಾಗಿ ಸರ್ಕಾರದ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಯೋಜನೆಯಡಿ ಕಲೆ ಉಳಿಸಿಕೊಳ್ಳಲು ಕ್ರಿಯಾಯೋಜನೆ ರೂಪಿಸಲಾಗಿದೆ. ಅನುಮೋದನೆ ದೊರೆತ ತಕ್ಷಣ ಯೋಜನೆ ಜಾರಿಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗುವುದು.
ಟಿ.ದಿನೇಶ್
ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ