ಇನ್ನೊಬ್ಬರ ಮಾತು ಕೇಳುವ ಸಂಸ್ಕೃತಿ ಇರಬೇಕು

17-08-Shiva-2
ರಾಯಚೂರಿನ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಎಸ್‌ಬಿಇಆರ್‌ಡಿ ಸೊಸೈಟಿಯಿಂದ ಗುರುವಾರ ಏರ್ಪಡಿಸಿದ್ದ ಯುವ ಜಾಗೃತಿ ಯಾತ್ರೆ ಉಪನ್ಯಾಸ ಕಾರ್ಯಕ್ರಮವನ್ನು ರಾಯಚೂರು ವಿವಿ ಸಿಂಡಿಕೇಟ್ ಸದಸ್ಯ ಶಿವಬಸಪ್ಪ ಮಾಲಿಪಾಟೀಲ್ ಉದ್ಘಾಟಿಸಿದರು. ಸಾಹಿತಿ ಪ್ರೊ.ಸಿದ್ದು ಯಾಪಲಪರ್ವಿ, ಯುವ ಗಾಯಕಿ ಮೋನಮ್ಮ ಸೋಮನಮರಡಿ, ಸೇವಾ ಸಂಸ್ಥೆ ಅಧ್ಯಕ್ಷ ಪಿ.ಬಸವರಾಜ, ಎಸ್‌ಬಿಎಆರ್‌ಡಿ ಸೊಸೈಟಿ ಅಧ್ಯಕ್ಷ ಡಾ.ಶರಣಬಸವ ಪಾಟೀಲ್, ಕಾರ್ಯದರ್ಶಿ ಎಲಿ ಬಸವರಾಜ, ಪ್ರಾಚಾರ್ಯ ಎಂ.ಜಿ.ಮಾರುತಿ, ಮುಖ್ಯಗುರುಗಳಾದ ವೀರೇಂದ್ರ ಪಾಟೀಲ್, ಮಂಜುಳಾ ಹಿರೇಮಠ, ಹಸೀನಾ ಬಾಬು ಇದ್ದರು.
Published on

ರಾಯಚೂರು: ಬೇರೆಯವರ ಮಾತು ಕೇಳುವ ಸಮಾಧಾನ ಮತ್ತು ಸಂಸ್ಕೃತಿ ಇರಬೇಕು. ಜತೆಗೆ ಮತ್ತೊಬ್ಬರಿಗೆ ಸರಿಯಾಗಿ ಕೇಳಿಸುವಂತೆ ಹಾಗೂ ಅವರು ಕೇಳುವಂತೆ ಮಾತನಾಡುವ ಕಲೆ ಅರಿತುಕೊಳ್ಳಬೇಕು ಗದಗನ ಸಾಹಿತಿ ಪ್ರೊ.ಸಿದ್ದು ಯಾಪಲಪರ್ವಿ ಹೇಳಿದರು.
ಸ್ಥಳೀಯ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಎಂ.ಪಿ.ಪ್ರಕಾಶ ಪಿಯು ಕಾಲೇಜು, ಪಿಸಿಪಿಬಿ ಪದವಿ ಕಾಲೇಜು, ಎಸ್‌ಇಸಿಟಿ ಸ್ನಾತಕೋತ್ತರ ಕಾಲೇಜು ಹಾಗೂ ವಿಕಾಶ ಅಕಾಡೆಮಿಯಿಂದ ಗುರುವಾರ ಏರ್ಪಡಿಸಿದ್ದ ಯುವ ಜಾಗೃತಿ ಯಾತ್ರೆ ಉಪನ್ಯಾಸ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮತನಾಡಿದರು.
ತಂತ್ರಜ್ಞಾನದ ಜತೆಗೆ ಹೊಂದಿಕೊಂಡು ನಡೆಯದಿದ್ದರೆ ನಾವು ಔಟ್‌ಡೇಟೆಡ್ ಆಗುತ್ತೇವೆ. ನಮ್ಮ ವಿದ್ಯಾರ್ಥಿಗಳು ಶೇ.90ರಷ್ಟು ಅಂಕ ತೆಗೆದುಕೊಂಡರೂ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ನಮ್ಮ ಭಾಗದವರಲ್ಲಿ ಕೇಳುವ ಸಹನೆಯಿಲ್ಲದಿರುವುದು ಕಾರಣವಾಗಿದೆ.
ನಾವು ಕಲಿಯಬೇಕು ಎನ್ನುವ ಹಠಕ್ಕೆ ಬಿದ್ದರೆ ಮಾತ್ರ ಕಲಿಯುತ್ತೇವೆ. ಅದಕ್ಕೆ ವಿಶ್ವದ ಇತರ ರಾಷ್ಟ್ರಗಳಲ್ಲಿ ಪ್ರಮುಖ ಹುದ್ದೆಗಳಲ್ಲಿರುವವರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು ಭಾರತೀಯರಾಗಿರುವುದು ಸಾಕ್ಷಿಯಾಗಿದೆ. ನಮ್ಮ ಇರುವ ಶಕ್ತಿ ಸಾಮರ್ಥ್ಯವನ್ನು ಬಳಸಿಕೊಂಡು ಮುಂದೆ ಬರಬೇಕು ಎಂದು ಪ್ರೊ.ಸಿದ್ದು ಯಾಪಲಪರ್ವಿ ತಿಳಿಸಿದರು.
ರಾಯಚೂರಿ ವಿವಿ ಸಿಂಡಿಕೇಟ್ ಸದಸ್ಯ ಶಿವಬಸಪ್ಪ ಮಾಲಿಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜ್ಞಾನ ಬೆಳೆಸಿಕೊಳ್ಳಬೇಕು. ವಿಶ್ವ, ರಾಷ್ಟ್ರ, ನಮ್ಮ ಸುತ್ತಮುತ್ತಲು ನಡೆಯುವ ವಿಷಯಗಳ ಬಗ್ಗೆ ಜ್ಞಾನ ಇರಬೇಕು.
ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಅವಕಾಶಗಳಿವೆ. ಆದರೆ ನಮ್ಮವರಿಗೆ ಶಿಕ್ಷಕರು, ಪೊಲೀಸರು ಮಾತ್ರ ಗೊತ್ತು. ರೈಲ್ವೆ, ಸೇನೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಇರುವ ಅವಕಾಶಗಳನ್ನು ಬಳಸಿಕೊಳ್ಳಲು ಮುಂದಾಗಬೇಕು. ಅದಕ್ಕೆ ಅಚಲ ವಿಶ್ವಾಸ, ನಿರಂತರ ಪ್ರಯತ್ನ ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಹಾಗೂ ಎಸ್‌ಬಿಇಆರ್‌ಡಿ ಸೊಸೈಟಿ ಅಧ್ಯಕ್ಷ ಡಾ.ಶರಣಬಸವ ಪಾಟೀಲ್ ಜೋಳದಹೆಡಗಿ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯ ಮಾತ್ರವಲ್ಲ ಪಠ್ಯೇತರ ವಿಷಯಗಳಲ್ಲಿ ಮುಂದಿದ್ದಾರೆ. ಕಳೆದ ವರ್ಷ ಸ್ನಾತಕೋತ್ತರ ವಿಭಾಗದಲ್ಲಿ ಐದು ಚಿನ್ನದ ಪದಕ ಹಾಗೂ ರ‌್ಯಾಂಕ್ ತರುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯುವ ಗಾಯಕಿ ಮೋನಮ್ಮ ಸೋಮನಮರಡಿ, ಸೇವಾ ಸಂಸ್ಥೆ ಅಧ್ಯಕ್ಷ ಪಿ.ಬಸವರಾಜ, ಎಸ್‌ಬಿಎಆರ್‌ಡಿ ಸೊಸೈಟಿ ಕಾರ್ಯದರ್ಶಿ ಎಲಿ ಬಸವರಾಜ, ಪ್ರಾಚಾರ್ಯ ಎಂ.ಜಿ.ಮಾರುತಿ, ಮುಖ್ಯಗುರುಗಳಾದ ವೀರೇಂದ್ರ ಪಾಟೀಲ್, ಮಂಜುಳಾ ಹಿರೇಮಠ, ಹಸೀನಾ ಬಾಬು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net