ಇನ್ಮುಂದೆ ಬಾಕಿ ಕೇಸ್ ಶೀಘ್ರ ವಿಲೇವಾರಿ

222222
Published on


ವೆಂಕಟರಾಜು ಎಸ್.ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕೋರ್ಟ್‌ನಲ್ಲಿ ಹೆಚ್ಚಿನ ಪ್ರಕರಣ ದಾಖಲಾಗುತ್ತಿದ್ದು, ಹಳೆಯ ಪ್ರಕರಣಗಳೂ ಬಾಕಿ ಇವೆ. ಹೀಗಾಗಿ ಎಲ್ಲ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುವ ಸಲುವಾಗಿ ಇಬ್ಬರು ಹೆಚ್ಚುವರಿ ಉಪವಿಭಾಗಾಧಿಕಾರಿಗಳನ್ನು ನೇಮಕ ಮಾಡಿ ಕಂದಾಯ ಇಲಾಖೆ ಆದೇಶಿಸಿದೆ.
2023 ಜೂನ್‌ನಿಂದ 2024ರ ಆಗಸ್ಟ್‌ವರೆಗೂ ಒಟ್ಟು 1,406 ಪ್ರಕರಣ ಸ್ವೀಕರಿಸಲಾಗಿದೆ. ಆದರೆ 2023 ಜೂನ್ ಆರಂಭದಲ್ಲಿ 6504 ಪ್ರಕರಣ ಇತ್ಯರ್ಥವಾಗುವುದು ಬಾಕಿಯಿತ್ತು. ಆದರೆ 15 ತಿಂಗಳಲ್ಲಿ ಇತ್ಯರ್ಥಗೊಂಡಿರುವ ಪ್ರಕರಣಗಳನ್ನು ಗಮನಿಸಿದರೆ ಪ್ರತಿ ತಿಂಗಳು ಸರಾಸರಿ 250 ಪ್ರಕರಣಗಳನ್ನಷ್ಟೇ ಇತ್ಯರ್ಥಗೊಳಿಸಲಾಗುತ್ತಿದೆ. ಇದರಿಂದ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಉಪವಿಭಾಗಾಧಿಕಾರಿಗಳಿಗೆ ಇದು ಹೊರೆಯಾಗುತ್ತದೆ. ಇದರಿಂದ ಹೆಚ್ಚುವರಿ ಉಪವಿಭಾಗಾಧಿಕಾರಿ ಮೂಲಕ ಈ ಪ್ರಕರಣಗಳ ತ್ವರಿತ ವಿಲೇವಾರಿ ಮಾಡುವ ಪ್ರಯತ್ನಕ್ಕೆ ಕಂದಾಯ ಇಲಾಖೆ ಮುಂದಾಗಿದೆ.


ಎಷ್ಟೆಷ್ಟು ಪ್ರಕರಣ ಬಾಕಿ?: ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಬರುತ್ತಿದೆ. 2023ರ ಜೂನ್ ತಿಂಗಳ ವೇಳೆಗೆ 6,504 ಪ್ರಕರಣಗಳ ಇತ್ಯರ್ಥವಾಗುವುದು ಬಾಕಿ ಇತ್ತು. ಇದೇ ತಿಂಗಳಲ್ಲಿ ಹೊಸದಾಗಿ 203 ಪ್ರಕರಣಗಳು ಸೇರಿ ಒಟ್ಟು ಪ್ರಕರಣಗಳ ಸಂಖ್ಯೆ 6,706ಕ್ಕೆ ಏರಿಕೆ ಕಂಡಿತ್ತು. ಈ ತಿಂಗಳಲ್ಲಿ 173 ಪ್ರಕರಣಗಳು ವಿಲೇವಾರಿಯಾಗುವ ಮೂಲಕ 6,533 ಪ್ರಕರಣಗಳು ಮುಂದಿನ ತಿಂಗಳಿಗೆ ಬಾಕಿ ಉಳಿದಿದ್ದವು. ನಂತರದಲ್ಲಿ 2024ರ ಆಗಸ್ಟ್‌ವರೆಗೂ ಪ್ರತಿ ತಿಂಗಳು ಸರಾಸರಿ 250 ಪ್ರಕರಣಗಳು ವಿಲೇವಾರಿಯಾಗುವ ಮೂಲಕ ಒಟ್ಟು 3,811 ಪ್ರಕರಣಗಳು ಕಳೆದ 15 ತಿಂಗಳಲ್ಲಿ ಇತ್ಯರ್ಥಗೊಂಡಿವೆ. 2024 ಸೆಪ್ಟೆಂಬರ್‌ಗೆ 4,099 ಪ್ರಕರಣಗಳು ಬಾಕಿ ಉಳಿದುಕೊಂಡಿವೆ.
ಡಿಸಿ ಕೋರ್ಟ್‌ನಲ್ಲಿ 654 ಕೇಸ್ ಬಾಕಿ: ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಒಟ್ಟು 4 ಸಾವಿರ ಪ್ರಕರಣಗಳು ವಿಲೇವಾರಿಗೆ ಬಾಕಿ ಉಳಿದಿವೆ. ಆದರೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಈ ಪ್ರಮಾಣ ಕಡಿಮೆಯಿದೆ. 2023ರ ಜೂನ್‌ನಲ್ಲಿ 1,281 ಪ್ರಕರಣಗಳು ಬಾಕಿ ಉಳಿದಿದ್ದವು. ನಂತರದ 15 ತಿಂಗಳ ಅವಧಿಯಲ್ಲಿ ಒಟ್ಟು 439 ಹೊಸ ಪ್ರಕರಣಗಳು ಹೆಚ್ಚಳವಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆಯು 1720ಕ್ಕೆ ಏರಿಕೆ ಕಂಡಿತ್ತು. ಇದರಲ್ಲಿ 1066 ಪ್ರಕರಣಗಳು ವಿಲೇವಾರಿಗೊಂಡಿದ್ದು, ಸದ್ಯ 654 ಪ್ರಕರಣಗಳು ಮಾತ್ರ ಬಾಕಿ ಉಳಿದುಕೊಂಡಿವೆ.


ಸಾರ್ವಜನಿಕರಿಗೆ ಅನುಕೂಲ: ಡಿಸಿ, ಎಸಿ ಕೋರ್ಟ್‌ಗಳಲ್ಲಿನ ಭೂ ವ್ಯಾಜ್ಯ ಸೇರಿ ವಿವಿಧ ಕಂದಾಯ ಇಲಾಖೆ ಪ್ರಕರಣಗಳನ್ನು ತ್ವರಿತ ಇತ್ಯರ್ಥಪಡಿಸುವಂತೆ ಇಲಾಖೆ ಸೂಚನೆ ನೀಡಿದೆ. ಆದರೂ ಕೆಲವೆಡೆ ಇದು ಸಫಲವಾಗಿಲ್ಲ, ದೊಡ್ಡಬಳ್ಳಾಪುರ ಉಪವಿಭಾಗದಲ್ಲೂ ಹೆಚ್ಚಿನ ಪ್ರಕರಣಗಳ ವಿಲೇವಾರಿ ಬಾಕಿಯಿದ್ದು, ಹೆಚ್ಚುವರಿ ಎಸಿಗಳ ನೇಮಕ ಮಾಡಲಾಗಿದೆ. ಈ ಮೂಲಕ ಇಬ್ಬರು ಎಸಿಗಳು ಹಂಚಿಕೊಂಡು ವೇಗವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ತಿಳಿಸಲಾಗಿದೆ. ಸೂಚನೆಯಂತೆ ಪ್ರಕರಣಗಳ ಇತ್ಯರ್ಥ ವೇಗ ಪಡೆದುಕೊಂಡರೆ ಅನೇಕ ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದವರ ಸಂಕಷ್ಟಕ್ಕೆ ಶೀಘ್ರ ಪರಿಹಾರ ದೊರಕಲಿದೆ.
ಯಾರು ಈ ಇಬ್ಬರು ಎಸಿಗಳು?: ಬೆಂಗಳೂರಿನ ಸಂಜಯ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಟ್ರಾಮ ಆ್ಯಂಡ್ ಆರ್ಥೋಪೆಡಿಕ್ಸ್ ಸೆಂಟರ್‌ನ ಮುಖ್ಯ ಆಡಳಿತಾಧಿಕಾರಿ ಡಾ.ಕಿರಣ್ ಎಸ್ ಮತ್ತು ಐಟಿಬಿಟಿ ಇಲಾಖೆ ಆಡಳಿತ ವಿಭಾಗದ ಜನರಲ್ ಮ್ಯಾನೇಜರ್ ಪರ್ಣಿಕಾ ಪವನರಾಮ್ ಅವರನ್ನು ಹೆಚ್ಚುವರಿ ಉಪವಿಭಾಗಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ವ್ಯಾಜ್ಯ ಇತ್ಯರ್ಥಕ್ಕೆ ಇಬ್ಬರಿಗೂ ಆರು ತಿಂಗಳ ಕಾಲಮಿತಿ ನಿಗದಿ ಮಾಡಲಾಗಿದೆ.

ತಹಸೀಲ್ದಾರ್, ಎಸಿ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು. ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ವ್ಯಾಪ್ತಿಯಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಹೆಚ್ಚುವರಿಯಾಗಿ ಅಧಿಕಾರಿಗಳನ್ನು ನೇಮಿಸಿ ಪ್ರಕರಣಗಳನ್ನು ಹಂಚಿಕೆ ಮಾಡಿ ಶೀಘ್ರ ಇತ್ಯರ್ಥ ಪಡಿಸಲು ಕ್ರಮ ವಹಿಸಲಾಗಿದೆ.ಕೃಷ್ಣಬೈರೇಗೌಡ ಕಂದಾಯ ಸಚಿವ (ಇತ್ತಿಚೇಗೆ ಡಿಸಿ ಕಚೇರಿ ಸಭೆಯಲ್ಲಿ ಹೇಳಿದ್ದು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net