ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಜಾಗತಿಕ ಹಬ್ಬ

7
Published on

ಮೈಸೂರು: ಜಗತ್ತಿನ ಮೂಲೆ ಮೂಲೆಯಿಂದ ಬಂದಿದ್ದ ಯುವ ಜನರ ಸಮಾಗಮ, ವಿವಿಧ ದೇಶಗಳ ಸಾಂಪ್ರದಾಯಿಕ ವೇಷಭೂಷಣಗಳು ಅನಾವರಣ, ವಿವಿಧ ಸಾಂಸ್ಕೃತಿಕ ಸಿರಿತನದ ಸಂಭ್ರಮ..!

ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಆಯೋಜಿಸಿರುವ ಜಾಗತಿಕ ಹಬ್ಬ ‘ಅನ್ ಲೀಸ್-2022’ ಕಾರ್ಯಕ್ರಮದಲ್ಲಿ ಶನಿವಾರ ಕಂಡು ಬಂದ ದೃಶ್ಯ ವೈಭವ ಇದು.
‘ಸುಸ್ಥಿರ ಅಭಿವೃದ್ಧಿಗಾಗಿ ನಾವೀನ್ಯತೆ ಪ್ರಯೋಗಾಲಯ’ ಶೀರ್ಷಿಕೆಯಡಿ ಒಂದು ವಾರ ನಡೆಯುವ ಅಂತಾರಾಷ್ಟ್ರೀಯ ಕಾರ್ಯಕ್ರಮಕ್ಕೆ ವರ್ಣರಂಜಿತ ಚಾಲನೆ ದೊರೆಯಿತು. 2017ರಿಂದ ಆರಂಭವಾಗಿರುವ ಅಲ್ ಲೀಸ್ ಉತ್ಸವ ಡೆನ್ಮಾರ್ಕ್, ಸಿಂಗಪುರ, ಚೀನಾದ ಬಳಿಕ ಇಲ್ಲಿ 4ನೇ ಆವೃತ್ತಿ ನಡೆಯಿತು. ಕಾರ್ಪೋರೇಟ್ ಶೈಲಿ ಸಾಂಸ್ಕೃತಿಕ ಉತ್ಸವಕ್ಕೆ ಸ್ವದೇಶಿ ಸ್ಪರ್ಶ ಕಣ್ಮನ ಸೆಳೆಯಿತು.

ಕರೊನಾ ಕಾರಣಕ್ಕೆ ಎರಡು ವರ್ಷ ಸ್ಥಗಿತಗೊಂಡಿದ್ದ ಈ ಸಾಂಸ್ಕೃತಿಕ ಉತ್ಸವ ಹೊಸ ಹುಮ್ಮಸ್ಸಿನಿಂದ ಶುರುವಾಗಿದೆ. ಕೋವಿಡ್‌ನಿಂದ ಕಂಗೆಟ್ಟಿದ್ದ ಯುವ ಮನಸ್ಸುಗಳು ಇಲ್ಲಿ ಸಂಭ್ರಮದಲ್ಲಿ ಮಿಂದೆದ್ದರು. 167 ದೇಶಗಳ 5 ಸಾವಿರ ಯುವಜನರು ಜಮಾವಣೆಗೊಂಡಿದ್ದರು. ಭಾಗವಹಿಸಿದ್ದ 993 ಪ್ರತಿಭಾವಂತ ತಂತ್ರಜ್ಞರ ಪೈಕಿ 515 ಜನ ವಿದೇಶಿಯರು, 478 ಜನ ಭಾರತೀಯರು. ಇವರಲ್ಲಿ ನವೋದ್ಯಮ ನಗರಿ ಬೆಂಗಳೂರಿನ 90 ಜನರು, ಬೆಂಗಳೂರಿಗೆ ಹೊರತಾದ ಭಾಗದ 19 ಜನರು ಇದ್ದರು. ಇದರೊಂದಿಗೆ ವಿವಿಧ ದೇಶಗಳ ಸಾಂಸ್ಕೃತಿಕ ಲೋಕವೂ ಇಲ್ಲಿ ತೆರೆದುಕೊಂಡಿತ್ತು. ಪರಸ್ಪರ ಚರ್ಚೆ, ಸಂವಾದ ಮೂಲಕ ಜ್ಞಾನ ವಿನಿಯಮವೂ ನಡೆಯಿತು.

ಸಾಂಪ್ರದಾಯಿಕ ನೃತ್ಯ:
‘ಒಂದು ಭಾರತ, ಹಲವು ವೈವಿಧ್ಯತೆ’ ಇಲ್ಲಿ ಅನಾವರಣಗೊಂಡಿತು. ಪಂಜಾಬಿ, ಮರಾಠಿ, ಗುಜರಾತಿ, ರಾಜಸ್ಥಾನಿ…ಹೀಗೆ ವಿವಿಧ ರಾಜ್ಯಗಳ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಲಾಯಿತು. ಆಗ ಇಡೀ ಭಾರತವೇ ಇಲ್ಲಿ ನೆರೆದಿದೆಯೇನೋ ಎಂಬ ಭಾವ ಮೂಡಿತು. ರಾಜ್ಯದ ಯಕ್ಷಗಾನ, ಕಂಸಾಳೆ ನರ್ತನವೂ ಗಮನ ಸೆಳೆಯಿತು. ಕೊನೆಯಲ್ಲಿ ಎಲ್ಲ ಸಾಂಸ್ಕೃತಿಕ ಕಲಾವಿದರು ಏಕಕಾಲಕ್ಕೆ ನೃತ್ಯ ಮಾಡಿ ನೆರೆದಿದ್ದವರನ್ನು ರೋಮಾಂಚನಗೊಳಿಸಿದರು. ಕೇವಲ ಐದಾರು ನಿಮಿಷದಲ್ಲಿ ನಡೆದ ಈ ಪ್ರಸ್ತುತಿ ಸೊಗಸಾಗಿ ಮೂಡಿ ಬಂದಿದ್ದರಿಂದ ಸಭಿಕರೆಲ್ಲ ಎದ್ದುನಿಂತು ಚಪ್ಪಾಳೆ ತಟ್ಟಿ, ಸಡಗರದಿಂದ ಕೇಕೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net