

ವಿಜಯವಾಣಿ ಸುದ್ದಿಜಾಲ ಕಾರವಾರ
ಸೀಮೆ ಎಣ್ಣೆ ಸಾಗಣೆ ವೆಚ್ಚ ಪರಿಷ್ಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಡೀಲರ್ ಗಳಿಗೆ ಭರವಸೆ ನೀಡಿದ್ದಾರೆ.
ಪಡಿತರ ಚೀಟಿಗೆ ಸೀಮೆ ಎಣ್ಣೆ ವಿತರಣೆಯಲ್ಲಿ ಜಿಲ್ಲೆಯಲ್ಲಿ ಆಗಿರುವ ಸಮಸ್ಯೆ ಸಂಬಂಧ ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ 9 ತಾಲೂಕುಗಳಿಗೆ ಮಂಗಳೂರಿನಿಂದ ಸೀಮೆ ಎಣ್ಣೆ ಪೂರೈಕೆಯಾಗುತ್ತದೆ.
ಜೊಯಿಡಾ, ದಾಂಡೇಲಿ, ಹಳಿಯಾಳ ತಾಲೂಕುಗಳಿಗೆ ಹುಬ್ಬಳ್ಳಿಯಿಂದ ಸೀಮೆ ಎಣ್ಣೆ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಹುಬ್ಬಳ್ಳಿ ಎಚ್ ಪಿಸಿಎಲ್ ಟರ್ಮಿನಲ್ ಮುಚ್ಚಿದ ಕಾರಣ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಗೋವಾ ಟರ್ಮಿಲ್ ನಿಂದ ಸೀಮೆ ಎಣ್ಣೆ ಎತ್ತುವಳಿ ಮಾಡಿದಲ್ಲಿ ಹೆಚ್ಚುವರಿ ಸಾರಿಗೆ ವೆಚ್ಚವಾಗಲಿದೆ. ಸಾರಿಗೆ ವೆಚ್ಚ ಪರಿಷ್ಕರಿಸಬೇಕು ಎಂಬುದು ಡೀಲರ್ ಗಳ ಬೇಡಿಕೆಯಾಗಿದೆ. ಆ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ಸೀಮೆಎಣ್ಣೆ ಎತ್ತುವಳಿ ಕಾರ್ಯಕ್ಕೆ ಕೆಲವು ಡೀಲರ್ ಗಳು ಆರ್ಥಿಕ ಹೊರೆ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ ಸಗಟು ನಾಮಿನಿದಾರರಿಗೆ ಹೆಚ್ಚುವರಿ ಸೀಮೆಎಣ್ಣೆ ಹಂಚಿಕೆ ಮಾಡಿದ್ದಲ್ಲಿ ಸ್ವಂತ ಲಾರಿಗಳಿಲ್ಲದೆ ಎತ್ತುವಳಿ ಹಾಗೂ ಹಂಚಿಕೆಗೆ ತೊಂದರೆಯಾಗುತ್ತಿದೆ., ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಿ, ಸಾಧ್ಯವಾದಷ್ಟು ಸಮಯದಲ್ಲಿ ಜಿಲ್ಲೆಯಲ್ಲಿ ಸೀಮೆಎಣ್ಣೆ ವಿತರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಸೀಮೆ ಎಣ್ಣೆ ಹಂಚಿಕೆ:
ಪ್ರತಿ ತಿಂಗಳಿಗೆ ಆಯುಕ್ತರು ನೀಡಿದ ಸೀಮೆ ಎಣ್ಣೆ ಹಂಚಿಕೆ ಪ್ರಮಾಣದಲ್ಲಿ ಐಒಸಿ, ಬಿಪಿಸಿ ಮತ್ತು ಎಚ್ ಪಿಸಿ ಕಂಪನಿವಾರು ಹಣ ಬಿಡುಗಡೆ ಮಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸ್ತುತ 4 ಐಒಸಿ 2 ಬಿಪಿಸಿ ಮತ್ತು 3 ಎಚ್ ಪಿಸಿ ಡೀಲರ್ ಗಳು ಕರ್ತವ್ಯ ನಿರ್ವಹಿಸಿಸುತ್ತಿದ್ದು, ಐಒಸಿ ಕಂಪನಿಗೆ 10 ಲೋಡ್, ಬಿಪಿಸಿ ಕಂಪನಿಗೆ 9 ಲೋಡ್ ಮತ್ತು ಎಚ್ ಪಿಸಿ ಕಂಪನಿಗೆ 5 ಲೋಡ್ ಸೀಮೆ ಎಣ್ಣೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ್ ಮಾಹಿತಿ ನೀಡಿದರು. ಸೀಮೆ ಎಣ್ಣೆ ಡೀಲರ್ ಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ವಿಜಯವಾಣಿ ವರದಿ
ಜಿಲ್ಲೆಯಲ್ಲಿ ಪಡಿತರದ ಜತೆ ಸೀಮೆ ಎಣ್ಣೆ ವಿತರಣೆ ಏಪ್ರೀಲ್ ತಿಂಗಳಿಂದ ಸ್ಥಗಿತವಾದ ಬಗ್ಗೆ 'ವಿಜಯವಾಣಿ' ಜು.16 ರಂದು ವಿಶೇಷ ವರದಿ ಪ್ರಕಟಿಸಿ, ಸೀಮೆ ಎಣ್ಣೆ ಇಲ್ಲದ್ದರಿಂದ ಆದ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಬಗ್ಗೆ ಮಾಹಿತಿ ಪಡೆದು, ಸಿಎಂ ಜತೆ ಮಾತನಾಡುವುದಾಗಿ ಭರವಸೆ ನೀಡಿದ್ದರು.
ಪರಿಣಾಮ ಡೀಲರ್ ಗಳಿಗೆ ನೀಡಬೇಕಿದ್ದ ಬಾಕಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಈ ತಿಂಗಳ ಬೇಡಿಕೆಯನ್ನು ಸಲ್ಲಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ ನೀಡಿದ್ದು, ಸೀಮೆ ಎಣ್ಣೆ ಖರೀದಿಯ ವ್ಯತ್ಯಾಸದ ಹಣ ಪಾವತಿಗೆ ಕ್ರಮ ವಹಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ್ ತಿಳಿಸಿದ್ದಾರೆ. ಈ ತಿಂಗಳು ಸೀಮೆ ಎಣ್ಣೆ ಎತ್ತುವಳಿ ಮಾಡುವಂತೆ ಸೂಚಿಸಿದ್ದಾರೆ. ಕೆಲ ತಿಂಗಳಿಂದ ಉಂಟಾದ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿದೆ